ಇಂದಿನಿಂದ ಚುನಾವಣಾ ಪ್ರಕ್ರಿಯೆ ಶುರು
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 9
ವಿಧಾನಸಭಾ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಏ. 10 ರಿಂದ 17ರ ವರೆಗೆ ನಡೆಯಲಿದೆ. ಟಿಕೆಟ್ ಅಂತಿಮಗೊಂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಬೇಕಾದ ತಯಾರಿ ಮಾಡಿಕೊಂಡಿದ್ದು, ಕೆಲ ಆಕಾಂಕ್ಷಿಗಳು ಇನ್ನೂ ಟಿಕೆಟ್ ಪಡೆಯುವುದರಲ್ಲೇ ಹೆಣಗಾಡುತ್ತಿದ್ದಾರೆ.
ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಬಿಜೆಪಿ ಮಾಡಿಕೊಂಡ ಅನೇಕ ಅವಾಂತರಗಳಿಂದ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಿಜೆಪಿ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಹೊಂಚು ಹಾಕಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಹು-ಧಾ ಪಶ್ಚಿಮ, ಕಲಘಟಗಿ ಹಾಗೂ ಹು-ಧಾ ಸೆಂಟ್ರಲ್ ಈ ಮೂರು ಕ್ಷೇತ್ರಗಳಿಗೆ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇನ್ನು ಬಿಜೆಪಿ ಕಲಘಟಗಿ ಹೊರತುಪಡಿಸಿ ಉಳಿದ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಜೆಡಿಎಸ್ನ ಮುಖಂಡರು ತನ್ನೆಲ್ಲ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿ, ಪ್ರಚಾರಕ್ಕೂ ಬಿಟ್ಟಿದೆ. ಕೆಜೆಪಿ ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಕ್ಷೇತ್ರವಾದ ಕಾರಣ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಕೆಜೆಪಿ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿಲ್ಲ ಎನ್ನಲಾಗುತ್ತಿದೆ.
ಶುಭಗಳಿಗೆಗೆ ಹುಡುಕಾಟ: ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಶುಭಗಳಿಗೆಗಾಗಿ ದಿನಾಂಕ ಹುಡುಕುತ್ತಿದ್ದಾರೆ. ಏ. 15,16 ಹಾಗೂ 17ರಂದು ಹೆಚ್ಚಿನ ಪ್ರಮಾಣದಲ್ಲಿ ನಾಮಪತ್ರಗಳು ಸಲ್ಲಿಕೆಯಾಗುವ ಸಂಭವವಿದೆ. ಏ. 17ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 20ರ ವರೆಗೂ ನಾಮಪತ್ರ ಮರಳಿ ಪಡೆಯಲು ಅವಕಾಶವಿದೆ. ಮೇ 5ರಂದು ಮತದಾನ ನಡೆಯಲಿದೆ. ಮೇ 8ರಂದು ಮತ ಎಣಿಕೆ ಕಾರ್ಯ ಜರುಗಲಿದೆ.
