ಬಿಎಸ್ವೈಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ: ಶಿರಿಯಣ್ಣವರ
ನವಲಗುಂದ: ಬಿ.ಎಸ್. ಯಡಿಯೂರಪ್ಪ ನೀಡಿದ ಅನುದಾನದಲ್ಲಿ ಕ್ಷೇತ್ರ ಪ್ರಗತಿ ಸಾಧಿಸಿದೆ ಎಂದು ಕೆಜೆಪಿ ಅಭ್ಯರ್ಥಿ ಡಾ. ಆರ್.ಬಿ. ಶಿರಿಯಣ್ಣವರ ಹೇಳಿದರು.
ಸೋಮವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಲ್ಲಿ ಬಂದ ಅನುದಾನಗಳಲ್ಲಿ ಮೊರಾರ್ಜಿ ವಸತಿ ಶಾಲೆ, ಅಣ್ಣಿಗೇರಿಯಲ್ಲಿ ಅಗ್ನಿಶಾಮಕದಳ, ನವಲಗುಂದ ಬಸ್ ನಿಲ್ದಾಣದ ನವೀಕರಣ, ಕೆಎಸ್ಆರ್ಟಿಸಿ ನೂತನ ಡಿಪೋ, ಹಿಂದುಳಿದ ವರ್ಗಗಳ ವಸತಿ ನಿಲಯ, ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ನೂರಾರು ಕೋಟಿ ಅನುದಾನದಿಂದ ನವಲಗುಂದ ಕ್ಷೇತ್ರ ಅಭಿವೃದ್ಧಿಯಾಗಿದೆ. ಹೊರತು ಸ್ಥಳೀಯ ಶಾಸಕರ ಶ್ರಮದಿಂದ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದರು. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಸದಸ್ಯನಾಗಿದ್ದಾಗ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರುವಲ್ಲಿ ಶ್ರಮವಹಿಸಿದ್ದೇನೆ. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಜೊತೆ ಸತತ ಸಂಪರ್ಕ ಸಾಧಿಸಿ, ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ತಂದಿದ್ದೇನೆ ಎಂದರು. ಈಗಾಗಲೇ ಯಡಿಯೂರಪ್ಪನವರ ಅಭಿವೃದ್ಧಿ ಕೆಲಸಗಳನ್ನೇ ಮುಂದಿಟ್ಟುಕೊಂಡು ಅರ್ಧದಷ್ಟು ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದೇನೆ. ಜನರ ಪ್ರತಿಕ್ರಿಯೆ ಕೆಜೆಪಿಯತ್ತ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಲು ಸ್ಪರ್ಧಿಸಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿ, ನಾನು ಯಾರನ್ನು ಸೋಲಿಸಲು ನಿಂತಿಲ್ಲ. ನನಗೆ ಕ್ಷೇತ್ರದಲ್ಲಿ ಸಿಗುತ್ತಿರುವ ಬೆಂಬಲವನ್ನು ಸಹಿಸಲಾರದೇ ಈ ರೀತಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಎದುರಾಳಿಯಾಗಿದೆ ಹೊರತು, ಬಿಜೆಪಿ ಅಲ್ಲ ಎಂದರು.
ನಗರ ಘಟಕದ ಅಧ್ಯಕ್ಷ ಕೆ.ಡಿ. ಆನೇಗುಂದಿ, ಧುರೀಣರಾದ ಚನ್ನಪ್ಪ ಕೇಸರಪ್ಪನವರ, ಆನಂದ ಹವಳಕೋಡ, ಅನೀಲ್ ಸಿದ್ರಾಮಶೆಟ್ಟರ್ ಇತರರು ಇದ್ದರು.
ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಸದಸ್ಯನಾಗಿದ್ದಾಗ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರುವಲ್ಲಿ ಶ್ರಮವಹಿಸಿದ್ದೇನೆ. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಜೊತೆ ಸತತ ಸಂಪರ್ಕ ಸಾಧಿಸಿ, ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ತಂದಿದ್ದೇನೆ.
- ಡಾ. ಆರ್.ಬಿ. ಶಿರಿಯಣ್ಣವರ
ಕೆಜೆಪಿ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

