ಪಶು ಚಿಕಿತ್ಸಾಲಯಗಳಿಗೆ ವೈದ್ಯರ ಕೊರತೆ
-ಶೀತಲ ಎಸ್. ಮುರಗಿ
ಕನ್ನಡಪ್ರಭ ವಾರ್ತೆ, ಕುಂದಗೋಳ, ಆ. 11
ತಾಲೂಕಿನಲ್ಲಿ ಪಶುವೈದ್ಯರ ಕೊರತೆಯಿಂದ ದಿನವಿಡಿ ರೈತರು ಪಶು ಚಿಕಿತ್ಸಾಲಯಗಳಿಗೆ ಅಲೆದಾಡುವುದು ಸಾಮಾನ್ಯವಾಗಿದೆ.
ಅನ್ನದಾತನ ಸಂಗಾತಿಗಳಾದ ಎತ್ತುಗಳ ತಳಿಗಾಗಿ ಕೃತಕ ಗರ್ಭಧಾರಣೆ ಮಾಡುವ ಸರ್ಕಾರಿ ಪಶುಚಿಕಿತ್ಸಾಲಯಗಳಿದ್ದರೂ ವೈದ್ಯರ ಕೊರತೆಯಿದೆ. ತಾಲೂಕಿನಲ್ಲಿ 19 ಪಶು ಚಿಕಿತ್ಸಾಲಯ, ಒಂದು ಸಂಚಾರಿ ಪಶು ಚಿಕಿತ್ಸಾಲಯ ಇದೆ. ಆದರೆ ಬಹುತೇಕ ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ದಿನವಿಡಿ ಕಾಯಬೇಕಿದೆ. ಒಟ್ಟು ಪಶು ವೈದ್ಯಾಧಿಕಾರಿಗಳ ಹುದ್ದೆ 9. ಅದರಲ್ಲಿ 4 ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಪಶು ಪರೀಕ್ಷಕರು 4 ಜನ ಇದ್ದಾರೆ. 8 ಕಿರಿಯ ಪಶು ಪರೀಕ್ಷಕರಿದ್ದು, 1 ಹುದ್ದೆ ಮಾತ್ರ ಖಾಲಿ ಇದೆ. ಪಶು ಪರೀಕ್ಷಕರ ಸಹಾಯಕರ ಹುದ್ದೆ 3 ಇದ್ದು ಅದರಲ್ಲಿ 1 ಖಾಲಿ ಇದೆ. ಇದರಿಂದ ಚಿಕಿತ್ಸೆ ನೀಡುವುದು ಅಸಾಧ್ಯವಾಗುತ್ತಿದೆ.
ಲಸಿಕೆಗಳ ಕೊರತೆ: ವೈದ್ಯರ ಸಮಸ್ಯೆ ಒಂದಡೆಯಾದರೆ, ಇನ್ನೊಂದೆಡೆ ತಾಲೂಕಿನಲ್ಲಿರುವ ಗುಡಗೇರಿ ಬರದ್ವಾಡ, ಇಂಗಳಗಿ, ಪಶುಪತಿಹಾಳ ಚಿಕಿತ್ಸಾಲಯ ಕಟ್ಟಡಗಳು ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಮಳೆ ನೀರು ಸೋರುವುದರಿಂದ ಚಿಕಿತ್ಸಾಲಯದಲ್ಲಿರುವ ಔಷಧಗಳು, ಚಿಕಿತ್ಸಾ ಸಾಮಗ್ರಿಗಳು, ನೀರಿನಲ್ಲಿ ತೊಯ್ದು ಹಾಳಾಗುತ್ತಿವೆ. ಇವುಗಳನ್ನು ಸಂರಕ್ಷಿಸುವುದೇ ಸಿಬ್ಬಂದಿಗೆ ದೊಡ್ಡ ಚಿಂತೆಯಾಗಿದೆ. ಇಂಥ ಕಟ್ಟಡಗಳಿಗೆ ಕೂಡಲೇ ಸರ್ಕಾರ ಚಿಕಿತ್ಸೆ ನೀಡಬೇಕಾಗಿದೆ. ಆಕಳುಗಳಿಗೆ ಕಿಲಾರಿ ಹೋರಿಯ ಕೃತಕ ಗರ್ಭಧಾರಣೆ (ವಿರ್ಯಾಣುಗಳ) ನೀಡುವ ಲಸಿಕೆಗಳ ಕೊರತೆಯಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೃತಕ ಗರ್ಭಧಾರಣೆ ಲಸಿಕೆ ಕೊರತೆಯಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಜಾನುವಾರುಗಳಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಮತ್ತು ಸುಸಜ್ಜಿತ ಕಟ್ಟಡಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಗಮನ ನೀಡಿ ರೈತರ ಏಳಿಗೆ ಬಗ್ಗೆ ಕಾಳಜಿ ತೋರುವರೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

