ಧಾರವಾಡ

ಇಂದು ಅತಿಕ್ರಮಣ ವಿರೋಧಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 11
ಇಲ್ಲಿಯ ದೇಶಪಾಂಡೆ ನಗರದ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಅತಿಕ್ರಮಣ ವಿರೋಧಿಸಿ, ಮೈದಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಒತ್ತಾಯಿಸಿ ಸ್ಪೋರ್ಟ್ಸ್ ಮೈದಾನ ಬಚಾವೋ ಸಮಿತಿ ನೇತೃತ್ವದಲ್ಲಿ ಆ. 12ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಗುಜರಾತ ಭವನ ಎದುರಿಗಿರುವ ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನದ ಮುಖ್ಯದ್ವಾರದ ಬಳಿ ಹಿರಿಯ ಪತ್ರಕರ್ತ ನಾಡೋಜ ಡಾ೤ ಪಾಟೀಲ ಪುಟ್ಟಪ್ಪ ಪ್ರತಿಭಟನೆಗೆ ಚಾಲನೆ ನೀಡಿ, ಮಾತನಾಡಲಿದ್ದಾರೆ.
ನಂತರ ಶಾರದಾ ಹೋಟೆಲ್ ವೃತ್ತ, ಪ್ರವಾಸಿ ಮಂದಿರ, ಕೋರ್ಟ್ ವೃತ್ತದ ಮೂಲಕ ಮೆರವಣಿಗೆಯಲ್ಲಿ ತೆರಳುವ ಪ್ರತಿಭಟನಾಕಾರರು, ತಹಸೀಲ್ದಾರರಿಗೆ ಮನವಿ ಸಲ್ಲಿಸುವರು.
ಹುಬ್ಬಳ್ಳಿ ಸ್ಪೋರ್ಟ್ಸ್ ಮೈದಾನ ಅತಿಕ್ರಮಣ ವಿರೋಧಿಸಿ ಕಳೆದ ಸುಮಾರು ಒಂದು ವಾರದಿಂದ ಹೋರಾಟ ನಡೆಯುತ್ತಿದ್ದು, ಸಾರ್ವಜನಿಕರಿಗೆ ಸೇರಿರುವ ಈ ಮೈದಾನದಲ್ಲಿ ಖಾಸಗಿಯವರ ಯಾವುದೇ ಕಾಮಗಾರಿ ಮುಂದುವರೆಸಬಾರದು ಎಂದು ಸ್ಪೋರ್ಟ್ಸ್ ಮೈದಾನ ಬಚಾವೋ ಸಮಿತಿ ಒತ್ತಾಯಿಸಿದೆ.
ಸಾರ್ವಜನಿಕ ಉದ್ದೇಶಕ್ಕೆ ಸರ್ಕಾರ ನೀಡಿರುವ 8 ಎಕರೆ ಭೂಮಿಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಮೈದಾನ ನುಂಗಿ ಹಾಕುವ ಪ್ರಯತ್ನದಲ್ಲಿ ತೊಡಗಿವೆ. ಕ್ರೀಡಾಪಟುಗಳು ಹಾಗೂ ಸುತ್ತಲಿನ ನಿವಾಸಿಗಳಿಗೆ ವಾಯು ವಿಹಾರಕ್ಕೆ ಈ ಮೊದಲಿನಂತೆ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಪೋರ್ಟ್ಸ್ ಮೈದಾನ ಬಚಾವೋ ಸಮಿತಿಯ ಸಿ.ಬಿ. ಲಕ್ಷ್ಮೀನಾರಾಯಣ ಹೆಗಡೆ, ಡಾ೤ ಮಹೇಶ ನಾಲವಾಡ, ಅರವಿಂದ ಮೇಟಿ, ಮನೋಜ ಹಾನಗಲ್, ಡಾ೤ ವಿನೋದ ಕುಲಕರ್ಣಿ, ವೆಂಕಟೇಶ ಸವದತ್ತಿ, ಸುರೇಶ ಕಿರೇಸೂರು, ಡಿ. ಗೋವಿಂದರಾವ್, ನಾಗರಾಜ ಗುರಿಕಾರ, ಶೈಲೇಂದ್ರ ಪಾಟೀಲ, ಅಮೃತ ಇಜಾರೆ, ಚಂದ್ರಶೇಖರ್ ಯಾದವ್, ಯೂಸುಫ್ ಸವಣೂರ, ಶರೀಫ್ ಮುಲ್ಲಾ, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.