ನಾಮಪತ್ರ ಹೀಗೆ ಸಲ್ಲಿಸಿ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಈ ಅಂಶಗಳನ್ನು ಗಮನಿಸಬೇಕೆಂದು ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾಮಪತ್ರದ ಜತೆಗೆ ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರ, ಜಿಲ್ಲೆಯ ಯಾವುದೇ ಬ್ಯಾಂಕಿನಲ್ಲಿ ತಮ್ಮ ಹೆಸರಿನಲ್ಲಿ ಹಿಂದಿನ ದಿನ ಹೊಸದಾಗಿ ತೆರೆದ ಬ್ಯಾಂಕ್ ಖಾತೆ ವಿವರ. ಅದರ ಝೆರಾಕ್ಸ್ ಪ್ರತಿ, ಸಂಬಂಧಿತ ವಿಧಾನಸಭಾ ಕ್ಷೇತ್ರದ ಮತದಾರ ಅಲ್ಲದಿದ್ದಲ್ಲಿ ಯಾವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಅದರ ಪ್ರಮಾಣೀಕೃತ ಪ್ರತಿ ಸಲ್ಲಿಸಬೇಕು. ಮತಪೆಟ್ಟಿಗೆಯಲ್ಲಿ ಯಾವ ರೀತಿ ಹೆಸರಿರಬೇಕು ಎನ್ನುವುದನ್ನು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತಿಳಿಸಬೇಕು. ರು. 20 ಬಾಂಡ್ ಪೇಪರ್ನಲ್ಲಿ ನಮೂನೆ 26 ನ್ನು ಎಲ್ಲ ಮಾಹಿತಿಯನ್ನು ತುಂಬಿ ಮೂಲ ಪ್ರತಿಯೊಡನೆ ಎರಡು ಝೆರಾಕ್ಸ್ ಪ್ರತಿಗಳನ್ನು ನೀಡಬೇಕು. ಖಾತರಿ ಮೊತ್ತವಾಗಿ ಸಾಮಾನ್ಯ ಯಾವುದೇ ಅಭ್ಯರ್ಥಿಗಳು . 10 ಸಾವಿರ ಎಸ್ಸಿ-ಎಸ್ಟಿ ಪಂಗಡದವರಾದರೆ ರು. 5 ಸಾವಿರ ನೀಡಬೇಕು. ಅಧಿಕೃತ ಪಕ್ಷಗಳ ಅಭ್ಯರ್ಥಿ ಇದ್ದಲ್ಲಿ ಸಂಬಂಧಿತ ಎ ಹಾಗೂ ಬಿ ಫಾರ್ಮ್, ಆಯೋಗದೊಂದಿಗೆ ದಾಖಲಾಗಿರುವ ಆದರೆ, ಇನ್ನೂ ಪರಿಗಣಿತ ಪಕ್ಷವಾಗಿರದಿದ್ದ ಪಕ್ಷದಲ್ಲಿ ಫಾರ್ಮ್ ಸಿ ಹಾಗೂ ಡಿ ಸಲ್ಲಿಸಬೇಕು. ಅನುಮೋದಕರು ಪಕ್ಷದ ಅಭ್ಯರ್ಥಿಗೆ ಒಬ್ಬರು, ಇತರರಿಗೆ 10 ಜನ ಇರಬೇಕು. ಅವರು ಆ ಕ್ಷೇತ್ರದ ಮತದಾರರಿರಬೇಕು. ಅಭ್ಯರ್ಥಿಯು ತನ್ನ ಪೂರ್ಣ ಸಂಪರ್ಕ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಒದಗಿಸಬೇಕು. ಜತೆಗೆ ತನ್ನ ಚುನಾವಣಾ ಎಜೆಂಟ್ರಾಗಿ ಕಾರ್ಯನಿರ್ವಹಿಸುವವರ ಹೆಸರು ಹಾಗೂ ಭಾವಚಿತ್ರ ನೀಡಬೇಕು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ನಾಮಪತ್ರಗಳನ್ನು ಈ ಸ್ಥಳಗಳಲ್ಲಿ ಸ್ವೀಕರಿಸುವುದಾಗಿಯೂ ಆಯೋಗ ತಿಳಿಸಿದೆ. ನವಲಗುಂದ, ಕುಂದಗೋಳ, ಹು-ಧಾ ಪೂರ್ವ, ಕಲಘಟಗಿ ಕ್ಷೇತ್ರಗಳ ನಾಮಪತ್ರಗಳನ್ನು ಆಯಾ ತಹಸೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಧಾರವಾಡ ಕ್ಷೇತ್ರದ ನಾಮ ಪತ್ರಗಳನ್ನು ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ, ಹು-ಧಾ ಕೇಂದ್ರ ಕ್ಷೇತ್ರದ ನಾಮಪತ್ರಗಳನ್ನು ಹುಬ್ಬಳ್ಳಿ ಪಾಲಿಕೆಯ ಆಯುಕ್ತರ ಕಚೇರಿ ಹಾಗೂ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಧಾರವಾಡ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಂಬಂಧಿತ ಚುನಾವಣಾಧಿಕಾರಿಗಳಿಗೆ ಅಗತ್ಯದ ಎಲ್ಲ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

