ಮಾಧ್ಯಮಿಕ ಶಿಕ್ಷಕರ ಸಂಘ: ಸಂದೀಪ್ ಬೂದಿಹಾಳ ನೇಮಕ
ಹುಬ್ಬಳ್ಳಿ: ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿ ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ವಿಜಯನಗರ ಪಿಯು ಕಾಲೇಜಿನ ಪ್ರಾಚಾರ್ಯ ಸಂದೀಪ್ ಬೂದಿಹಾಳ ನೇಮಕಗೊಂಡಿದ್ದಾರೆ. ಸಂಘದ ರಾಜ್ಯಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಸಿಂಧನಕೇರಾ ಪುನರಾಯ್ಕೆಗೊಂಡಿದ್ದಾರೆ. ಸಂಘದ ಕಾರ್ಯಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಪೋಷಕರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೃ. ನರಹರಿ ಹಾಗೂ ಎಚ್. ನಾಗಭೂಷಣರಾವ್ ನೇಮಕಗೊಂಡಿದ್ದಾರೆ.
ಇಂದಿನಿಂದ ಪುರಾಣ
ನವಲಗುಂದ: ಶ್ರಾವಣ ಮಾಸದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವು ಶ್ರೀ ಕಲಬುರ್ಗಿ ಶರಣಬಸವೇಶ್ವರ ಪುರಾಣವನ್ನು 7ರಂದು ಪಡೇಸೂರ ಗ್ರಾಮದ ಸದ್ಭಕ್ತ ಮಂಡಳಿ ಸಹಯೋಗದೊಂದಿಗೆ ಸಂಜೆ 7.30ರಿಂದ 9 ಗಂಟೆವರೆಗೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜರುಗುವುದು. ಸಾನ್ನಿಧ್ಯವನ್ನು ನವಲಗುಂದ ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಬೈಕ್ ಕಳ್ಳತನ
ಹುಬ್ಬಳ್ಳಿ: ಸ್ನೇಹಿತನ ಮನೆ ಎದುರು ನಿಲ್ಲಿಸಿದ್ದ ಬೈಕ್ನ್ನು ಹಳೇ ಹುಬ್ಬಳ್ಳಿ ಟಿಪ್ಪು ನಗರ ನಿವಾಸಿ ಕಳ್ಳತನ ಮಾಡಿದ್ದಾನೆ ಎಂದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಕುಲ ರಸ್ತೆಯ ಶಾಂತನು ದಾಮೋಜಿ ನರಗುಂದ ತಮ್ಮ ಮನೆ ಎದುರು ಬೈಕ್ ನಿಲ್ಲಿಸಲು ಸ್ಥಳ ಇಲ್ಲ ಎಂದು ಹಳೇ ಹುಬ್ಬಳ್ಳಿಯ ಶರಾವತಿ ನಗರದ ಶಂಕರಸಿಂಗ್ ಕಾಲವಾಡ ಮನೆ ಎದುರು ಬೈಕ್ ನಿಲ್ಲಿಸಿದ್ದರು. ಹಳೇ ಹುಬ್ಬಳ್ಳಿ ಟಿಪ್ಪು ನಗರ ನಿವಾಸಿ ಸಾಧಿಕ್ ಇಸಾಕ್ ಪಂತೋಜಿ ಬೈಕ್ನ್ನು ಕಳ್ಳತನ ಮಾಡಿದ್ದಾನೆ ಎಂದು ಶಾಂತನು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಟ್ಟಿಗೆ ಅಕ್ರಮ ಸಾಗಾಟ: ಓರ್ವನ ಬಂಧನ
ಕಲಘಟಗಿ: ಸಾಗವಾನಿ ಕಟ್ಟಿಗೆ ಸಾಗಿಸುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಕೂಡಲಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ನಿನ್ನೆ ರಾತ್ರಿ 10-15 ಜನ ಮರಗಳ್ಳರು ಲಕ್ಷಾಂತರ ಬೆಲೆಬಾಳುವ ಸಾಗವಾನಿ ಕಟ್ಟಿಗೆಯನ್ನು ಸಾಗಿಸುತ್ತಿದ್ದರು. ಆಗ ದಾಳಿ ನಡೆಸಿದ ಅರಣ್ಯ ಇಲಾಖೆಯವರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ, ತಾಲೂಕು ಅರಣ್ಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ, ಹುಲಗಿನಕಟ್ಟಿ ತಾಂಡಾದ ವಾಸು ರತ್ನಪ್ಪ ಲಮಾಣಿ ಎಂಬುವನನ್ನು ಬಂಧಿಸಿದ್ದು, ಇನ್ನಿತರರು ಕಟ್ಟಿಗೆ ಚಲ್ಲಿ ಪರಾರಿಯಾಗಿದ್ದಾರೆ ಎಂದು ವನಪಾಲಕ ಪ್ರವೀಣಕುಮಾರ ಮೋರೆ ತಿಳಿಸಿದ್ದಾರೆ.
