ಧಾರವಾಡ

ನಾಮಪತ್ರ ಸಲ್ಲಿಕೆಗೆ ಅಮಾವಾಸ್ಯೆ ಅಡ್ಡಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 10
ಅಮಾವಾಸ್ಯೆ ದಿನ ಶುಭ ಕಾರ್ಯಗಳನ್ನಾಗಲಿ ಅಥವಾ ಹೊಸ ಕಾರ್ಯಕ್ಕೆ ಚಾಲನೆ ನೀಡುವುದಾಗಲಿ ಬಹುತೇಕರು ಮಾಡುವುದಿಲ್ಲ. ಆ ದಿನ ಮಾಡುವ ಕಾರ್ಯಗಳು ಸಫಲಗೊಳ್ಳುವುದಿಲ್ಲ ಅಥವಾ ಏನಾದರೂ ಅಡಚಣೆ ಎದುರಾಗುತ್ತದೆಂಬ ಮೂಢನಂಬಿಕೆ ಜನಸಾಮಾನ್ಯರದ್ದು.
ಆದರೆ, ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಯುಗಾದಿ ಪೂರ್ವದ ಅಮಾವಾಸ್ಯೆ ದಿನವಾದ ಬುಧವಾರ ಮೊದಲ ದಿನ. ಅಮಾವಾಸ್ಯೆಯಿಂದಲೇ ಪ್ರಾರಂಭಗೊಂಡಿದ್ದರಿಂದ ಇದು ಶುಭ ದಿನವಲ್ಲವೆಂದು ತಮ್ಮಲ್ಲೇ ಗೊಣಗಿಕೊಂಡವರಿಗೇನೂ ಕಡಿಮೆ ಇಲ್ಲ.
ಆದರೂ ಅಮಾವಾಸ್ಯೆ ಅಶುಭ ದಿನವೆಂಬ ಮೂಢನಂಬಿಕೆ ಕಡೆಗಣಿಸಿ ಧಾರವಾಡ ಜಿಲ್ಲೆಯಿಂದ ಇಬ್ಬರು ಮತ್ತು ಬಿಜಾಪುರ ಜಿಲ್ಲೆಯಲ್ಲಿ ಒಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ವಿಶೇಷ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಎಚ್.ಜಿ. ದೇಸಾಯಿ ಹಾಗೂ ಕಲಘಟಗಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಲ್ಲಪ್ಪ ಗುಡಿಹಾಳ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.  ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಗದಗ, ಹಾವೇರಿ, ಬಳ್ಳಾರಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗಳ ಯಾವುದೇ ವಿಧಾನಸಭೆ ಕ್ಷೇತ್ರದಿಂದ ಮೊದಲ ದಿನವಾದ ಬುಧವಾರ ನಾಮಪತ್ರ ಸಲ್ಲಿಕೆಯಾಗಿಲ್ಲ.  ನಾಮಪತ್ರ ಸಲ್ಲಿಕೆಗೆ ಏ. 17 ಕೊನೆಯ ದಿನ. ನಾಮಪತ್ರ ಸಲ್ಲಿಸಲು ಇನ್ನೂ ಏಳು ದಿನ ಬಾಕಿ ಇರುವಾಗ ಅವಸರದಲ್ಲಿ ಅದರಲ್ಲಿಯೂ ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿ, ದುರಾದೃಷ್ಟ ಮೈಮೇಲೆ ಎಳೆದುಕೊಳ್ಳುವುದು ಬೇಡವೆಂಬ ನಂಬಿಕೆಯೂ ಅನೇಕರದ್ದು.
ಜ್ಯೋತಿಷ್ಯಕ್ಕೆ ಮೊರೆ: ಮೊದಲ ದಿನವೇ ನಾಮಪತ್ರ ಸಲ್ಲಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದ ಕೆಲವರು ಈ ದಿನ ಅಮಾವಾಸ್ಯೆಯಾಗಿದ್ದರಿಂದ ತಮ್ಮ ಯೋಜನೆಯಿಂದ ಹಿಂದೆ ಸರಿದರು. ಈಗಾಗಲೇ ಬಹುತೇಕ ವಿಧಾನಸಭೆ ಕ್ಷೇತ್ರಗಳಿಗೆ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದರೂ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೀನಮೇಷ ಎಣಿಸಿದರು.  ಕೆಲ ಅಭ್ಯರ್ಥಿಗಳಂತೂ ಮೊದಲ ದಿನ ನಾಮಪತ್ರ ಸಲ್ಲಿಸುವ ವಿಚಾರದ ಬಗ್ಗೆ ಒಂದೆರೆಡು ದಿನ ಮೊದಲೇ ಜ್ಯೋತಿಷ್ಯ ಕೇಳಿದ್ದರೆಂದು ಹೇಳಲಾಗುತ್ತದೆ. ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯ ಮಾಡಬಾರದು ಹಾಗೂ ಮೊದಲ ದಿನದ ಬದಲು ಬೇರೆ ನಿಗದಿತ ದಿನ ನಾಮಪತ್ರ ಸಲ್ಲಿಸುವಂತೆ ಜ್ಯೋತಿಷ್ಯರು ಅಭ್ಯರ್ಥಿಗಳಿಗೆ ಭವಿಷ್ಯವನ್ನೂ ನುಡಿದಿದ್ದಾರೆಂದು ಮೂಲಗಳು ತಿಳಿಸಿವೆ.
ಅಷ್ಟೇ ಏಕೆ, ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಲ ಅಭ್ಯರ್ಥಿಗಳು ಬುಧವಾರ ಪ್ರಚಾರವನ್ನೂ ನಡೆಸಲಿಲ್ಲ. ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಜೆಡಿಎಸ್, ಬಿಎಸ್‌ಆರ್ ಪಕ್ಷಗಳು ಈಗಾಗಲೇ ಬಹುತೇಕ ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಹಾಗೂ ಟಿಕೆಟ್ ಕೈತಪ್ಪಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬಸುವವರು ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಪ್ರಾರಂಭಗೊಂಡಿರುವ ಪ್ರಚಾರ ಅಮಾವಾಸ್ಯೆಯೆಂಬ ಕಾರಣಕ್ಕೆ ಬುಧವಾರ ಬಹುತೇಕ ಸ್ಥಗಿತಗೊಂಡಿತು.  ಅಮಾವಾಸ್ಯೆಯೆಂದು ಬಹುತೇಕ ಅಭ್ಯರ್ಥಿಗಳು ಪೂಜೆ-ಪುನಸ್ಕಾರಗಳಲ್ಲಿ ತೊಡಗಿಕೊಂಡರು. ಕೆಲವರು ತಮ್ಮಿಷ್ಟ ದೇವರ ಕ್ಷೇತ್ರಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ರೀತಿಯ ದಾನಗಳನ್ನು ಮಾಡಿದರು.  ಯಾವೊಬ್ಬ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಕೊಳ್ಳಲಿಲ್ಲ. ಆದರೆ, ಅಭ್ಯರ್ಥಿಗಳ ಬೆಂಬಲಿಗರು ಕೆಲವೆಡೆ ಪ್ರಚಾರ ನಡೆಸಿದ ವರದಿಯಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಅವರ ಪತ್ನಿ ಶಿಲ್ಪಾ ಶೆಟ್ಟರ್ ಬುಧವಾರ ಬೆಳಗಿನ ಜಾವ ಕೆಲ ಸಮಯ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.

-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.