ಧಾರವಾಡ

ಸವಾಯಿ ಗಂಧರ್ವರ ನಾಡಲ್ಲಿ ಚುನಾವಣೆ ಸದ್ದು

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 7
ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳ ಪೈಕಿ ವಿಶೇಷವಾಗಿ ಕುಂದಗೋಳ ಕ್ಷೇತ್ರದಲ್ಲಿ ಈ ಬಾರಿ ಘಟಾನುಘಟಿ ನಾಯಕರುಗಳು ತಮ್ಮ ಅದೃಷ್ಟ ಪರೀಕ್ಷಿಸಲು ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಕಮಲದ ಚಿಹ್ನೆಯಿಂದ ಗೆದ್ದು ಬಂದು ಐದು ವರ್ಷ ಆಡಳಿತದ ರುಚಿ ಕಂಡ ಶಾಸಕ ಎಸ್.ಐ. ಚಿಕ್ಕನಗೌಡ್ರ, ಪ್ರಸ್ತುತ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರ ಕೆಜೆಪಿ ಸಂಗಡ ಸೇರಿ ಅಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ. ಮಾಜಿ ಶಾಸಕರಾದ ಜೆಡಿಎಸ್‌ನ ಎಂ.ಎಸ್. ಅಕ್ಕಿ ಮತ್ತು ಕಾಂಗ್ರೆಸ್‌ನ ಸಿ.ಎಸ್. ಶಿವಳ್ಳಿ ಚಿಕ್ಕನಗೌಡ್ರಗೆ ಸೆಡ್ಡು ಹೊಡೆದು ಚುನಾವಣೆಗೆ ಸಜ್ಜಾಗಿದ್ದಾರೆ. ಈ ಮಧ್ಯೆ ಆಡಳಿತರೂಢ ಬಿಜೆಪಿಯೂ ಗ್ರಾಮೀಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ಆರ್. ಪಾಟೀಲರನ್ನು ಚುನಾವಣಾ ಕಣಕ್ಕೆ ಇಳಿಸಿ ಚಿಕ್ಕನಗೌಡ್ರಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ಸಿನ ಟಿ.ಕೆ. ಕಾಂಬಳೆ ಹಾಗೂ ಎಂ.ಎಸ್. ಅಕ್ಕಿ ಅವರನ್ನು ಹೊರತುಪಡಿಸಿ ಈ ಕ್ಷೇತ್ರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಗೆದ್ದ ಹುರಿಯಾಳುಗಳು ಯಾರೂ ಇಲ್ಲ. 1957, 1962ರಲ್ಲಿ ಟಿ.ಕೆ. ಕಾಂಬಳೆ, 1967ರಲ್ಲಿ ಎಸ್.ಆರ್. ಬೊಮ್ಮಾಯಿ (ಪಕ್ಷೇತರ), 1972ರಲ್ಲಿ ಆರ್.ವಿ. ರಂಗನಗೌಡ (ಕಾಂಗ್ರೆಸ್), 1978ರಲ್ಲಿ ಎಂ.ಎಸ್. ಕಟಗಿ (ಕಾಂಗ್ರೆಸ್), 1983ರಲ್ಲಿ ವಿ.ಎಸ್. ಕುಬಿಹಾಳ (ಕಾಂಗ್ರೆಸ್), 1985ರಲ್ಲಿ ಬಿ.ಎ. ಉಪ್ಪಿನ (ಜನತಾ ಪಕ್ಷ), 1989ರಲ್ಲಿ ಜಿ.ಎಚ್. ಜುಟ್ಟಲ (ಕಾಂಗ್ರೆಸ್), 1994ರಲ್ಲಿ ಎಂ.ಎಸ್. ಅಕ್ಕಿ (ಜನತಾದಳ), 1999ರಲ್ಲಿ ಸಿ.ಎಸ್. ಶಿವಳ್ಳಿ (ಪಕ್ಷೇತರ), 2004ರಲ್ಲಿ ಎಂ.ಎಸ್. ಅಕ್ಕಿ (ಜೆಡಿಯು) ಹಾಗೂ 2008ರಲ್ಲಿ ಎಸ್.ಐ. ಚಿಕ್ಕನಗೌಡ್ರ (ಬಿಜೆಪಿ) ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕುಂದಗೋಳ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸಿತ್ತು. ಆದರೆ, ಶಾಸಕ ಎಸ್.