ಹಾಸ್ಟೆಲ್ ಪ್ರವೇಶಕ್ಕೂ ತಟ್ಟಿದ ಬಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 13
ಚುನಾವಣಾ ನೀತಿ ಸಂಹಿತೆಯು ಹಲವು ಬಾರಿ ಏನೆಲ್ಲಾ ಅವಾಂತರಕ್ಕೆ ಎಡೆ ಮಾಡಿ ಕೊಡುತ್ತದೆ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಪ್ರಸಕ್ತ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಧಾರವಾಡ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಹಾಗೂ ವಸತಿ ನಿಲಯಕ್ಕೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ವಿದ್ಯಾರ್ಥಿಗಳು ಚುನಾವಣೆಯಿಂದ ಕಸಿವಿಸಿಗೊಳ್ಳಬೇಕಾಗಿದೆ.
ಹಾಸ್ಟೆಲ್ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಗೂ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಶಾಸಕ ವಿನಯ ಕುಲಕರ್ಣಿ ಅವರು ಅಧ್ಯಕ್ಷರಾಗಿರುವ ಇಲ್ಲಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ (ಬಿಸಿಎಂ) ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿ ವಸತಿ ನಿಲಯಗಳಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ಧಗೊಳಿಸಿದ್ದರೂ ನೀತಿ ಸಂಹಿತೆಯ ಪ್ರಭಾವದಿಂದ ಪಟ್ಟಿ ಮಾತ್ರ ಪ್ರಕಟಿಸಲು ಆಗುತ್ತಿಲ್ಲ. ಇದು ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಸಂಕಟವಾಗಿ ಪರಿಣಮಿಸಿದೆ.
ಕಳೆದ ಜೂನ್ ತಿಂಗಳಲ್ಲಿಯೇ ಕಾಲೇಜುಗಳು ಆರಂಭವಾಗಿದ್ದರೂ ಇಲ್ಲಿಯವರೆಗೂ ವಸತಿ ನಿಲಯ ಲಭ್ಯವಾಗದೇ ಅರ್ಜಿ ಹಾಕಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರದಾಡುವಂತಾಗಿದೆ. ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಚುನಾವಣೆ ಮುಂಚೆಯೇ (ಜು. 30ರೊಳಗೆ) ಆಯ್ಕೆ ಪಟ್ಟಿ ಪ್ರಕಟಿಸಿ ಈ ಪ್ರಕ್ರಿಯೆ ಮುಗಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಆದರೆ, ಶಾಸಕರು ಈ ಪಟ್ಟಿಗೆ ಒಪ್ಪಿಗೆ ಕೊಡುವವರೆಗೂ ಪಟ್ಟಿ ಪ್ರಕಟಿಸುವಂತಿಲ್ಲ. ಸಚಿವ ಸಂಪುಟ ವಿಸ್ತರಣೆ, ಅಧಿವೇಶನದ ಗದ್ದಲದಲ್ಲಿ ಶಾಸಕರು ಮುಳುಗಿದ ಹಿನ್ನೆಲೆಯಲ್ಲಿ ಪ್ರಕ್ರಿಯೆ ತಡವಾಗಿದ್ದು, ಈಗ ಚುನಾವಣೆ ನೀತಿ ಸಂಹಿತೆಯಿಂದ ಒಂದು ತಿಂಗಳು ತಡವಾಗಿದೆ.
