ಕರ್ನಾಟಕ ಕಾಲೇಜು ಸಂಸ್ಥಾಪಕರ ದಿನಾಚರಣೆ
ಧಾರವಾಡ: ಕರ್ನಾಟಕ ಕಾಲೇಜು ಅಸ್ತಿತ್ವಕ್ಕೆ ಬರಲು ಕಾರಣಿಭೂತರಾದವರ ಸ್ಮರಣೆಗಾಗಿ ಗುರುವಾರ ಕರ್ನಾಟಕ ಕಾಲೇಜು ಆವರಣದಲ್ಲಿ ಸಂಸ್ಥಾಪಕರ ದಿನ ಆಚರಿಸಲಾಯಿತು. ಕಾಲೇಜು ಆರಂಭಕ್ಕೆ ಪ್ರೇರಕ ಶಕ್ತಿಗಳಾದ ರಾವ್ ಬಹದ್ದೂರ ಅರಟಾಳ ರುದ್ರಗೌಡರ ಮೂರ್ತಿಗೆ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ, ದಿವಾನ್ ಬಹದ್ದೂರ ರೊದ್ದ ಶ್ರೀನಿವಾಸರಾಯರ ಮೂರ್ತಿಗೆ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎಸ್. ಅರಳಿ ಮಾಲಾರ್ಪಣೆ ಮಾಡಿದರು. ಸರ್. ಸಿದ್ದಪ್ಪ ಕಂಬಳಿ ಅವರ ಮೂರ್ತಿಗೆ ವಿಜ್ಞಾನ ಕಾಲೇಜಿನ ಉಪಪ್ರಾಚಾರ್ಯ ಡಾ. ಮೂಲಿಮನಿ ಮಾಲಾರ್ಪಣೆ ಮಾಡಿದರು. ಉಪ ಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ ಇದೇ ಸಂದರ್ಭ ಜ್ಞಾನಪೀಠ ಪುರಸ್ಕೃತ ಡಾ. ವಿ.ಕೃ. ಗೋಕಾಕ ಮೂರ್ತಿಗೆ ಅವರ ಜನ್ಮದಿನದ ನಿಮಿತ್ತ ಮಾಲಾರ್ಪಣೆ ಮಾಡಿದರು. ಕಾಲೇಜು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ತುವಾರ ಸ್ವಾಗತಿಸಿದರು. ಡಾ ಎಂ.ಬಿ. ದಳಪತಿ ವಂದಿಸಿದರು. ಪ್ರಾಧ್ಯಾಪಕರಾದ ಡಾ. ಹುದ್ದಾರ, ಡಾ. ಎಸ್.ಎಂ. ಹಿರೇಮಠ, ಎನ್ನೆಸ್ಸೆಸ್ ಪ್ರತಿನಿಧಿ ನವೀನ ಡವಳೇಶ್ವರ ಇದ್ದರು.
ಕ್ಯಾಂಪಸ್ ಸಂದರ್ಶನ: 151 ವಿದ್ಯಾರ್ಥಿಗಳು ಆಯ್ಕೆ
ಧಾರವಾಡ: ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಐಸಿಐಸಿಐ ಬ್ಯಾಂಕಿನ ಬ್ಯಾಂಕ್ ಅಧಿಕಾರಿಗಳ ಹುದ್ದೆಯ ಕ್ಯಾಂಪಸ್ ಸಂದರ್ಶನದಲ್ಲಿ 151 ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯುವ ತರಬೇತಿಗೆ ಆಯ್ಕೆಯಾಗಿದ್ದಾರೆ. ಉ.ಕದ ವಿವಿಧ ಜಿಲ್ಲೆಗಳ ಸುಮಾರು 345 ಬಿಎ, ಬಿಕಾಂ, ಎಂಬಿಎ, ಬಿಇ, ಬಿಸಿಎ, ಬಿಬಿಎ ಪದವೀಧರರು ಭಾಗವಹಿಸಿದ್ದರು. ಮೈಸೂರಿನ ಗ್ರ್ಯಾಜುಯೇಟ್ ಡಿಪ್ಲೋಮಾ ಇನ್ ಬ್ಯಾಂಕಿಂಗ್ ಅಧಿಕಾರಿ ಆದರ್ಶ ಸಂದರ್ಶನದ ನೇತೃತ್ವ ವಹಿಸಿದ್ದರು. ಬ್ಯಾಂಕ್ ಪರೀಕ್ಷೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಕಾಲವೊಂದಿತ್ತು. ಆದರೆ, ಬ್ಯಾಂಕುಗಳೇ ಇಂದು ಆಯ್ಕೆ ಮಾಡಿ, ತರಬೇತಿ ನೀಡಿ, ಉದ್ಯೋಗ ನಿಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇವಲ ಅಂಕಗಳು ಉದ್ಯೋಗದ ಆಯ್ಕೆಗೆ ಮಾನದಂಡವಾಗಲಾರದು ಸಂವಹನ ಕಲೆ, ಸಮಯ ಪರಿಪಾಲನೆಗಳೂ ಮಹತ್ವದ ಪಾತ್ರವಹಿಸುತ್ತವೆ ಎಂದು ಆದರ್ಶ ಹೇಳಿದರು. ಪ್ರಾಚಾರ್ಯ ಡಾ. ಅಜಿತ ಪ್ರಸಾದ, ಉದ್ಯೋಗಾಧಿಕಾರಿ ಮಹಾವೀರ ಉಪಾಧ್ಯ ಇದ್ದರು.
