260 ರೋಗಗ್ರಸ್ಥ ಹಾಸ್ಟೆಲ್ಗೆ ಕಾಯಕಲ್ಪ ನೀಡಿ
ದಾವಣಗೆರೆ: ರಾಜ್ಯದ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗಗಳ ಸುಮಾರು 270ಕ್ಕೂ ಅಧಿಕ ವಿದ್ಯಾರ್ಥಿ ನಿಲಯಗಳು ಮೂಲ ಸೌಕರ್ಯ ವಂಚಿತವಾಗಿ ನಲುಗುತ್ತಿದೆ. ಅವುಗಳ ಕಾಯಕಲ್ಪಕ್ಕೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡದ ರಾಜ್ಯ ಸರ್ಕಾರದ ಕ್ರಮವನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಎಸ್ಸಿ, ಎಸ್ಟಿ, ಬಿಸಿಎಂ ಹಾಸ್ಟೆಲ್ ಸರ್ವೇಕ್ಷಣಾ ಸಮಿತಿ ರಾಜ್ಯ ಸಂಚಾಲಕ ರಾಜೇಶ ಗುರಾಣಿ, ಸರ್ಕಾರಿ ಹಾಸ್ಟೆಲ್ಗಳಂತೂ ದನದ ದೊಡ್ಡಿ, ಹಂದಿಗೂಡಿಗಿಂತಲೂ ಕಡೆಯಾಗಿದೆ. ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಂಕಷ್ಟಗಳ ಮಧ್ಯೆ ನಲುಗುವಂತಾಗಿದೆ ಎಂದರು.
ಹಾಸ್ಟೆಲ್ಗಳಲ್ಲಿ ಪಲಾವ್, ಅವಲಕ್ಕಿ, ಚಿತ್ರಾನ್ನ, ಇಡ್ಲಿ- ಸಾಂಬಾರ್ ಹೀಗೆ ಮೆನು ಚಾರ್ಟ್ ಇದ್ದರೂ ತಿನ್ನಲಿಕ್ಕೂ ಆಗದ ಅಹಾರ ನೀಡಲಾಗುತ್ತಿದೆ. ಸುಮಾರು 32,916 ವಿದ್ಯಾರ್ಥಿಗಳು 260 ಹಾಸ್ಟೆಲ್ಗಳಲ್ಲಿದ್ದಾರೆ. ಇಷ್ಟಿದ್ದರೂ ಹಾಸ್ಟೆಲ್ಗೆ ಇರುವುದು ಕೇವಲ 1502 ಶೌಚಾಲಯ. 3291 ಶೌಚಾಲಯಗಳ ಕೊರತೆ ಇದೆ. 1639 ಸ್ನಾನ ಗೃಹವಿದ್ದರೂ 1 ಸ್ನಾನ ಗೃಹವನ್ನು 20 ವಿದ್ಯಾರ್ಥಿಗಳು ಸರದಿಯಲ್ಲಿ ಬಳಸಬೇಕು. ಅನೇಕ ಕಡೆ ವಿದ್ಯಾರ್ಥಿಗಳು ಬಯಲಲ್ಲೇ ಸ್ನಾನ ಮಾಡಬೇಕಾಗಿದೆ ಎಂದು ದೂರಿದರು.
ಸ್ವಚ್ಛತೆ ಮರೀಚಿಕೆ: ಶೇ.20 ಹಾಸ್ಟೆಲ್ಗೆ ಅಡುಗೆ ಮನೆ ಇಲ್ಲ. ಶೇ.22 ಕಡೆ ಖಾಯಂ ನಿಲಯ ಪಾಲಕರಿಲ್ಲ. ಒಬ್ಬ ವಾರ್ಡನ್ 162 ವಿದ್ಯಾರ್ಥಿಗಳನ್ನು ಕಾಯಬೇಕು. ಶೇ.40 ಹಾಸ್ಟೆಲ್ಗೆ ಪರಿಚಾರಕರಿಲ್ಲ.
ಶೇ.100 ಆರೋಗ್ಯ ತಪಾಸಣೆ ಸೌಕರ್ಯವಿಲ್ಲ. ಶೇ.5 ಹಾಸ್ಟೆಲ್ಗೆ ಮಾತ್ರ ಕಾವಲುಗಾರರಿದ್ದು, ಶೇ.95 ಕಡೆ ವಾಚ್ಮನ್ ಇಲ್ಲ. ಕಿಡಿಗೇಡಿಗಳ ಹಾವಳಿಯಿಂದಾಗಿ ವಿದ್ಯಾರ್ಥಿನಿಯರ ಪಾಡಂತೂ ಹೇಳತೀರದಂತಾಗಿದೆ. ಶೇ.50 ಹಾಸ್ಟೆಲ್ಗೆ ಖಾಯಂ ಅಡುಗೆಯವರಿಲ್ಲ. ಶೇ.80ರಷ್ಟು ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ವಿವರಿಸಿದರು.