ನಾಮಪತ್ರ ವಾಪಸ್ಗೆ ನಾಳೆ ಕೊನೆ ದಿನ
ಧಾರವಾಡ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಧಾರವಾಡ ಕ್ಷೇತ್ರದ ಸದಸ್ಯ ಸ್ಥಾನದ ಉಪಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಸಲ್ಲಿಸಿದ ಏಳು ನಾಮಪತ್ರಗಳು ಕ್ರಮಬದ್ಧವಾಗಿದೆ. ನಾಮಪತ್ರ ಹಿಂತೆಗೆಯಲು ಆ. 8 ಕೊನೆ ದಿನ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಮೀರ್ ಶುಕ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪೂರ್ವಭಾವಿ ಸಭೆ
ಕಲಘಟಗಿ: ಆ. 15ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 219ನೇ ಜಯಂತ್ಯುತ್ಸವ ಆಚರಿಸುವ ಕುರಿತು ಆ. 7ರಂದು ಸಂಜೆ 3ಕ್ಕೆ ಪಟ್ಟಣದ ಎಪಿಎಂಸಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಹಾಗೂ ಡಾ. ರಾಜ್ಕುಮಾರ ಕನ್ನಡ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಬೇಕು. ಅಲ್ಲದೆ ಅಂದು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಸರ್ಕಸ್ನಲ್ಲಿ ಚಿತ್ರ ನಟ ಶಿವರಾಜ ಕುಮಾರ ಆಗಮಿಸಲಿದ್ದು, ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಭು ರಂಗಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಿಕ್ಷಕರ ಕಾರ್ಯಾಗಾರ
ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಐಇಎಂಎಸ್ ಬಿ ಸ್ಕೂಲ್ ಆವರಣದಲ್ಲಿ ಆ. 7ರಂದು ಒಂದು ದಿನದ ಶಿಕ್ಷಕರ ಕಾರ್ಯಾಗಾರ ಏರ್ಪಡಿಸಲಾಗಿದೆ. ಮಂಗಳೂರು ವಿವಿಯ ಸಂಶೋಧಕ ಡಾ. ಮಲ್ಲಿಕಾರ್ಜುನಪ್ಪ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಸಿ. ಪಾಟೀಲ ಪಾಲ್ಗೊಳ್ಳುವರು. ಪದವಿ ಕಾಲೇಜುಗಳ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಮಾಹಿತಿಗೆ ಮೊ: 94801 33258 ಅಥವಾ 99862 89596 ಸಂಪರ್ಕಿಸಲು ಕೋರಲಾಗಿದೆ.
ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ: ಮೆದುಳಿನಲ್ಲಿ ಉಂಟಾಗಿದ್ದ ರಕ್ತಸ್ರಾವದಿಂದಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ನವಜಾತ ಶಿಶುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಇಲ್ಲಿನ ಬಾಲಾಜಿ ಆಸ್ಪತ್ರೆ ನರರೋಗ ತಜ್ಞರು ಮಗುವನ್ನು ಜೀವಾಪಾಯದಿಂದ ಪಾರು ಮಾಡಿದ್ದಾರೆ. ಆಸ್ಪತ್ರೆ ಅಧ್ಯಕ್ಷ, ನರರೋಗ ತಜ್ಞ ಡಾ. ಕ್ರಾಂತಿಕಿರಣ್ ಅವರು ಮೆದುಳಿನಲ್ಲಿ ಆಗುತ್ತಿದ್ದ ತೀವ್ರ ರಕ್ತಸ್ರಾವದಿಂದಾಗಿ ಮಗು ತಾಯಿಯ ಹಾಲು ಸೇವಿಸುವುದಕ್ಕೆ ಕೂಡ ಒದ್ದಾಡುತ್ತಿತ್ತು. ಅಲ್ಲದೆ, ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಗು ಪ್ರಜ್ಞೆ ಕೂಡ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿನ ಶಸ್ತ್ರಚಿಕಿತ್ಸೆ ನೆರವೇರಿಸಲು ನಿರ್ಧರಿಸಲಾಯಿತು. ಚಿಕ್ಕಮಕ್ಕಳ ತಜ್ಞ ಡಾ. ಪ್ರಕಾಶ ವಾಲಿ, ಡಾ. ವಿಜಯ ಯಲಿವಾಳ, ಡಾ. ಜಗದೀಶ್ ಬಾರಿಗಿಡದ ಅವರೊಂದಿಗೆ ಸೇರಿಕೊಂಡು ಡಾ. ಕ್ರಾಂತಿ ಕಿರಣ್ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಶಸ್ತ್ರಚಿಕಿತ್ಸೆ ನಂತರ ಮಗು ಗುಣಮುಖವಾಗಿದೆ ಎಂದು ಡಾ. ಕ್ರಾಂತಿ ಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

