ಧಾರವಾಡ

ಪಿಡಿಒ ಅಕ್ರಮದ ಮತ್ತಷ್ಟು ಹೂರಣ ಬಯಲಿಗೆ

Published On :

-ಪ್ರಕಾಶ ಎಸ್. ಶೇಟ್
ಕ.ಪ್ರ.ವಾರ್ತೆ ಹುಬ್ಬಳ್ಳಿ ಆ. 4
ಕೆಪಿಎಸ್‌ಸಿ ಅಕ್ರಮಕ್ಕೆ ಮಿತಿಯೇ ಇಲ್ಲವಾಗಿದೆ. ಪಿಡಿಒ ನೇಮಕ ಪ್ರಕ್ರಿಯೆಯಲ್ಲಂತೂ ಅಕ್ರಮದ್ದೇ ಕಾರುಬಾರು. ಕೆಪಿಎಸ್‌ಸಿ ಕಳೆದ ಜೂನ್ 15ರಂದು ಬಿಡುಗಡೆ ಮಾಡಿರುವ ತಾತ್ಕಾಲಿಕ ನೇಮಕ ಪಟ್ಟಿಯ ಮೇಲೆ ಕಣ್ಣು ಹಾಯಿಸಿದರೆ ಅಕ್ರಮ ನಡೆದಿರುವುದು ಕಣ್ಣಿಗೆ ರಾಚುತ್ತದೆ.
ಪಿಡಿಒ ನೇಮಮ ಅಕ್ರಮದ ಮತ್ತಷ್ಟು ಹೂರಣ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಒಂದೇ ಕಾಲೇಜಿನಲ್ಲಿ ಓದುಗ ಮಿತ್ರರು, ಒಂದೇ ಊರಿನವರು ಇಷ್ಟು ಸಾಲದೆಂಬಂತೆ ಪರೀಕ್ಷೆಯಲ್ಲಿ ಹಿಂದೆ ಮುಂದೆ ಕುಳಿತು ನೇಮಕಗೊಂಡಿರುವುದು ಅಚ್ಚರಿ ಮೂಡಿಸಿದೆ.
ಧಾರವಾಡ ಪರೀಕ್ಷಾ ಕೇಂದ್ರದ ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿರುವ 8 ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ಪ್ರಕಟಗೊಂಡಿದೆ. ಇವರು ಪರೀಕ್ಷಾ ಕೊಠಡಿಯಲ್ಲಿ (ನೋಂದಣಿ ಸಂಖ್ಯೆ 422291, 422317, 422322, 422323, 422324, 422332, 422373, 422388) ಹಿಂದೆ ಮುಂದೆ ಅಥವಾ ಅಕ್ಕಪಕ್ಕ ಇರುವುದು ಗಮನಾರ್ಹ.
ಅದರಲ್ಲೂ ಮುಖ್ಯವಾಗಿ 422322, 422323, 422324 ಎಂಬುವರು ಒಬ್ಬರ ಹಿಂದೆ ಒಬ್ಬರು ಕುಳಿತಿದ್ದರು. 322 ಸಂಖ್ಯೆ ಸಂಗಮೇಶ ಸಜ್ಜನದ್ದಾಗಿದ್ದರೆ, 323 ಸಂಜೀವಕುಮಾರ ಜೋತಾವರ ಹಾಗೂ 324 ಉಸ್ಮಾನಗಣಿ ಸಿಂಧಗೀಕರ ಎಂಬುವವರದ್ದಾಗಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ಮೂವರೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಸಹಪಾಠಿಗಳು. ಈ ಪೈಕಿ ಸಂಜೀವ್‌ಕುಮಾರ್ ಬೈಲಹೊಂಗಲ ತಾಪಂಯಲ್ಲಿ ಪ್ರಸ್ತುತ ಎಫ್‌ಡಿಎ ಆಗಿದ್ದರೆ, ಉಸ್ಮಾನಗಣಿ ಸಿಂದಗಿಯಲ್ಲಿ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿತ್ರನನ್ನು ಪಿಡಿಒ ಆಗಿಸಲು ಇವರು ಪರೀಕ್ಷೆ ಬರೆದಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ರಾಯಚೂರಲ್ಲೂ ಇದೇ ಕಥೆ: ಇದಲ್ಲದೇ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮುದುಗಲ್ ಗ್ರಾಮದ ಶೋಭಾ ಗಂಟ್ಯಾಳ (ನೋಂ. ಸಂಖ್ಯೆ-510155) ಹಾಗೂ ಇದೇ ಗ್ರಾಮದ ಶಂಕ್ರಪ್ಪ ಎ. ಎನ್. (ನೊಂ. ಸಂಖ್ಯೆ-510159) ಅಕ್ಕಪಕ್ಕ ಕುಳಿತು ರಾಯಚೂರಿನಲ್ಲಿ ಪರೀಕ್ಷೆ ಬರೆದಿದ್ದರು. ಮುದಗಲ್‌ಗೆ ಹೊಂದಿಕೊಂಡಿರುವ ಕನ್ನಾಳ ಗ್ರಾಮದ ಸುರೇಶ ಲೋಣಿ (ನೋ. ಸಂಖ್ಯೆ-510161) ಹಾಗೂ ಪಂಪನಗೌಡ ಪಾಟೀಲ್ (ನೋಂ. ಸಂಖ್ಯೆ-510160) ಹಿಂದೆ ಮುಂದೆ ಕುಳಿತು ಪರೀಕ್ಷೆ ಬರೆದಿದ್ದು, ಇವರೆಲ್ಲರೂ ನೇಮಕವಾಗಿದ್ದಾರೆ. ಇದರ ಹಿಂದೆ ಅಕ್ರಮ ನಡೆದಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ.
ಈ ಅಕ್ರಮದ ತನಿಖೆ ನಡೆಸಬೇಕಿದೆ. ಇಲ್ಲದೇ ಹೋದ ಪಕ್ಷದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವುದೇ?

