11ರಿಂದ ಬೇಸಿಗೆ ಶಿಬಿರ
ಧಾರವಾಡ: ಮಾಳಾಪುರ ಮಹೇಜ್ ಎಜ್ಯೂಕೇಶನ್ ಸೋಸೈಟಿ ವತಿಯಿಂದ ಶಾಲಾ ಮಕ್ಕಳಿಗಾಗಿ ಏ. 11ರಿಂದ 30ರ ವರೆಗೆ ಇಲ್ಲಿನ ಕಿಡ್ಸ್ ಕ್ಯಾಂಪಸ್ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಗ್ರಾಮರ್, ಕ್ರಾಫ್ಟ್, ಪೇಟಿಂಗ್, ಡ್ರಾಯಿಂಗ್, ರಂಗೋಲಿ, ಡ್ಯಾನ್ಸ್, ಆಟೋಟಗಳು ಹೀಗೆ ಅನೇಕ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಮಾಹಿತಿಗೆ 0836ಟ 6452868 ಸಂಪರ್ಕಿಸಿ.
ಮುಖ್ತಾರ ಅಹ್ಮದಗುಳಗುಂದಿಗೆ ಪಿಎಚ್.ಡಿ
ಧಾರವಾಡ: ಇಲ್ಲಿಯ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಮುಖ್ತಾರ ಅಹ್ಮದ ಗುಳಗುಂದಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಕವಿವಿ ಹಿಂದಿ ವಿಭಾಗದ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಎಸ್.ಎಸ್. ಮುಮ್ಮಿಗಟ್ಟಿ ಅವರ ಮಾರ್ಗದರ್ಶನದಲ್ಲಿ 'ಮೆಹರುನ್ನೀಸಾ ಪರವೇಜ್ ಔರ್ ಸಾರಾ ಅಬೂಬಕರ್ ಕಾ ಕಥಾ ಸಾಹಿತ್ಯ: ಏಕ್ ತುಲನಾತ್ಮಕ್ ಅಧ್ಯಯನ್.' ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಗುಳಗುಂದಿ ಅವರಿಗೆ ಪಿಎಚ್.ಡಿ ಪದವಿ ನೀಡಲಾಗಿದೆ.
ಉಪಾಧ್ಯಕ್ಷರಾಗಿ ನೇಮಕ
ಧಾರವಾಡ: ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ಸಮಿತಿಯ ತಾಲೂಕು ಉಪಾಧ್ಯಕ್ಷರನ್ನಾಗಿ ಶಿವಾನಂದ ಹಿರೇಮಠ ಅವರನ್ನು ಸಮಿತಿಯ ತಾಲೂಕು ಅಧ್ಯಕ್ಷ ರವಿ ಮಾರುತಿ ಲೋಲಿ ಶುಕ್ರವಾರ ನೇಮಕಗೊಳಿಸಿದರು. ಶಿವಾನಂದ ಅವರು ಜನಸೇವಕರಾಗಿ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ ಸಮರ್ಥವಾಗಿ ಹೋರಾಡುವ ನಾಯಕತ್ವ ಗುಣ ಹೊಂದಿದ್ದಾರೆ. ಹೀಗಾಗಿ ಅವರನ್ನು ಸಮಿತಿ ತಾಲೂಕು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳಿಗೆ ಸಂಸ್ಕಾರ ನೀಡಿ
ಧಾರವಾಡ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿದ್ದು, ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಮಕ್ಕಳಿಗೆ ನೀಡಿ ಮಕ್ಕಳ ಕನಸಿಗೆ ಬೆಂಬಲವಾಗಿಬೇಕು ಎಂದು ಖ್ಯಾತ ಮನೋರೋಗ ತಜ್ಞ ಆನಂದ ಪಾಡುರಂಗ ಹೇಳಿದರು. ಇಲ್ಲಿನ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಶನಿವಾರ ವಚನ ಟ್ರಸ್ಟ್.ನ ಇಂಟರ್.ನ್ಯಾಶನಲ್ ಮೌಂಟಿಸರಿ ಸ್ಕೂಲ್ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ತಮ್ಮ ಕನಸನ್ನು ನೇರವೇರಿಸುವಂತೆ ಒತ್ತಡ ಹಾಕಬಾರದು. ಪ್ರತಿಯೊಂದು ಮಗು ತನ್ನದೆ ಆದ ಸಾಮರ್ಥ್ಯ ಹೊಂದಿರುತ್ತದೆ ಎಂದರು. ಈ ಸಂದರ್ಭ ನೀತು ಆರ್ ಉಳ್ಳಾರ, ವಿಶ್ವನಾಥ ಅಮರಶೆಟ್ಟಿ, ಕ್ಷಮಾ ಸಣ್ಣರ ಇದ್ದರು. ತೇಜಸ್ವಿನಿ ಮುದ್ದಣ್ಣವರ ನಿರೂಪಿಸಿದರು. ಆರ್.ಎಚ್. ರಾಘವಿ ಸ್ವಾಗತಿಸಿದರು. ಪ್ರಾಂಶುಪಾಲ ಲೀನಾ ಹೊನ್ನಕೇರಿ ಪರಿಚಯಿಸಿದರು. ಸವಿತಾ ಅಮರಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವಂದನಾ ಹೊಸೂರ ವಂದಿಸಿದರು.