ಪಿಎಚ್ಡಿ ಪ್ರದಾನ
ಧಾರವಾಡ: ಕರ್ನಾಟಕ ಕಾಲೇಜಿನ ಭಾಷಾ ವಿಜ್ಞಾನ ವಿಭಾಗದ ಉಪನ್ಯಾಸಕರಾಗಿರುವ ಡಾ. ಮುತ್ತಣ್ಣ ಭಜಂತ್ರಿ ಅವರು ಗದಗ ಜಿಲ್ಲೆ ಮುಂಡರಗಿ ತಾಲೂಕು ಕೊರಮ ಜನಾಂಗದ ಭಾಷೆಯ ಸ್ವರೂಪ ಹಾಗೂ ದೇಶಿ ಭಾಷೆಗಳ ಪ್ರಭಾವ ವಿಷಯದ ಕುರಿತು ಡಾ.ಎ. ಮುರಿಗೆಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕರ್ನಾಟಕ ವಿವಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಪಿಎಚ್ಡಿ ಪ್ರದಾನ ಮಾಡಿದೆ.
ಆರೋಗ್ಯ ರಕ್ಷಾ ಯೋಜನೆ
ಧಾರವಾಡ: ಪ್ರಸಕ್ತ ಸಾಲಿನ ಯಶಸ್ವಿನಿ ರೈತರ ಆರೋಗ್ಯ ರಕ್ಷಾ ಯೋಜನೆ ನೋಂದಣಿ ಆರಂಭವಾಗಿದ್ದು, ಆಸಕ್ತರು ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಯಶಸ್ವಿನಿ ರೈತರ ಆರೋಗ್ಯ ರಕ್ಷಾ ಯೋಜನೆಯ ನೋಂದಣಿ ಕಾರ್ಯ ಜು. 15ರಿಂದ ಆರಂಭವಾಗಿದ್ದು, ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಒಬ್ಬ ಸದಸ್ಯ ಒಂದು ವರ್ಷಕ್ಕೆ ನೋಂದಣಿ ಶುಲ್ಕ ರು. 120 ಭರಿಸತಕ್ಕದ್ದು. ಆದರೆ, ಎಸ್ಸಿ,ಎಸ್ಟಿ ಪಂಗಡದ ಸದಸ್ಯರು ಕೇವಲ 10 ಭರಿಸಬೇಕಿದೆ. ಉಳಿದ ರು. 200ನ್ನು ಯಶಸ್ವಿನಿ ಟ್ರಸ್ಟ್ ಭರಿಸಲಿದೆ. ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಎಲ್ಲರೂ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಪ್ರಾಂತ್ಯದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಶಿವ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಪ್ರಕೃತಿ ಚಿಕಿತ್ಸೆ
ಹುಬ್ಬಳ್ಳಿ: ಡಾ.ಕೆ.ಎಸ್. ಶರ್ಮಾ ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ ಕೇಂದ್ರದಿಂದ ಆ. 11ರ ಬೆಳಗ್ಗೆ 10ಕ್ಕೆ ಗೋಕುಲ ರಸ್ತೆಯ ಭಾಷ್ಯಾಚಾರ್ಯ ಸಂಸ್ಮರಣ ಸಭಾಭವನದಲ್ಲಿ ಉಚಿತ ಆರೋಗ್ಯ ಶಿಬಿರ-ಅರ್ಥರೈಟಿಸ್, ಸಂಧಿವಾತಕ್ಕೆ ಪ್ರಕೃತಿ ಚಿಕಿತ್ಸೆ ಏರ್ಪಡಿಸಲಾಗಿದೆ. ಪ್ರಕೃತಿ ಚಿಕಿತ್ಸೆ ಬಗ್ಗೆ ಡಾ. ಸ್ನೇಹಾ ಬೆಲ್ ಉಪನ್ಯಾಸ ನೀಡಲಿದ್ದಾರೆ. ಡಾ.ಕೆ.ಎಸ್. ಶರ್ಮಾ ಶಿಬಿರದ ಅಧ್ಯಕ್ಷತೆ ವಹಿಸುವರು. ಈ ವಿಶೇಷ ವೈದ್ಯಕೀಯ ಚಿಕಿತ್ಸೆಯ ಲಾಭವನ್ನು ಸಾರ್ವಜನಿಕರು ಪಡೆಯಬಹುದು ಎಂದು ಈರಣ್ಣ ನೂಲ್ವಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ 7676131125 ಸಂಪರ್ಕಿಸಿ.
