ಧಾರವಾಡ

ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿ ಸಜ್ಜು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 2
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯಲಿರುವ ಉಪಚುನಾವಣೆಯಲ್ಲಿ ನಾಗರಾಜ ಛಬ್ಬಿ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಬಿಜೆಪಿಯಿಂದ ಪ್ರದೀಪ್ ಶೆಟ್ಟರ್ ಹೆಸರು ಅಂತಿಮಗೊಂಡಿದೆ.
ತನ್ಮೂಲಕ ಎರಡೂ ಪ್ರಮುಖ ಪಕ್ಷಗಳು ಹೊಸಬರಿಗೆ ಆದ್ಯತೆ ನೀಡಿದಂತಾಗಿದೆ. ವಿಧಾನ ಪರಿಷತ್ ಚುನಾವಣಾ ಕಣ ಕಾಂಗ್ರೆಸ್ನ ನಾಗರಾಜ ಛಬ್ಬಿ ಹಾಗೂ ಬಿಜೆಪಿ ಪ್ರದೀಪ್ ಶೆಟ್ಟರ್ಗೆ ಹೊಸತು. ಇಬ್ಬರೂ ಪಕ್ಷದ ಸಂಘಟನಾ ಕಾರ್ಯದಲ್ಲಿ ತೊಡಗಿಕೊಂಡಿದ್ದರೇ ವಿನಃ ಯಾವುದೇ ಪ್ರಮುಖ ಚುನಾವಣೆ ಎದುರಿಸಿರಲಿಲ್ಲ ಎಂಬುದು ಗಮನಾರ್ಹ. ಈ ಹಿಂದೆ ವಿಧಾನ ಪರಿಷತ್ಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಶಿವರಾಜ ಸಜ್ಜನರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಆ. 22ರಂದು ಉಪಚುನಾವಣೆ ನಡೆಯಲಿದೆ.
ತೀವ್ರ ಪೈಪೋಟಿ: ಕಾಂಗ್ರೆಸ್ ಟಿಕೆಟ್ಗಾಗಿ ಗದಗನ ಮಾಜಿ ಶಾಸಕ ಡಿ.ಆರ್. ಪಾಟೀಲ, ಹಾವೇರಿಯ ಎಸ್.ಆರ್. ಪಾಟೀಲ ಹಾಗೂ ಧಾರವಾಡದ ನಾಗರಾಜ ಛಬ್ಬಿ ನಡುವೆ ಟಿಕೇಟ್ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದಿಂದ ನಾಗರಾಜ ಛಬ್ಬಿಗೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಛಬ್ಬಿ ಅವರಿಗೇ ಟಿಕೆಟ್ ಲಭಿಸಬಹುದೆಂಬ ನಿರೀಕ್ಷೆ ಇತ್ತು. ಸೋಮವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನ. ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು, ಅವಿಭಜಿತ ಧಾರವಾಡ ಜಿಲ್ಲೆಯಿಂದ ನಾಗರಾಜ ಛಬ್ಬಿಯನ್ನು ಕಣಕ್ಕಿಳಿಸಿದೆ. ಆ ಮೂಲಕ ಅವಿಭಜಿತ ಧಾರವಾಡ ಜಿಲ್ಲೆಯ ಕಣದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಅಂತಿಮಗೊಳಿಸಿದ ಮೊದಲ ಪಕ್ಷವಾಗಿದೆ.
ಬಿಕಾಂ ಪದವೀಧರರಾದ 43 ವರ್ಷದ ನಾಗರಾಜ ಛಬ್ಬಿ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾಗಿದ್ದಾಗ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದರು. ಆರೋಗ್ಯ ಶಿಬಿರ, ವಿವಿಧ ತರಬೇತಿ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ನಲ್ಲಿ ಉತ್ತಮ ಹೆಸರು ಗಳಿಸಿರುವ ನಾಗರಾಜ ಛಬ್ಬಿ, ಜನಸಾಮಾನ್ಯರಿಗೂ ಹತ್ತಿರ. ಕಲಘಟಗಿ ವಿಧಾನಸಭೆ ಕ್ಷೇತ್ರದಿಂದ ಎರಡು ಬಾರಿ ಸಂತೋಷ ಲಾಡ್ ಕಣಕ್ಕಿಳಿದಾಗ, ಅವರ ಗೆಲುವಿಗೂ ದುಡಿದಿದ್ದರು. ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ನಾಗರಾಜ ಛಬ್ಬಿ ಕಾರ್ಯನಿರ್ವಹಿಸಿದ್ದಾರೆ.
