ಬಾಲವಿಕಾಸ ಅಕಾಡೆಮಿ ಅಧ್ಯಕ್ಷರ ಗಾದಿ ಖಾಲಿ
ಧಾರವಾಡ: ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ಅದರಲ್ಲೂ ಧಾರವಾಡದಲ್ಲಿ 2009ರಲ್ಲಿ ಸ್ಥಾಪಿತವಾದ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಕಳೆದ ಎರಡೂವರೆ ತಿಂಗಳಿಂದ ಅಧ್ಯಕ್ಷರ ಕೊರತೆ ಅನುಭವಿಸುತ್ತಿದೆ.
ಮಕ್ಕಳ ಕ್ಷೇತ್ರದಲ್ಲಿ ದುಡಿದ ಅರ್ಹ ವ್ಯಕ್ತಿಯನ್ನು ಅಕಾಡೆಮಿ ಗಾದಿಗೆ ಕುಳ್ಳರಿಸುವ ಕೆಲಸ ರಾಜ್ಯ ಸರ್ಕಾರ ಆದಷ್ಟು ಶೀಘ್ರವಾಗಿ ಮಾಡಬೇಕಿದ್ದು, ವಿಳಂಬ ನೀತಿಯಿಂದ ಅಕಾಡೆಮಿಯ ಅನೇಕ ಮಹತ್ತರ ಯೋಜನೆಗಳು ಚಾಲ್ತಿಯಲ್ಲಿದ್ದರೂ ವೇಗ ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿವೆ.
ಏನೇನು ವಿಳಂಬ...?: ಪ್ರಸ್ತುತ ಅಕಾಡೆಮಿಯು ಬಾಡಿಗೆ ಕಟ್ಟಡದಲ್ಲಿದ್ದು, ಲಕಮನಹಳ್ಳಿ ಬಳಿ ಒಂದು ಎಕರೆಯಲ್ಲಿ ನೂತನ ಆಡಳಿತ ಕಟ್ಟಡ ಒಂದು ವರ್ಷದಿಂದ ನಿರ್ಮಾಣವಾಗುತ್ತಿದ್ದು, ಅಡಿಪಾಯ ಮಾತ್ರ ಹಾಕಲಾಗಿದೆ. ಈ ಬಜೆಟ್ನಲ್ಲಿ ಘೋಷಣೆಯಾದ ರು. 5 ಕೋಟಿ ಬಂದ ನಂತರವೇ ಆ ಕಾರ್ಯ ಮುಂದೆ ಸಾಗಲಿದೆ. ಅಲ್ಲದೆ, 2011-12ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ನೀಡುವಲ್ಲಿಯೂ ವಿಳಂಬವಾಗಿದ್ದು, ಮಕ್ಕಳ ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು ಆಯ್ಕೆ ಮಾಡಲು ಸಹ ಅಕಾಡೆಮಿ ಹಿಂದೆ ಬಿದ್ದಿದೆ. ಇದಕ್ಕಿಂತ ಪ್ರಮುಖವಾಗಿ ಅಕಾಡೆಮಿ ಎಂಟು ಜನ ಸದಸ್ಯರ ಪೈಕಿ ಐವರ ಅಧಿಕಾರಾವಧಿ ಮುಗಿದಿದ್ದು, ಉಳಿದ ಮೂವರು ಮಾತ್ರ ಉಳಿದುಕೊಂಡಿದ್ದಾರೆ. ಐವರು ಸದಸ್ಯರ ಸ್ಥಾನಗಳು ಖಾಲಿ ಆಗಿ ಬಹಳ ದಿನಗಳು ಕಳೆದರೂ ನೇಮಕಾತಿ ಆಗಿಲ್ಲ. ಅಧ್ಯಕ್ಷರೂ ಇಲ್ಲ ಹಾಗೂ ಸದಸ್ಯರ ಕೋರಂ ಸಹ ಇಲ್ಲದ್ದರಿಂದ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಯೋಜನಾಧಿಕಾರಿಗಳಿಗೆ ತೊಂದರೆಯಾಗಿದೆ. ಮಕ್ಕಳು ಬರೆದ ಕವನ, ಲೇಖನ ಹೀಗೆ ಸಾಹಿತ್ಯ ರಚನೆಯ ಮುದ್ರಣ ಕಾರ್ಯವೂ ಮಂದಗತಿಯಲ್ಲಿ ನಡೆಯುತ್ತಿದೆ. ಇದೇ ರೀತಿಯ 2013ನೇ ಸಾಲಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಯೋಜನಾಧಿಕಾರಿಗಳು ಸಿದ್ಧ ಮಾಡಿದ್ದರೂ ಎಲ್ಲದಕ್ಕೂ ರಾಜಧಾನಿ ನೆಚ್ಚುವ ಸ್ಥಿತಿ ಉಂಟಾಗಿದೆ.
