ವಾಣಿಜ್ಯ ಶಿಕ್ಷಣಕ್ಕೂ ಅಪಾರ ಮಹತ್ವ
ಹುಬ್ಬಳ್ಳಿ: ಇತರ ವೃತ್ತಿ ಶಿಕ್ಷಣಗಳಂತೆ ವಾಣಿಜ್ಯ ಶಿಕ್ಷಣ ಕೂಡ ವೃತ್ತಿಪರ ಶಿಕ್ಷಣವಾಗಿದ್ದು, ವೃತ್ತಿಪರ ಶಿಕ್ಷಣಕ್ಕೆ ಹೋಲಿಕೆ ಮಾಡಿ ವಾಣಿಜ್ಯ ಶಿಕ್ಷಣ ಕಡಿಮೆ ಎಂದು ಭಾವಿಸುವುದು ಸೂಕ್ತವಲ್ಲ ಎಂದು ಕರ್ನಾಟಕ ವಿವಿ ವಾಣಿಜ್ಯ ವಿಭಾಗದ ಅಧ್ಯಕ್ಷ ಡಾ.ಆರ್.ಎಲ್. ಹೈದರಾಬಾದ್ ಹೇಳಿದರು.
ಗುರುವಾರ, ನಗರದ ಆಕ್ಸ್ಫರ್ಡ್ ವಾಣಿಜ್ಯ ಮಹಾವಿದ್ಯಾಲಯದ ಯುಗಾಸ್-13 ಮ್ಯಾನೇಜ್ಮೆಂಟ್ ಫೆಸ್ಟ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಾಣಿಜ್ಯ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಸಂವಹನ ಕೌಶಲ್ಯ, ನಾಯಕತ್ವದ ಗುಣದ ಕೊರತೆ ಎಂದು ಭಾವಿಸಲಾಗುತ್ತಿದ್ದು, ಆದರೆ, ಇಂದಿನ ದಿನಗಳಲ್ಲಿ ಈ ಮನೋಭಾವ ಬದಲಾಗುತ್ತಿದೆ. ವಿದ್ಯಾರ್ಥಿಗಳು ಈ ಕೊರತೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಮನುಷ್ಯನ ಸಂಬಂಧಗಳು, ಪ್ರಾಚೀನ ಸೇರಿದಂತೆ ಆಧುನಿಕ ನಾಗರಿಕತೆ ಅಳಿವು ಉಳಿವು ವಾಣಿಜ್ಯ ವ್ಯವಸ್ಥೆಯನ್ನು ಅವಲಂಬಿಸಿದೆ ಎಂದು ಹೇಳಿದ ಹೈದರಾಬಾದ್, ಒಂದು ನಾಗರಿಕತೆಯ ಸಮೃದ್ಧವಾಗಬೇಕಾದರೆ ವಾಣಿಜ್ಯ, ವ್ಯವಹಾರ ಅಗತ್ಯ ಎಂದರು.
ದೆಹಲಿ ಶ್ರೀರಾಮ ವಾಣಿಜ್ಯ ಮಹಾವಿದ್ಯಾಲಯ, ಚೆನ್ನೈನ ಕ್ರೈಸ್ಟ್ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕೋಲ್ಕತ್ತಾದ ಅಂಬೂಜಾ ವಾಣಿಜ್ಯಮಹಾವಿದ್ಯಾಲಯಗಳನ್ನು ರಾಷ್ಟ್ರದ ಅತ್ತ್ಯುತ್ತಮ ವಾಣಿಜ್ಯ ಕಾಲೇಜುಗಳು ಎಂದು ಗುರುತಿಸಲಾಗುತ್ತಿದೆ. ಇಲ್ಲಿ ನೀಡುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ದೇಶದ ಯಾವುದೇ ವಿವಿಗಳಲ್ಲಿ ಶಿಕ್ಷಣ ಸಾಟಿಯಾಗುವುದಿಲ್ಲ. ಇಂತಹ ಮಾದರಿ ಶಿಕ್ಷಣ ಆಕ್ಸಫರ್ಡ್ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂದರು.
ಸಂಸ್ಥೆ ಅಧ್ಯಕ್ಷ ವಸಂತ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಅರೀಫಾ ಮಕಾನದಾರ್ ಪರಿಚಯಿಸಿದರು. ಪ್ರಾಚಾರ್ಯ ಜೀತೇಂದ್ರ ಶಿಗಿಹಳ್ಳಿ ಯುಗಾಸ್-13ರ ಕುರಿತು ವರದಿ ನೀಡಿದರು.
ವೇದಿಕೆಯಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥ ರಾಮಮೂರ್ತಿ ನಾಯಕ್, ಪ್ರಾಧ್ಯಾಪಕರಾದ ನೀಲ್ ಪ್ರತಾಪನ್ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ವಿಶಾಖ್ ಮತ್ತು ಸುಜೀತ್ ಇದ್ದರು.
ಇದಕ್ಕೂ ಮುನ್ನ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಇದಕ್ಕೂ ಮೊದಲು ಎರಡು ದಿನಗಳ ಕಾಲ ಮ್ಯಾನೇಜ್ಮೆಂಟ್ ಫೆಸ್ಟ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮಗಳಿಗೆ ನೆರೆದ ವಿದ್ಯಾರ್ಥಿಗಳಿಂದ ಚಪ್ಪಾಳೆ ಹರ್ಷೋದ್ಗಾರ ಸುತ್ತಲಿನ ಪರಿಸರದಲ್ಲಿ ಮೊಳಗಿತು.
ರಾಜ್ಯದ ವಿವಿಧ ಭಾಗಗಳ ಏಳು ಕಾಲೇಜುಗಳು ಮ್ಯಾನೇಜ್ಮೆಂಟ್ ಫೆಸ್ಟ್ನಲ್ಲಿ ಪಾಲ್ಗೊಂಡು ವೃತ್ತಿ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದವು. ಇದರ ಜೊತೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳು ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದರು.
ಫೆಸ್ಟ್ನ ಅಂಗವಾಗಿ ವಿವಿಧ ಭಾಗಗಳಿಂದ ಆಗಮಿಸಿದ್ದ ನೃತ್ಯ ಕಲಾ ತಂಡಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮನರಂಜನೆ ಒದಗಿಸಿದರು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಕಾಲೇಜು ತಂಡಗಳಿಗೆ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡುವುದಕ್ಕೆ ಕುದುರೆ ಮೇಲೆ ಅತ್ಯಾರ್ಷಕವಾಗಿ ವಿದ್ಯಾರ್ಥಿನಿಯರ ಪುಷ್ಪಾರ್ಚನೆಯೊಂದಿಗೆ ಸಮಗ್ರ ಚಾಂಪಿಯನ್ಷಿಪ್ ಟ್ರೋಫಿ ಸೇರಿದಂತೆ ವಿವಿಧ ವೈಯಕ್ತಿಕ ವಿಭಾಗದ ಟ್ರೋಫಿಗಳನ್ನು ತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