ನಾಳೆ ಚೆಸ್ ಪಂದ್ಯಾವಳಿ
ಹುಬ್ಬಳ್ಳಿ: ಹುಬ್ಬಳ್ಳಿ ಚೆಸ್ ಆಕಾಡೆಮಿ ಯಿಂದ ಆ. 11ರಂದು ವಿದ್ಯಾನಗರದ ಸುಕೃತಿ ಪದವಿ ಕಾಲೇಜಿನಲ್ಲಿ 10, 14 ವರ್ಷದೊಳಗಿನವರಿಗಾಗಿ ಚೆಸ್ ಟೂರ್ನ್ಮೆಂಟ್ ಆಯೋಜಿಸಲಾಗಿದೆ. ಸ್ವಿಸ್ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರೀಡಾಪಟುಗಳು ಬೆಳಗ್ಗೆ 9ಕ್ಕೆ ಸುಕೃತಿ ಕಾಲೇಜಿನಲ್ಲಿರಬೇಕೆಂದು ಸಂಸ್ಥಾಪಕ ಅಧ್ಯಕ್ಷ ಕೆ.ವಿ. ಶ್ರೀಪಾದ ಹೇಳಿದ್ದಾರೆ. ಮಾಹಿತಿಗೆ 9591911168 ಸಂಪರ್ಕಿಸಿ.
ಯವಕರ ಕೈಯಲ್ಲಿ ದೇಶದ ಭವಿಷ್ಯ: ಪ್ರೊ. ಹೊರಡಿ
ಧಾರವಾಡ: ಯುವಜನತೆಯ ಕೈಯಲ್ಲಿ ದೇಶದ ಭವಿಷ್ಯ ಅಡಗಿದೆ. ವಿದ್ಯಾರ್ಥಿ ಜೀವನದಲ್ಲಿ ದೇಶಪ್ರೇಮ, ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ದೇಶ ರಕ್ಷಣೆಗೆ ಸಜ್ಜಾಗಬೇಕಿದೆ ಎಂದು ಕರ್ನಾಟಕ ಕಾಲೇಜಿ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರೊ.ಆರ್.ವಿ. ಹೊರಡಿ ಹೇಳಿದರು. ಸಮೀಪದ ರಾಯಾಪುರ ಬಳಿ ಎಸ್ಜೆಎಂವಿ ಮಹಾಂತ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಪ್ರಾಮಾಣಿಕ ದಕ್ಷ ನಾಯಕರ ಅಗತ್ಯವಿದೆ. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಾಯಕ ಗುಣಗಳನ್ನು ಬೆಳೆಸಿಕೊಂಡು ದೇಶಕ್ಕೆ ಉಜ್ವಲ ಭವಿಷ್ಯ ನೀಡಬೇಕು ಎಂದರು. ತರೀಕೆರೆ ಎಸ್ಜೆಎಂವಿ ಕಾಲೇಜು ಪ್ರಾಚಾರ್ಯ ಪ್ರೊ.ಕೆ.ವಿ. ಸಜ್ಜನಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕ ಪ್ರಯತ್ನಗಳಿಂದ ಜೀವನದ ಪ್ರಮುಖ ಗುರಿ ಮುಟ್ಟಲು ಸಾಧ್ಯ. ಇಂಥ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಪ್ರಾಚಾರ್ಯ ಪ್ರೊ.ಎನ್.ಆರ್. ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಡಾ.ಸಿ.ಎಂ. ಕಡಕೋಳ, ಪ್ರೊ. ಗಿರಿಜಾ ಕಡ್ಡಿಪುಡಿ, ಡಾ.ಎನ್.ಬಿ. ಸಂಗಾಪುರ, ಡಾ. ಕೆ.ಎಸ್. ಶಾಂತಯ್ಯ, ಆರತಿ ಬೂದಪ್ಪನವರ ಇದ್ದರು.
ಪೂರ್ವಭಾವಿ ಸಭೆ
ಕುಂದಗೋಳ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ತಹಸೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪ್ರತಿ ಇಲಾಖೆ ಕಚೇರಿ, ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ಕಚೇರಿ ಮುಂದೆ ಧ್ವಜಾರೋಹಣ ನೆರವೇರಿಸಿ ಕೊನೆದಾಗಿ ಇಲ್ಲಿ ಬಂದು ಧ್ವಜವಂದನೆ ಸಲ್ಲಿಸಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಬೇಕು ಎಂದು ತಹಸೀಲ್ದಾರ್ ಎಚ್.ಎಂ. ಓಲೇಕಾರ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