ಅಧ್ಯಕ್ಷರು ಇಲ್ಲದಿದ್ದರೂ ಅಕಾಡೆಮಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಯೋಜನಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರೂ ಯೋಜನೆಗಳ ಮಾರ್ಗದರ್ಶನಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರ ಬೇಕೆ ಬೇಕು. ಮಕ್ಕಳ ಪ್ರತಿಭೆ ಓರೆಗೆ ಹಚ್ಚುವ ಮಕ್ಕಳ ಹಬ್ಬ, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡುವ ಯೋಜನೆಗಳನ್ನು ಬರುವ ದಿನಗಳಲ್ಲಿ ಮಾಡಬೇಕಿದೆ. ಅನಾಥ ಬಾಲಕರ ಬಾಲ ಮಂದಿರಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಮಾಡಬೇಕಿದೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳ ದಾಖಲೀಕರಣ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದ್ದು, ಪುಸ್ತಕ ಮುದ್ರಣವಾಗಬೇಕಷ್ಟೇ ಎನ್ನುತ್ತಾರೆ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ.
ಈ ಮಧ್ಯೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಗಾದಿಗೆ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶಂಕರ ಹಲಗತ್ತಿ ಅವರು ಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಬಿಜೆಪಿ ಸರ್ಕಾರ ಈ ಹಿಂದೆ ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಹಲಗತ್ತಿ ಅವರನ್ನು ವಜಾಗೊಳಿಸಿ ಮಹೇಶ ಟೆಂಗಿನಕಾಯಿ ಅವರನ್ನು ನೇಮಿಸಿತ್ತು.
ಈಗ ಕಾಂಗ್ರೆಸ್ ಸರ್ಕಾರ ಬಂದಿದ್ದರಿಂದ ಮಹೇಶ ಟೆಂಗಿನಕಾಯಿ ಅವರು ತಾವಾಗಿಯೇ ರಾಜಿನಾಮೆ ಸಲ್ಲಿಸಿದ್ದು, ಶಂಕರ ಹಲಗತ್ತಿ ಅವರಿಗೆ ಮತ್ತೊಮ್ಮೆ ಅವಕಾಶ ಒದಗುವ ಸಾಧ್ಯತೆ ಇದೆ.
ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು ಹಾಗೂ ನಿಗಮ ಮಂಡಳಿಗಳಂತೆ ಈ ಅಕಾಡೆಮಿ ಅಲ್ಲ. ಇದರ ಕಾರ್ಯ ನಿರ್ವಹಣೆ ಪೂರ್ತಿ ಮಕ್ಕಳ ಕ್ಷೇತ್ರದ್ದಾಗಿದ್ದು, ಅಕಾಡೆಮಿ ವಿಷಯದಲ್ಲಿ ಇಷ್ಟೊಂದು ತಡ ಮಾಡುತ್ತಿರುವುದು ಮಕ್ಕಳ ತಜ್ಞರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಬೇಸರ ಮೂಡಿಸಿದೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