29ರ ವರೆಗೆ ಇಲ್ಲ: ಧಾರವಾಡದಲ್ಲಿ ಬಿಸಿಎಂ ಇಲಾಖೆಯ 20 ಹಾಗೂ ಸಮಾಜ ಕಲ್ಯಾಣ ಇಲಾಖೆಯ 13 ವಸತಿ ನಿಲಯಗಳಿದ್ದು, ಕ್ರಮವಾಗಿ 1700 ಹಾಗೂ 700 ವಿದ್ಯಾರ್ಥಿ-ವಿದ್ಯಾರ್ಥಿಗಳು ಅರ್ಜಿ ಹಾಕಿ ಪಟ್ಟಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಆ. 29ರ ವರೆಗೆ ನೀತಿ ಸಂಹಿತೆ ಜಾರಿ ಇರುವುದರಿಂದ ಪಟ್ಟಿ ಪ್ರಕಟ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಕಚೇರಿ ಸೂಚನಾ ಫಲಕಕ್ಕೆ ಜುಲೈ 29ರಿಂದ ಆಗಸ್ಟ್ 29ರ ವರೆಗೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಶಿಕ್ಷಣ ನಗರಿ ಎಂದೇ ಹೆಸರು ಪಡೆದಿರುವ ಧಾರವಾಡಕ್ಕೆ ಪ್ರತಿ ವರ್ಷ ಸುತ್ತಮುತ್ತಲಿನ ಹಾವೇರಿ, ಗದಗ, ಬೈಲಹೊಂಗಲ, ಕಾರವಾರ, ಸವದತ್ತಿ ಸೇರಿದಂತೆ ಅನೇಕ ಊರುಗಳಿಂದ ಶಿಕ್ಷಣಕ್ಕಾಗಿ ಬರುತ್ತಾರೆ. ಇಲ್ಲಿ ಕಾಲೇಜುಗಳಿಗೆ ತಕ್ಕಂತೆ ವಸತಿ ನಿಲಯಗಳ ಸಂಖ್ಯೆ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ವಸತಿ ಭಾಗ್ಯ ದೊರೆಯುವುದಿಲ್ಲ. ಈ ಸಮಸ್ಯೆಯೊಂದಿಗೆ ಈಗ ಒಂದು ತಿಂಗಳು ತಡವಾಗಿ ಆಯ್ಕೆ ಪಟ್ಟಿ ಪ್ರಕಟಿಸುತ್ತಿರುವುದು ವಿದ್ಯಾರ್ಥಿಗಳಿಗೆ ಬೇಸರ ಮೂಡಿಸಿದೆ. ಸಾಕಷ್ಟು ವಿದ್ಯಾರ್ಥಿಗಳು ವಸತಿ ವ್ಯವಸ್ಥೆ ಪಕ್ಕಾ ಆದ ಮೇಲೆಯೇ ಕಾಲೇಜಿಗೆ ಹೋಗುವ ಇರಾದೆ ಇಟ್ಟುಕೊಂಡಿದ್ದರೆ, ಇನ್ನು ಕೆಲವರು ಸಂಬಂಧಿಕರ ಅಥವಾ ಸ್ನೇಹಿತರ ಬಾಡಿಗೆ ಕೋಣೆಗಳಲ್ಲಿ ಹೊಂದಿಕೊಂಡು ಇರುವಂತಾಗಿದೆ.
ವಿದ್ಯಾರ್ಥಿಗಳೇನು ಮತದಾರರೇ?
ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾರರಲ್ಲ. ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರಾಗಿದ್ದು, ಶಾಸಕರೇ ಆಯ್ಕೆ ಪ್ರಕ್ರಿಯೆ ಅಧ್ಯಕ್ಷರಾಗಿದ್ದರೂ ಪರವಾಗಿಲ್ಲ. ಆಯ್ಕೆ ಪಟ್ಟಿ ಪ್ರಕಟಿಸಲು ಯಾವ ತೊಂದರೆ ಇಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಬೈಲಹೊಂಗಲದಿಂದ ನಿತ್ಯ ಧಾರವಾಡದ ಜೆಎಸ್ಸೆಸ್ ಕಾಲೇಜಿಗೆ ಬರುವ ಕಸ್ತೂರಿ ಎಂಬ ವಿದ್ಯಾರ್ಥಿನಿ ಪತ್ರಿಕೆ ಮೂಲಕ ಸಮಸ್ಯೆ ನಿವೇದಿಸಿಕೊಂಡರು.ರಾಜಕೀಯ, ಚುನಾವಣೆಗೋಸ್ಕರ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು. ಶಿಕ್ಷಣದ ವಿಷಯಕ್ಕೆ ಚುನಾವಣೆ ನೀತಿ ಸಂಹಿತೆ ಬೇಕಾಗಿಲ್ಲ. ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಷಯ ಕುರಿತು ನಿರ್ಣಯ ಕೈಗೊಂಡು ಆದಷ್ಟು ಬೇಗ ಪಟ್ಟಿ ಪ್ರಕಟಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅಸ್ತ್ರ ಹಿಡಿಯಬೇಕಾಗುತ್ತದೆ ಎಂದು ಎಬಿವಿಪಿ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಎಚ್ಚರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

