ಪ್ರಜಾಪ್ರಭುತ್ವದ ಸೋಲಿನ ಮೆಟ್ಟಿಲು ಕುಡಿತ: ಸಚ್ಚಿದಾನಂದ ಹೆಗಡೆ
ಕ.ಪ್ರ. ವಾರ್ತೆ ಹುಬ್ಬಳ್ಳಿ ಏ.13
ಮದ್ಯ ಸೇವನೆ ಕೇವಲ ಬದುಕಿಗಷ್ಟೆ ಮಾರಕವಲ್ಲ, ದೇಶದ ರಾಜಕೀಯ ವ್ಯವಸ್ಥೆಗೂ ಮಾರಕವಾಗಬಹುದು. ಚುನಾವಣೆಯಲ್ಲಿ ಹರಿಯುತ್ತಿರುವ ಹೆಂಡದ ಹೊಳೆಯಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕೊಚ್ಚಿ ಹೋಗುವ ಆತಂಕ ಇದೆ ಎಂದು ರಾಜ್ಯ ಮದ್ಯಪಾನ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹೇಳಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಹಂಚಿಕೆಯಾಗುವ ಹೆಂಡದಿಂದ ಪ್ರಜಾಪ್ರಭುತ್ವಕ್ಕೆ ಸೋಲಾಗುವ ಜೊತೆಗೆ ಸಾಮಾಜಿಕ ಬದುಕು ಕೂಡ ಏರುಪೇರಾಗುತ್ತದೆ. ಪುಕ್ಕಟೆ ಸಿಗುತ್ತದೆಂದು ಮಿತಿ ಇಲ್ಲದೆ ಕುಡಿದ ಮತದಾರ ಭವಿಷ್ಯದ ದಿನಗಳಲ್ಲಿ ಸಾರಾಯಿಯ ದಾಸನಾಗುತ್ತಾನೆ. ಇದು ಆತನ ಕುಟುಂಬದ ಮೇಲಷ್ಟೇ ಅಲ್ಲ ಇಡೀ ಸಾಮಾಜಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚುನಾವಣೆ ಇರಲಿ ಅಲ್ಲಿ ಹೆಂಡ ಹಂಚಿಕೆ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ತಲಾ ಒಂದು ಚುನಾವಣೆಯೊಂದರಲ್ಲಿ ಶೇ.8.33ರಷ್ಟು ಹೊಸ ಕುಡುಕರು ಹುಟ್ಟಿಕೊಳ್ಳುತ್ತಿದ್ದಾರೆ. ಈಗಂತೂ ಗ್ರಾಪಂ, ನಗರಸಭೆ, ವಿಧಾನಸಭೆ ಮತ್ತು ಲೋಕಸಭೆ ಹೀಗೆ ಹಲವಾರು ಚುನಾವಣೆಗಳು ಬಂದಿದ್ದು, ಐದು ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆಗಳನ್ನು ಸರಾಸರಿಯಲ್ಲಿ ಲೆಕ್ಕ ಹಾಕಿದರೆ ವರ್ಷಕ್ಕೊಂದು ಚುನಾವಣೆಯಾಗುತ್ತದೆ. ಒಟ್ಟು ಐದು ವರ್ಷಗಳ ಅವಧಿಯಲ್ಲಿ ಐದಕ್ಕೂ ಹೆಚ್ಚು ಚುನಾವಣೆಗಳಿಂದ ಒಂದು ಅಂದಾಜಿನ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ಹೆಚ್ಚಾಗುತ್ತಿರುವ ಕುಡುಕರ ಸಂಖ್ಯೆ ಶೇ. 40ರಷ್ಟು ಎಂದು ವಿಶ್ಲೇಷಿಸಿದರು.
65 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ, ಈ ಅವಧಿಯೊಳಗೆ ಸಾಧಿಸಬೇಕಾದಷ್ಟು ಪ್ರಗತಿಯನ್ನು ಸಾಧಿಸಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಚುನಾವಣೆಯಲ್ಲಿ ಕಾಣಿಸಿಕೊಂಡ ಹೆಂಡ ಹಂಚಿಕೆ ವ್ಯವಸ್ಥೆ. ಕುಡಿದು ತೃಪ್ತನಾದ ಮತದಾರ ಸರಿ, ತಪ್ಪುಗಳ ವಿವೇಚನೆ ಕಳೆದುಕೊಂಡು ಚಲಾಯಿಸುತ್ತಿರುವ ಮತಗಳಿಂದ ಗೆದ್ದು ಬರುತ್ತಿರುವ ರಾಜಕಾರಣಿ ಇಡೀ ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾನೆ ಎಂದರು.
ಕಡಿವಾಣಕ್ಕೆ ಕ್ರಮಗಳೇನು?: ಚುನಾವಣೆಯಲ್ಲಿ ಮದ್ಯದ ಹೊಳೆ ಹರಿಯುವಿಕೆ ತಡೆಯಬೇಕು ಎನ್ನುವ ಉದ್ದೇಶದಿಂದ ಬೆಳಗಾವಿಯಲ್ಲಿ ಈಚೆಗೆ ನಡೆದ ಧರ್ಮಾಧಿಕಾರಿಗಳ ದುಂಡು ಮೇಜಿನ ಪರಿಷತ್ನಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ರಾಜ್ಯದ ಮುನ್ನೂರಕ್ಕೂ ಹೆಚ್ಚು ಮಠಾಧೀಶರಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮನವಿ ಮಾಡಿದ್ದು, ಮಠಾಧೀಶರು ಜನರ ಬಳಿಗೆ ತೆರಳಿ ರಾಜಕೀಯ ಅವ್ಯವಸ್ಥೆಗೆ ಕಾರಣವಾಗುತ್ತಿರುವ ಮದ್ಯ ಸೇವನೆಯಿಂದ ದೂರ ಇರಿ. 'ಕುಡಿದು ಮತದಾನ ಮಾಡದಿರಿ' ಇದರಿಂದಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

