ಏಳೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 23
ಧಾರವಾಡ ಜಿಲ್ಲೆಯ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಮಂಗಳವಾರವೂ ಬಿರುಸಿನ ಪ್ರಚಾರ ಮುಂದುವರೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ, ಧಾರವಾಡ ವಿಧಾನಸಭೆ ಕ್ಷೇತ್ರದಲ್ಲಿ ಸೀಮಾ ಮಸೂತಿ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಪರ ಪ್ರಚಾರ ನಡೆಸಿದರು.
ಇದೇ ಸಂದರ್ಭದಲ್ಲಿ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೋಶಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಹಿರಂಗ ಪ್ರಚಾರ ನಡೆಸಿ, ತಮ್ಮ ಆಡಳಿತಾವಧಿಯಲ್ಲಿ ಅವಳಿ ನಗರಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು. 9 ತಿಂಗಳ ಅವಧಿಯಲ್ಲಿ ರಾಜ್ಯದಾದ್ಯಂತ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಕುರಿತು ವಿವರ ನೀಡಿದರು. ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಬಿಜೆಪಿ ಅಭ್ಯರ್ಥಿಗಳನ್ನು ಚುನಾಯಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್. ಮೋರೆ, ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ಕೆಜೆಪಿಯ ಮೋಹನ ಲಿಂಬಿಕಾಯಿ, ಜೆಡಿಎಸ್ನ ಇಸ್ಮಾಯಿಲ್ ತಮಾಟಗಾರ, ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ನ ವಿನಯ ಕುಲಕರ್ಣಿ, ಬಿಜೆಪಿಯ ಸೀಮಾ ಮಸೂತಿ, ಕೆಜೆಪಿಯ ತವನಪ್ಪ ಅಷ್ಟಗಿ, ಜೆಡಿಎಸ್ನ ಅಮೃತ ದೇಸಾಯಿ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಕ್ಷೇತ್ರದಲ್ಲಿ ಸಂಚರಿಸಿ ಮತ ಯಾಚಿಸಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಪತ್ನಿ ಶಿಲ್ಪಾ ಶೆಟ್ಟರ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ತಮ್ಮ ಪತಿಗೆ ಮತ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್ನ ಡಾ. ಮಹೇಶ ನಾಲವಾಡ, ಜೆಡಿಎಸ್ನ ತಬರೇಜ್ ಸಂಶಿ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಸಾದ ಅಬ್ಬಯ್ಯ, ಜೆಡಿಎಸ್ನ ಹನುಮಂತಪ್ಪ ಆಲ್ಕೋಡ, ಕೆಜೆಪಿಯ ಶಂಕರಪ್ಪ ಬಿಜವಾಡ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.
ಗ್ರಾಮೀಣ ಭಾಗದಲ್ಲಿಯೂ ಪ್ರಚಾರ ತುರುಸಿನಿಂದ ಸಾಗಿತ್ತು. ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಕಾಂಗ್ರೆಸ್ನ ಕೆ.ಎನ್. ಗಡ್ಡಿ, ಕೆಜೆಪಿಯ ಡಾ. ಆರ್.ಬಿ. ಶಿರಿಯಣ್ಣವರ, ಜೆಡಿಎಸ್ನ ಎನ್.ಎಚ್. ಕೋನರಡ್ಡಿ, ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಂತೋಷ ಲಾಡ್, ಬಿಜೆಪಿಯ ಈರಪ್ಪ ಸಲಗಾರ, ಜೆಡಿಎಸ್ನ ಪಿ.ಸಿ. ಸಿದ್ದನಗೌಡ್ರ, ಕೆಜೆಪಿಯ ಸಿ.ಎಂ. ನಿಂಬಣ್ಣವರ, ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಿ.ಎಸ್. ಶಿವಳ್ಳಿ, ಜೆಡಿಎಸ್ನ ಎಂ.ಎಸ್. ಅಕ್ಕಿ, ಕೆಜೆಪಿಯ ಎಸ್.ಐ. ಚಿಕ್ಕನಗೌಡ್ರ, ಬಿಜೆಪಿಯ ಎಂ.ಆರ್. ಪಾಟೀಲ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತ ಯಾಚಿಸಿದರು.
ಇತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಹ ಬಿರುಸಿನ ಪ್ರಚಾರ ಕೈಗೊಂಡರು. ಪಕ್ಷೇತರ ಅಭ್ಯರ್ಥಿಗಳು ತಮಗೆ ಚುನಾವಣೆ ಆಯೋಗದಿಂದ ಲಭಿಸಿರುವ ಲಾಂಛನಗಳನ್ನು ಮತದಾರರ ಅರಿವಿಗೆ ತರುವ ಪ್ರಯತ್ನ ನಡೆಸಿದ್ದರು.
ಕರ ಪತ್ರಗಳನ್ನು ಹಂಚುವುದು, ಆಟೋಗಳಲ್ಲಿ ಪ್ರಚಾರ ನಡೆಸುವುದು ಸೇರಿದಂತೆ ಪ್ರಚಾರದ ಇನ್ನಿತರ ಕಾರ್ಯಗಳು ಮಂಗಳವಾರವೂ ಭರದಿಂದ ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಂದುವರಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

