ಧಾರವಾಡ

ಸಿಲ್ಕ್ ಪ್ರದರ್ಶನ: ಚಿತ್ರಮಂದಿರಕ್ಕೆ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 2
ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಕನ್ನಡ ಚಲನಚಿತ್ರವೂ ಸೇರಿದಂತೆ ಭಾರತೀಯ ಸಿನೇಮಾಗಳಲ್ಲಿ ನಟಿಸುವುದನ್ನು ವಿರೋಧಿಸಿದ ಶ್ರೀರಾಮ ಸೇನಾ ಕಾರ್ಯಕರ್ತರು, ವೀಣಾ ಮಲ್ಲಿಕ್ ನಟಿಸಿದ ಕನ್ನಡ ಚಲನಚಿತ್ರ 'ಸಿಲ್ಕ್' ಪ್ರದರ್ಶನವಾಗುತ್ತಿರುವ ನಗರದ ಲಕ್ಷ್ಮೀಮಾತಾ ಚಿತ್ರಮಂದಿರಕ್ಕೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸಿಲ್ಕ್ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಚಲನಚಿತ್ರ ಮಂದಿರದ ಎದುರು ಧರಣಿ ನಡೆಸಿದರು.
ಭಯೋತ್ಪಾದನೆ ಮತ್ತು ಭೂಗತ ಚಟುವಟಿಕೆಗಳು ಚಲನಚಿತ್ರ ರಂಗದಲ್ಲಿ ಬೇರುಬಿಡುತ್ತಿರುವುದು ಅಪಾಯಕಾರಿ. ಪಾಕಿಸ್ತಾನದಲ್ಲಿರುವ ಭೂಗತಪಾತಕಿ ದಾವೂದ ಇಬ್ರಾಹಿಂ ಮತ್ತು ಬೇಹುಗಾರಿಕೆ ಸಂಸ್ಥೆ ಐಎಸ್ಐನ ಸಂಪೂರ್ಣ ಹಿಡಿತ ಭಾರತೀಯ ಚಿತ್ರರಂಗದ ಮೇಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವೀಣಾ ಮಲ್ಲಿಕ್ಳನ್ನು ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳು ತಮ್ಮ ದುಷ್ಕೃತ್ಯಕ್ಕೆ ಬಳಸುತ್ತಿಲ್ಲವೆಂಬುದನ್ನು ಹೇಗೆ ನಂಬುವುದು ಎಂದು ಶಂಕೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮುಂಬಯಿ ಚಿತ್ರೀಕರಣದ ಸಂದರ್ಭದಲ್ಲಿ ವೀಣಾ ಮಲ್ಲಿಕ್ 20 ದಿನ ಏಕಾಏಕೀ ಕಾಣೆಯಾಗಿ ಎಲ್ಲಿಗೆ ಹೋಗಿದ್ದಳು ಎಂದು ಪ್ರಶ್ನಿಸಿದರು. ಹಿಂದಿ ಚಿತ್ರರಂಗದ ಸಾಕಷ್ಟು ನಟರು ಹಾಗೂ ಇತರ ಕಲಾವಿದರು ಈಗಾಗಲೇ ಭೂಗತ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದು ಬಹಿರಂಗಗೊಂಡಿದೆ. ಇಂಥ ಸಂದರ್ಭದಲ್ಲಿ ಪಾಕಿಸ್ತಾನದ ನಟಿಯನ್ನು ಕರೆತಂದಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರನ್ನು ನಟನೆಗೆ ಬಳಸಿಕೊಳ್ಳಬಹುದಿತ್ತು. ಸಾರ್ವಜನಿಕರು ಸಿಲ್ಕ್ ಸೇರಿದಂತೆ ವೀಣಾ ಮಲ್ಲಿಕ್ ನಟಿಸಿರುವ ಯಾವುದೇ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡಬಾರದು. ಈ ಕುರಿತು ಚಲನಚಿತ್ರ ಮಂಡಳಿಗೆ ದೂರು ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಚಿತ್ರ ಮಂದಿರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಶ್ರೀರಾಮ ಸೇನೆಯ ಕುಮಾರ ಹಕಾರೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.