ಜ್ವಲಂತ ಸಮಸ್ಯೆಗಳು: ವಿದ್ಯಾರ್ಥಿ ನಿಲಯಗಳ ಪೈಕಿ ಶೇ.10ಕ್ಕೆ ಮಾತ್ರ ಉತ್ತಮ ನೀರು ಸಿಗುತ್ತಿದೆ. ಶೇ.35 ಹಾಸ್ಟೆಲ್ನಲ್ಲಿ ಮಧ್ಯಮ ಮಟ್ಟದ ಅನ್ನ, ನೀರು, ಶೇ.55 ಹಾಸ್ಟೆಲ್ನಲ್ಲಿ ಕಳಪೆ ಆಹಾರ, ನೀರು ನೀಡುತ್ತಿದೆ. ಮೇಜು, ಕುರ್ಚಿ, ಸೋಲಾರ್, ಫ್ಯಾನ್, ಗ್ರಂಥಾಲಯ, ಕಂಪ್ಯೂಟರ್, ಯುಪಿಎಸ್, ಇಂಟರ್ನೆಟ್, ಕ್ರೀಡಾ ಸಾಮಗ್ರಿ, ಟಿವಿ ಬಹುತೇಕ ಹಾಸ್ಟೆಲ್ಗೆ ಇಲ್ಲ. ಅನೇಕ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವಿಲ್ಲ. ಊರ ಹೊರಗೆ ಹಾಸ್ಟೆಲ್ ಇದ್ದರೆ, ಮತ್ತೆ ಕೆಲವು ಯಾವಾಗ ಕುಸಿದು ಬೀಳುತ್ತದೋ ಎಂಬಷ್ಟು ಶಿಥಿಲಗೊಂಡಿವೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲೂ ಸಮಸ್ಯೆ ಇಲ್ಲವೆಂದೇನಲ್ಲ. ಇಲ್ಲೂ ಅನೇಕ ಸಮಸ್ಯೆಗಳಿವೆ. ಹಾಸ್ಟೆಲ್ ಪ್ರವೇಶಕ್ಕೆ 1.30 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದೆ. 97,084 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಶೇ.26 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. 260 ಹಾಸ್ಟೆಲ್ ಪೈಕಿ 140 ಸ್ವಂತ ಸೂರು ಹೊಂದಿದ್ದರೆ, 120 ಬಾಡಿಗೆ ಕಟ್ಟಡದಲ್ಲಿವೆ. ವರ್ಷಕ್ಕೆ ರು. 3.60 ಕೋಟಿಗೂ ಅಧಿಕ ಹಣ ಬಾಡಿಗೆಗೆ ನೀಡಲಾಗುತ್ತಿದೆ. 10 ವರ್ಷಕ್ಕೆ ರು. 36 ಕೋಟಿ, 25 ವರ್ಷಕ್ಕೆ ನೂರಾರು ಕೋಟಿ ಹಣ ಬಾಡಿಗೆಗೆಂದೇ ಸರ್ಕಾರ ಸುರಿಯುತ್ತಿದೆ ಎಂದು ಟೀಕಿಸಿದರು.
ಎಬಿವಿಪಿ ಮುಖಂಡರಾದ ಚನ್ನಬಸಪ್ಪ ಮಾಳಿ, ಕೆ.ಎನ್. ರಾಜಶೇಖರ, ಚನ್ನಗಿರಿ ಪ್ರದೀಪ, ಹಲಕನಾಳ್ ರಾಕೇಶ್, ಚನ್ನಗಿರಿ ಶೃತಿ, ಶಿವಾನಂದ, ವಿನಯ್ ಮತ್ತಿತರರು ಇದ್ದರು. ರಾಜೇಶಶ ಗುರಾಣಿ ಎಬಿವಿಪಿಯಿಂದ ರಾಜ್ಯದ ಎಸ್ಸಿ, ಎಸ್ಟಿ, ಓಬಿಸಿ ಹಾಸ್ಟೆಲ್ ಸಮೀಕ್ಷೆಯ ರೋಗಗ್ರಸ್ಥ ಹಾಸ್ಟೆಲ್ಗಳು, ಅನ್ನ- ಅಕ್ಷರ ವಸತಿ ಲೋಕದ ನರಕ ಸ್ಥಿತಿ ಸಾರುವ ಪುಸ್ತಕ ಬಿಡುಗಡೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

