ಸಾಮಾಜಿಕ ಸಮಸ್ಯೆಗಳು ಕಥಾ ರೂಪ ಪಡೆಯಲಿ
ಧಾರವಾಡ: ಜಾಗತೀಕರಣ, ಖಾಸಗೀಕರಣದ ಪ್ರಭಾವದಿಂದ ಪ್ರಸ್ತುತ ಸೃಜನಶೀಲ ಬರಹಗಾರರು ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ಖ್ಯಾತ ಕಥೆಗಾರ ಡಾ. ಅಮರೇಶ ನುಗಡೋಣಿ ಇಲ್ಲಿ ಹೇಳಿದರು.
ಇಲ್ಲಿನ ರಂಗಾಯಣ ಆವರಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ಪರ್ತಕರ್ತ ಟಿ.ಎಸ್. ಗೋರವರ ಅವರ 'ಕುದುರೆ ಮಾಸ್ತರ' ಎಂಬ ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸೃಜಶೀಲ ಬರಹ, ಬರಹಗಾರರ ಆಲೋಚನೆಗಳನ್ನು ಬುಡಮೇಲು ಮಾಡುವ ಘಟನೆಗಳು ನಿತ್ಯ ನಡೆಯುತ್ತಿವೆ. ಕಥೆ ಕಟ್ಟುವುದು ಸೃಷ್ಟಿಗೆ ಸಂಬಂಧಿಸಿದೆ. ಕಥೆಗಾರರು ಅನುಭವಗಳಿಂದ ಕಥೆ ಕಟ್ಟುವ ಪರಿಮಿತಿಯಿಂದ ಹೊರಬಂದು, ಹಳ್ಳಿ, ಪಟ್ಟಣ ಮತ್ತಿತರ ಸಾಮಾಜಿಕ ಸಮಸ್ಯೆಗಳನ್ನು ಕಥೆ ರೂಪದಲ್ಲಿ ತರುವುದರತ್ತ ಚಿಂತಿಸಲಿ ಎಂದರು.
ಕಥೆಗಳನ್ನು ಕಟ್ಟುವಲ್ಲಿ ಕಥೆಗಾರರೂ ತಮ್ಮ ಅನುಭವ ಮತ್ತು ಪಟ್ಟಣ, ಹಳ್ಳಿಗಳ ಸಮಸ್ಯೆಗಳನ್ನಿಟ್ಟುಕೊಂಡು ತಮ್ಮ ಕಥೆ ಬರೆಯುವಾಗ ಕೆಲವು ಚೌಕಟ್ಟುಗಳನ್ನು ಮೀರಿ ಕಥೆ ಬರೆಯಬೇಕಾಗುತ್ತದೆ. ಅನುಭವ ಮತ್ತು ಘಟನೆಗಳ ಆಧಾರದ ಮೇಲೆ ಕಥೆಗಳನ್ನು ಹೇಗೆ ಹೆಣೆಯಬೇಕೆಂಬುವುದನ್ನು ಇಂದಿನ ಯುವ ಬರಹಗಾರ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.
ಕಥೆಯಲ್ಲಿ ಅನುಭವಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು. ಅನುಭವಗಳನ್ನು ಸೃಷ್ಟಿಸಿಕೊಳ್ಳದಿದ್ದರೆ ಕಥೆ ಸೃಷ್ಟಿಸುವದಕ್ಕೆ ಸಾಧ್ಯವಿಲ್ಲ ಎಂದ ಅವರು ಜಾಗತೀಕರಣವನ್ನು ಬೆನ್ನು ಹತ್ತಿರುವ ಪ್ರಸ್ತುತದಲ್ಲಿ ನಮ್ಮ ಪ್ರಾದೇಶಿಕತೆಯನ್ನು ಮರೆಯುತ್ತಿದ್ದೇವೆ. ಓದು ಮತ್ತು ಲೋಕಾನುಭವದಿಂದ ಜ್ಞಾನ ಹೆಚ್ಚುತ್ತದೆ. ಅಪಾರ ಓದು ಇಲ್ಲದಿದ್ದರೆ, ಸಮಾಜದ ಮತ್ತು ಜನಸಮಾನ್ಯರ ಸಮಸ್ಯೆಗಳನ್ನು ಆಲಿಸಿ ಅವುಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಿಲ್ಲ. ಟಿ.ಎಸ್. ಗೋರವರ ಅವರ ಕುದುರೆ ಮಾಸ್ತರ ಕಥೆ ಸಂಕಲನದಲ್ಲಿ ಸಮೃದ್ಧ ಅನುಭವಗಳಿವೆ. ತಮ್ಮ ಜೀವನದ ಅನುಭವಗಳ ಅಧಾರದ ಮೇಲೆ ಕೆಲ ದುಃಖದ ಸಂಗತಿಗಳನ್ನು ನಿರೂಪಿಸಿದ್ದಾರೆ.
ಯುವ ಕವಿ ಟಿ.ಎಸ್. ಗೋರವರ ಮಾತನಾಡಿ, ಕಥೆಗಾರನಿಗೆ ಚೌಕಟ್ಟು ಎಂಬುವುದು ಇರಬಾರದು. ಕಥೆಗಾರನಿಗೆ ಪರಿಮಿತಿ ಇದ್ದರೆ ಕಥೆ ಸೃಷ್ಟಿಸುವುದು ಕಷ್ಟವಾಗುತ್ತದೆ ಎಂದರು.
ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಚನ್ನಪಟ್ಟಣ ಪಲ್ಲವ ಪ್ರಕಾಶನ ವೆಂಕಟೇಶ ಇದ್ದರು. ರತ್ನಾ ಹಿರೇಮಠ ಪ್ರಾರ್ಥಿಸಿದರು. ಕಾವ್ಯಾ ಕಡಮೆ ನಿರೂಪಿಸಿದರು. ನಂತರ ಸುನಂದಾ ಕಡಮೆ, ಡಾ. ಬಸು ಬೇವಿನಗಿಡದ, ವಿ.ಆರ್. ಕಾರ್ಪೆಂಟರ್, ಡಾ. ವಿನಯಾ, ಮಹಾಂತೇಶ ನವಕಲ್, ಮುದಿರಾಜು ಬಾಣದ ಅವರಿಂದ ಸ್ವರಚಿತ ಕಥಾಗೋಷ್ಠಿ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

