ದಾವಣಗೆರೆ

ಪರಿಸರ ಸಂರಕ್ಷಣೆಗೆ ಒತ್ತು ನೀಡಿ

Published On :

ದಾವಣಗೆರೆ: ಸಕಲ ಜೀವರಾಶಿಗೂ ಅನಿವಾರ್ಯವಾದ ಸಸ್ಯ ಸಂಪತ್ತನ್ನು ನಾಶಪಡಿಸುವ ಮೂಲಕ ಸಂಕಷ್ಟ, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತಹ ಕೆಲಸ ಮಾಡುತ್ತಿದ್ದೇವೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ ಆತಂಕ ವ್ಯಕ್ತಪಡಿಸಿದರು.
ನಗರದ ಎವಿಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮಾನವ ಕಲ್ಯಾಣದಲ್ಲಿ ಜೈವಿಕ ತಂತ್ರಜ್ಞಾನ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಲಿನ ನಗರೀಕರಣದ ಭರದಲ್ಲಿ ದೊಡ್ಡ ದೊಡ್ಡ ಮರಗಳನ್ನು ಕಡಿದು ಹಾಕುವ ಮೂಲಕ ಪರಿಸರವನ್ನೂ ನಾವೇ ಹಾಳು ಮಾಡುತ್ತಿದ್ದೇವೆ ಎಂದರು.
ಒಂದಲ್ಲಾ ಒಂದು ಕಾರಣ: ಮರಗಳನ್ನು ಕಡಿದರೆ ಒಂದು ಜೀವವನ್ನೇ ನಾಶ ಮಾಡಿದಂತೆ ಎಂಬ ಅರಿವು ನಮಗಿರಬೇಕು. ದಾವಣಗೆರೆ ನಗರದಲ್ಲಿ ರಸ್ತೆ ಬದಿಯಲ್ಲಿದ್ದ ನೂರಾರು ಮರ ಕಡಿಯುತ್ತಲೇ ಬಂದಿದ್ದು, ಇನ್ನೂ ಕೂಡ ಮರ ತೆರವುಗೊಳಿಸುವ ಕೆಲಸ ಆಗಾಗ ನಡೆಯುತ್ತಲೇ ಇದೆ. ರಸ್ತೆ ಅಭಿವೃದ್ಧಿಗಾಗಿ, ಕಟ್ಟಡದ ನಿರ್ಮಾಣಕ್ಕೆ ಹೀಗೆ ಒಂದಲ್ಲ ಒಂದು ಕಾರಣ, ನೆಪವೊಡ್ಡಿ ಮರಗಳ ನಾಶಕ್ಕೂ ನಾವೇ ಕಾರಣರಾಗುತ್ತಿದ್ದೇವೆ ಎಂದು ಅವರು ವಿಷಾದಿಸಿದರು.
ಹಲವಾರು ಪರಸರ ಪ್ರೇಮಿ ಸಂಘಟನೆಗಳ ಮರ ಕಡಿಯದಂತೆ ಬೀದಿಗಿಳಿದು ಹೋರಾಡಿವೆ. ಮತ್ತೆ ಕೆಲವು ಸಂಘಟನೆಗಳು ಕಾನೂನು ಹೋರಾಟವನ್ನೂ ನಡೆಸುತ್ತಿವೆ. ಹೀಗಿದ್ದರೂ ವೃಕ್ಷಗಳ ಹನನ ಮಾತ್ರ ನಿಂತಿಲ್ಲ ಎಂದರು.
ಹಿರಿಯ ಜಾನಪದ ತಜ್ಞ, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಭಾರತ ಕೃಷಿ ಪ್ರಧಾನ ರಾಷ್ಟ್ರ. ಇತ್ತೀಚಿನ ದಿನಮಾನಗಳಲ್ಲಿ ದೇಶ ಜೈವಿಕ ತಂತ್ರಜ್ಞಾನದಿಂದಾಗಿ ಕೈಗಾರಿಕಾ ಪ್ರಧಾನವಾಗುತ್ತಿದೆ. ವಿಜ್ಞಾನವನ್ನು ವಿಜ್ಞಾನವಾಗಿ ಅಭ್ಯಾಸ ಮಾಡದೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಪರಿಣಾಮ ವ್ಯವಸಾಯ ಮರೆತು, ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದರು.
ದೇಶದ ಶಕ್ತಿ ಅಡಗಿರುವುದೇ ಕೃಷಿಯಲ್ಲಿ. ಪಾರಂಪರಿಕ ಕೃಷಿ ಪದ್ಧತಿ ನಾವು ಮರೆಯುತ್ತಿದ್ದೇವೆ. ಸಾವಯವ, ನೈಸರ್ಗಿಕ ಕೃಷಿ ಹೀಗೆ ವಿಭಿನ್ನ, ಪಾರಂಪರಿಕ ಕೃಷಿ ಚಟುವಟಿಕೆ ಕಣ್ಮರೆಯಾಗುತ್ತಿವೆ ಆತಂಕ ವ್ಯಕ್ತಪಡಿಸಿದರು.
ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಕಾಲೇಜು ಪ್ರಾಚಾರ್ಯ ಪ್ರೊ. ರಂಗಸ್ವಾಮಿ, ಬಯೋಕೆವುಸ್ಟ್ರಿ ವಿಭಾಗದ ಪ್ರೊ. ಡಿ.ಎನ್. ರಾವ್, ಧರಾಮ ವಿಜ್ಞಾನ ಕಾಲೇಜಿನ ಪ್ರೊ. ಆರ್. ವನಜಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.