ಎಸಿ ಪರೀಕ್ಷೆ ಬರೆದಿದ್ದರೇ?
ಧಾರವಾಡದ ಒಂದೇ ಪರೀಕ್ಷಾ ಕೊಠಡಿಯಲ್ಲಿ 8 ಅಭ್ಯರ್ಥಿಗಳು ಆಯ್ಕೆಯಾಗುವ ಹಿಂದೆ ಸಹಾಯಕ ಆಯುಕ್ತ (ಎಸಿ)ರೊಬ್ಬರ ಕೈವಾಡವಿದೆ ಎನ್ನಲಾಗುತ್ತಿದೆ. ಸ್ವತಃ ಸಹಾಯಕ ಆಯುಕ್ತ ಪರೀಕ್ಷೆಗೆ ಹಾಜರಾಗಿ ಇನ್ನುಳಿದವರಿಗೆ ನೆರವಾಗಿದ್ದಾರೆ. ಎಲ್ಲಿ ಅಕ್ರಮ ಬೆಳಕಿಗೆ ಬರುವುದೋ ಎನ್ನುವ ಕಾರಣಕ್ಕೆ ತಾವು ಪರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಉತ್ತರ ಬರೆದು ಅನುತ್ತೀರ್ಣ ಆಗಿದ್ದಾರೆನ್ನಲಾಗಿದೆ. ಈ ಕೊಠಡಿಯಲ್ಲಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳ ಹೆಸರು ಹುಡುಕಿ ಇದೀಗ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವವರ್ಯಾರು ಎಂಬುದನ್ನು ತನಿಖೆ ಮಾಡಿದರೆ ಅಸಲಿಯತ್ತು ಬೆಳಕಿಗೆ ಬರುತ್ತದೆ.

ಅರ್ಜಿ ಸಲ್ಲಿಸುವ ಹಕೀಕತ್ತು?
ಪರೀಕ್ಷೆಯಲ್ಲಿ ನೋಂದಣಿ ಸಂಖ್ಯೆ ಅಕ್ಕ-ಪಕ್ಕ ಅಥವಾ ಹಿಂದೆ-ಮುಂದೆ ಹೇಗೆ ಬರುತ್ತದೆ ಎಂಬ ಸಂಗತಿಯೇ ಕುತೂಹಲ. ಹೊಂದಾಣಿಕೆ ಮಾಡಿಕೊಂಡವರು ತಡ ರಾತ್ರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ಸರ್ವರ್ ಸಮಸ್ಯೆ ಕಾಡುವುದಿಲ್ಲ. ಅಗತ್ಯವಿರುವಷ್ಟು ಕಂಪ್ಯೂಟರ್ ಮುಂದೆ ಕುಳಿತು ಏಕಕಾಲಕ್ಕೆ ಭರ್ತಿ ಮಾಡಿದ ಅರ್ಜಿಯನ್ನು ರವಾನೆ ಮಾಡುತ್ತಾರೆ. ಹೀಗಿದ್ದಾಗ ಇವರೆಲ್ಲರ ನೋಂದಣಿ ಸಂಖ್ಯೆ ಹಿಂದೆ ಮುಂದೆ ಬಂದು ಬಿಡುತ್ತದೆ.

ಅಕ್ರಮ ಹೇಗೆ ನಡೆಯುತ್ತದೆ?
ಪರೀಕ್ಷೆಯಲ್ಲಿ ಅಕ್ಕ-ಪಕ್ಕ ಅಥವಾ ಹಿಂದೆ-ಮುಂದೆ ಕುಳಿತವರ ಪೈಕಿ ಒಬ್ಬ ಪ್ರತಿಭಾನ್ವಿತ ಅಭ್ಯರ್ಥಿ, ಹೊಂದಾಣಿಕೆ ಮಾಡಿಕೊಂಡವರ ಒಎಂಆರ್ ಶೀಟ್ ಪಡೆದು ಸರಿಯುತ್ತರ ಗುರುತು ಹಾಕುತ್ತಾನೆ. ಇಲ್ಲದಿದ್ದರೆ ತಾನು ಗುರುತು ಹಾಕಿರುವ ಉತ್ತರವನ್ನು ಅವರಿಗೆ ತೋರಿಸುತ್ತಾನೆ. ಗೆಳೆಯ ಎನ್ನುವ ಕಾರಣಕ್ಕಾಗಿ ಅಥವಾ ದುಡ್ಡಿಗಾಗಿ ಇಂಥ ಅಕ್ರಮಗಳು ನಡೆಯುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.