ಖೊಟ್ಟಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ
ಕಲಘಟಗಿ: ತಾಲೂಕಿನ ಗು.ಹುಲಿಕಟ್ಟಿ ಗ್ರಾಪಂನಲ್ಲಿ ಚಾಂದವಿ ಕೋಂ. ಹುಸೇನಸಾಬ ಯಾದವಾಡ ಎಂಬುವಳು ಆಶ್ರಯ, ಇಂದಿರಾ ಆವಾಸ ಯೋಜನೆಯಡಿಯ ಇಬ್ಬರ ಫಲಾನುಭವಿಗಳ ಹೆಸರಿನಲ್ಲಿ ಗ್ರಾಮೀಣ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್.ನಲ್ಲಿ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಂಡ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಕುರಿತು ಕಲ್ಲಪ್ಪ ದ್ಯಾಮಣ್ಣ ಹೂಲಿ ಎಂಬುವರು ದೂರು ನೀಡಿದ್ದು 2008,09ರಲ್ಲಿ ಈ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ಗ್ರಾಪಂ, ತಾಪಂ ನೌಕರರು ಇದರಲ್ಲಿ ಶಾಮೀಲಾಗಿದ್ದಾರೆಂದು ಈ ಕುರಿತು ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಿ ಆಶ್ರಯ ಮನೆ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ಹೂಲಿಯವರು ಆಗ್ರಹಿಸಿದ್ದಾರೆ.
ಮೊಬೈಲ್ ಅಂಗಡಿ ಕಳ್ಳತನ
ಧಾರವಾಡ: ಇಲ್ಲಿನ ಶಿವಾಜಿ ಸರ್ಕಲ್ ಬಳಿಯ ಅಂಗಡಿಯೊಂದರ ಮೇಲ್ಛಾವಣಿ ಹಂಚು ತೆಗೆದು ಒಳಗೆ ನುಗ್ಗಿದ ಕಳ್ಳರು ಸುಮಾರು 1.50 ಲಕ್ಷ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಬಿ.ಜಿ. ಮೊಬೈಲ್ ಅಂಗಡಿಯ ಮಾಲೀಕ ಬಸವರಾಜ ಶ್ರೀಪತಿ ಎಂಬುವವರು ಎಂದಿನಂತೆ ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದಾಗ ಮಧ್ಯರಾತ್ರಿ ಸಮಯದಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾಗಿ ತಿಳಿದು ಬಂದಿದೆ. ಅಲ್ಲದೇ, ಪಕ್ಕದಲ್ಲಿ ಬಾರೊಂದರಲ್ಲಿ ವಾಸವಾಗಿದ್ದ ಕೆಲಸಗಾರರು ಹೊರಬರದಂತೆ ಹೊರ ಬಾಗಿಲಿಗೆ ಬಟ್ಟೆ ಹಾಗೂ ತಂತಿ ಬಿಗಿದ ಕಳ್ಳರು 35 ಮೊಬೈಲ್ ಹಾಗೂ 60 ಸಾವಿರ ನಗದು ಹಾಗೂ ಕರೆನ್ಸಿ ಸೇರಿದಂತೆ ಅಂದಾಜು 1.50 ಲಕ್ಷ ಮೌಲ್ಯದ ಕಳ್ಳತನ ಮಾಡಿದ್ದು, ನಂತರ ಪಕ್ಕದ ಪಾನ್.ಶಾಪ್.ನ ಬೀಗ ಮುರಿದು 8ರಿಂದ 12 ಸಾವಿರ ಮೌಲ್ಯದ ವಸ್ತು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

