ದಾವಣಗೆರೆ

ಲಾಬಿಗೆ ಮಣಿಯದೆ ಅನುದಾನ ಬಳಸಿ

Published On :

ಮೊಳಕಾಲ್ಮುರು: ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಕ್ಷೇತ್ರದ ಜನತೆಗೆ ಸರ್ಕಾರ ನೀಡಿರುವ ಅನುದಾನವನ್ನು ಯಾವುದೇ ರಾಜಕೀಯ ಲಾಬಿಗೆ ಮಣಿಯದೆ ಕ್ರಿಯಾತ್ಮಕವಾಗಿ ಯೋಜನೆ ರೂಪಿಸುವ ಮೂಲಕ ಸಾರ್ವಜನಿಕರ ಸೇವೆ ಮಾಡಬೇಕೆಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತಮ ಸೇವೆ ಒದಗಿಸಿ: ಪಟ್ಟಣದ ಶಾಸಕರ ಕೊಠಡಿಯಲ್ಲಿ ಕರೆದಿದ್ದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಡವರು ಕಟ್ಟಿದ ತೆರಿಗೆ ಹಣದಲ್ಲಿಯೇ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು, ಬಂದಿರುವ ಅನುದಾನವನ್ನು ವ್ಯವಸ್ಥಿತವಾಗಿ, ಜನ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯದೆ ನಿಮ್ಮ ವ್ಯಾಪ್ತಿಯಲ್ಲಿ ಬರುವ ಕಾನೂನಿನ ಅಧಿಕಾರವನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಹೇಳಿದರು.
ಸಮಸ್ಯೆಗೆ ಸ್ಪಂದಿಸಿ: ಸರ್ಕಾರ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಅಧಿಕಾರಿಗಳನ್ನು ನಿಯೋಜಿಸಿದರೆ ನೀವು ಯಾವತ್ತೂ ಹಳ್ಳಿಗಳಿಗೆ ಭೇಟಿ ನೀಡದೆ ಕೇವಲ ಜಿಲ್ಲಾ ಮಟ್ಟದ ಸಭೆಗಳ ಕಡೆಗೆ ಗಮನ ಹರಿಸುವುದು ಸೂಕ್ತವಲ್ಲ ಎಂದು ಇಓ ಅಂಜನಕುಮಾರ್‌ಗೆ ತಿಳಿಸಿದ ಅವರು, ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿಯನ್ನು ಅರಿತು ಜನರ ಅಹವಾಲನ್ನು ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸುವುದು ನಿಮ್ಮ ಅದ್ಯ ಕರ್ತವ್ಯ. ಸಾರ್ವಜನಿಕರಿಗಾಗಿಯೇ ನಿಮ್ಮನ್ನು ನಿಯೋಜಿಸಿದ್ದಾರೆಂಬುದನ್ನು ಅರಿಯಬೇಕೆಂದು ತಿಳಿಸಿದರು.
ಸಮರ್ಪಕವಾಗಿ ಜಾರಿ: ಸರ್ಕಾರದಿಂದ ಮಂಜೂರಾದ ಹಣದಲ್ಲಿ ಸತ್ಯ ಮತ್ತು ವಸ್ತು ನಿಷ್ಠ ವರದಿ ತಯಾರಿಸಿ ಕಾರ್ಯಕ್ರಮದ ಯಶಸ್ವಿಗೆ ಕಟಿಬದ್ಧರಾಗಬೇಕು. ಕ್ಷೇತ್ರದ ಜನತೆ ಮಾಡಲು ಉದ್ಯೋಗವಿಲ್ಲದೆ ಗುಳೆ ಹೋಗುವಂತಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿ ಕಾಮಗಾರಿಗಳು ಯಾವುದೇ ಮಧ್ಯವರ್ತಿಗಳ ಕೈ ಸೇರದ ಹಾಗೇ ನಿಭಾಯಿಸಬೇಕು. ಕೆಲಸವಿಲ್ಲದ ಇಲ್ಲಿನ ಜನತೆಗೆ ಮಾನವೀಯತೆಯಿಂದಾದರೂ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಪರಿಪೂರ್ಣವಾಗಿ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಜಾಬ್ ಕಾರ್ಡ್ ಗುತ್ತಿಗೆದಾರರ ಕೈಯಿಂದ ಖರೀದಿಸಲಾಗುತ್ತಿದೆ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ. ಗ್ರಾಪಂಗಳಲ್ಲಿ ಉದ್ಯೊಗ ಖಾತ್ರಿ ಯೋಜನೆ  ಅನುಷ್ಠಾನದಲ್ಲಿ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚಿನ ಕ್ರಿಯಾ ಯೋಜನೆ ರೂಪಿಸಬಾರದೆಂದು ತಿಳಿಸಿದರು.
ರಸ್ತೆ ಅಗಲೀಕರಣ: ಕೊಂಡ್ಲಹಳ್ಳಿ ಗ್ರಾಮಕ್ಕೆ ದುಪ್ಪಿ ಕೆರೆಯಿಂದ 60 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರದಿಂದ ಐಎಂಎಸ್ ಫೀಡ್ ಆಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಂಗಯ್ಯನದುರ್ಗ ಜಲಾಶಯದಿಂದ 16 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಎಇಇ ಶ್ರೀನಿವಾಸ್ ತಿಳಿಸಿದರು. ನಗರೋತ್ಥಾನ ಯೋಜನೆಯಲ್ಲಿ ಉದ್ದೇಶಿಸಲಾಗಿರುವ ಪಟ್ಟಣದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರನ್ನು ಕರೆಯಿಸಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಶಾಸಕರು ಪಪಂ ಮುಖ್ಯಾಧಿಕಾರಿ ಮಹಬೂಬ್ ಅವರಿಗೆ ಸೂಚಿಸಿದರು ಮತ್ತು 10 ಲಕ್ಷ ಅನುದಾನದಲ್ಲಿ ಕ್ಷೇತ್ರದ 5 ಗ್ರಾಮಗಳಾದ ಕೋನಾಪುರ, ಬೊಮ್ಮದೇವರಹಳ್ಳಿ, ತುಮಕೂರಲಹಳ್ಳಿ ಮಾಚೇನಹಳ್ಳಿ ಹಾಗೂ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮಗಳಲ್ಲಿ ವಾಲ್ಮಿಕಿ ಭವನ ಮಂಜೂರಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
 ಸಭೆಯಲ್ಲಿ ಬಿಇಓ ಉಮಾದೇವಿ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.