ಸೇವೆ ಸಲ್ಲಿಕೆ: 1992 ರಿಂದ 1994ರವರೆಗೆ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ನ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ, 1994ರಿಂದ 1996ರ ವರೆಗೆ ವಿದ್ಯಾರ್ಥಿ ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷರಾಗಿ, 1996ರಿಂದ 1998ರ ವರೆಗೆ ಯುವ ಕಾಂಗ್ರೆಸ್ನ ತಾಲೂಕು ಅಧ್ಯಕ್ಷರಾಗಿ, 2000ದಿಂದ 2003ರ ವರೆಗೆ ಯುವ ಕಾಂಗ್ರೆಸ್ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, 2004ರಿಂದ 2008ರ ವರೆಗೆ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, 2006ರಿಂದ 2010ರ ವರೆಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 2007ರಿಂದ 2011ರ ವರೆಗೆ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾಗಿ ನಾಗರಾಜ ಛಬ್ಬಿ ಕಾರ್ಯನಿರ್ವಹಿಸಿದ್ದಾರೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕೇಂದ್ರೀಯ ಸಲಹಾ ಸಮಿತಿ ಅಧ್ಯಕ್ಷರಾಗಿ 2007ರಿಂದ 2009ರ ವರೆಗೆ ಹಾಗೂ ಅಖಿಲ ಭಾರತ ಸೆನ್ಸಾರ್ ಮಂಡಳಿ ನಿರ್ದೇಶಕರಾಗಿ 2007ರಿಂದ 2010ರ ವರೆಗೆ ಕೆಲಸ ಮಾಡಿದ್ದಾರೆ.
ಪಕ್ಷದಲ್ಲಿ ಯಾವುದೇ ಹುದ್ದೆ ಇರಲಿ ಅಥವಾ ಇರದೇ ಇರಲಿ ನಾಗರಾಜ ಛಬ್ಬಿ ಸದಾ ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ. ಇದೇ ಕಾರಣಕ್ಕೆ ಹಳೇ ಹುಬ್ಬಳ್ಳಿಯಲ್ಲಿರುವ ಛಬ್ಬಿ ಅವರ ಮನೆಗೆ ನಿತ್ಯವೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭೇಟಿ ನೀಡುತ್ತಿರುತ್ತಾರೆ. ಈ ಹಿನ್ನೆಲೆ ಗಮನಿಸಿದಾಗ ನಾಗರಾಜಗೆ ಚುನಾವಣೆಯಲ್ಲಿ ಭಾರಿ ಬೆಂಬಲ ಲಭಿಸಲಿದೆ.

ಬಿಜೆಪಿಯಿಂದ ಪ್ರದೀಪ್ ಶೆಟ್ಟರ್ ಕಣಕ್ಕೆ
ಅವಿಭಜಿತ ಧಾರವಾಡ ಜಿಲ್ಲೆಯಿಂದ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ್ ಶೆಟ್ಟರ್ನ್ನು ಚುನಾವಣಾ ಕಣಕ್ಕೆ ಇಳಿಸಲು ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ನಿವಾಸದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊನೆಯ ಹಂತದಲ್ಲಿ ಪ್ರದೀಪ್ ಶೆಟ್ಟರ್ ಹಾಗೂ ಮುನೇನಕೊಪ್ಪ ಹೆಸರು ತೇಲಿ ಬಂದಿತ್ತು. ಎಲ್ಲ ಲೆಕ್ಕಾಚಾರ ಅಳೆದು ತೂಗಿ ಪ್ರದೀಪ್ ಶೆಟ್ಟರ್ ಹೆಸರು ಅಂತಿಮಗೊಳಿಸಲಾಯಿತು. ಶಿವರಾಜ ಸಜ್ಜನ ಬಿಜೆಪಿಯಿಂದಲೇ ಸ್ಪರ್ಧಿಸಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಬಿಜೆಪಿ ಹಿಂದಿನಂತೆ ಈ ಬಾರಿಯೂ ಗೆಲುವಿನ ನಗೆ ಬೀರುವ ವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಆದರೆ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಫಲಿತಾಂಶ ಅಂದುಕೊಂಡಷ್ಟು ಸುಲಭವಿಲ್ಲ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸವಿದೆ
ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲ್ಲುವ ಪೂರ್ಣ ವಿಶ್ವಾಸ ಇದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹತ್ತಾರು ಜನಪರ ಕಾರ್ಯ ಹಮ್ಮಿಕೊಂಡಿದ್ದು, ಉತ್ತಮ ಆಡಳಿತ ನೀಡುತ್ತಿದೆ. ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ತಾವು ಮಾಡಿರುವ ಕೆಲಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಗಮನಿಸಿದ್ದಾರೆ. ಯಾವುದೇ ಚುನಾವಣೆ ಇರಲಿ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ತಮ್ಮ ಕಾರ್ಯ ಗಮನಿಸಿ ಮತದಾರರು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ.
-ನಾಗರಾಜ ಛಬ್ಬಿ, ಕಾಂಗ್ರೆಸ್ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.