ಐ. ಚಿಕ್ಕನಗೌಡ್ರು ತಮ್ಮ ಸಂಬಂಧಿ ಬಿ.ಎಸ್. ಯಡಿಯೂರಪ್ಪ ಅವರ ಕೆಜೆಪಿ ಪಾಲಾಗಿದ್ದರಿಂದ ಬಿಜೆಪಿ ಇನ್ನೋರ್ವ ಮುಖಂಡ ಎಂ.ಆರ್. ಪಾಟೀಲರನ್ನು ಕಣಕ್ಕೆ ಇಳಿಸಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಎಸ್.ಐ. ಚಿಕ್ಕನಗೌಡ್ರ, ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಸುಖಾಸುಮ್ಮನೆ ಆರೋಪಿಸಿದ್ದರು. ಇವರಿಬ್ಬರ ಮಧ್ಯೆ ವಾದ-ವಾಗ್ವಾದ ನಡೆದಿತ್ತು. ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ಜೋಶಿ ಈ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ಪರಿಗಣಿಸಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅನೇಕ ಅಭಿವೃದ್ಧಿ ಪರ ಯೋಜನೆ ಮುಂದಿಟ್ಟು ಬಿಜೆಪಿ ಚುನಾವಣೆ ಎದುರಿಸುತ್ತಿದೆ.
ಜನತಾದಳ ಹಾಗೂ ಜೆಡಿಎಸ್‌ನಿಂದ ಒಂದೊಂದು ಬಾರಿ ಆಯ್ಕೆಯಾಗಿದ್ದ ಎಂ.ಎಸ್. ಅಕ್ಕಿ ಅವರು ಈ ಬಾರಿ ಗೆದ್ದು ಮೂರು ಬಾರಿ ಈ ಕ್ಷೇತ್ರ ಪ್ರತಿನಿಧಿಸಲು ಹವಣಿಸುತ್ತಿದ್ದಾರೆ. 1999ರಲ್ಲಿ ಪಕ್ಷೇತರರಾಗಿ ನಿಂತು ಗೆದ್ದಿದ್ದ ಸಿ.ಎಸ್. ಶಿವಳ್ಳಿ ಅವರು ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿ ಒಂದು ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಚಿಕ್ಕನಗೌಡ್ರ ವಿರುದ್ಧ 6,376 ಮತಗಳ ಅಂತರದಿಂದ ಸೋತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಅಲೆ ಇರುವ ಕಾರಣ ಶಿವಳ್ಳಿ ಪೂರ್ತಿ ಭರವಸೆ ಇಟ್ಟುಕೊಂಡಿದ್ದಾರೆ. ಅಷ್ಟೇ ಪ್ರಯತ್ನವನ್ನು ನಡೆಸಿದ್ದಾರೆ. ಇನ್ನು, ಕಾಂಗ್ರೆಸ್ ಟಿಕೆಟ್ ಕಳೆದುಕೊಂಡ ಡಾ. ಶಂಕರ ವಾಲಿ ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ. ಮಾಜಿ ಶಾಸಕ ಬಿ.ಎ. ಉಪ್ಪಿನ ಅವರ ಪುತ್ರ ಏಗನಾಥ ಉಪ್ಪಿನ ಸಹ ಓರ್ವ ಆಕಾಂಕ್ಷಿ. ಅಲ್ಲದೇ, ಬಿಎಸ್ಸಾರ್‌ನ ಅಧಿಕೃತ ಅಭ್ಯರ್ಥಿಗೆ ಇನ್ನು ಹುಡುಕಾಟ ನಡೆದಿದ್ದು, ಶಿವಾನಂದ ಬೆಂತೂರ ಅಥವಾ ವಿರುಪಾಕ್ಷ ಕಳ್ಳಿಮನಿ ಟಿಕೆಟ್ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ.

-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.