24ಕ್ಕೆ ಸಂಗೀತೋತ್ಸವ
ಧಾರವಾಡ: ಸ್ವರ ಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟೀಯ ಸ್ಮಾರಕ ಟ್ರಸ್ಟ್ ವತಿಯಿಂದ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಆ. 24ರಂದು ಸಂಜೆ 6ಕ್ಕೆ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸಮ್ಮಾನ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರಸಕ್ತ ವರ್ಷದ ಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸಮ್ಮಾನಕ್ಕೆ ದಕ್ಷಿಣ ಭಾರತದ ಏಕೈಕ ಸರೋದ ವಾದಕ ಮೈಸೂರಿನ ಪಂ. ರಾಜೀವ ತಾರಾನಾಥ ಆಯ್ಕೆಗೊಂಡಿದ್ದಾರೆ. ಅಲ್ಲದೆ, ಬೆಂಗಳೂರಿನ ಯುವ ಹಿಂದುಸ್ತಾನಿ ಗಾಯಕ ಕೌಶಿಕ ಐತಾಳ ಮತ್ತು ಯುವ ಪ್ರತಿಭಾವಂತ ತಬಲಾವಾದಕ ಕೊಲ್ಕತ್ತಾದ ಅನುಬ್ರುತ್ ಚಟರ್ಜಿ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ರಾಷ್ಟ್ರೀಯ ಸಮ್ಮಾನ ರು. 1 ಲಕ್ಷ ನಗದು ಹೊಂದಿದ್ದು, ಇದರೊಂದಿಗೆ ಸ್ಮರಣಿಕೆ ನೀಡಲಾಗುವುದು. ಅದೇ ರೀತಿ ಯುವ ಪ್ರಶಸ್ತಿ ಪುರಸ್ಕಾರ ಕಲಾವಿದರಿಗೆ ತಲಾ ರು. 25 ಸಾವಿರ ಮತ್ತು ಸ್ಮರಣಿಕೆ ಪ್ರದಾನ ಮಾಡಲಾಗುವುದು ಬೆಲ್ಲದ ತಿಳಿಸಿದರು. ಆ. 24ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ಗಣ್ಯರ ನುಡಿಗಳು ಎಂಬ ಪುಸ್ತಕ ಬಿಡುಗಡೆಗೊಳಿಸಲಿದ್ದು, ಕೌಶಿಕ ಐತಾಳ ಅವರ ಹಿಂದುಸ್ತಾನಿ ಹಾಡುಗಾರಿಕೆ, ಅನುಬ್ರತ್ ಚಟರ್ಜಿ ಅವರಿಂದ ಸೋಲೋ ತಬಲಾವಾದನ ನಡೆಯಲಿದೆ ಎಂದರು. ನಂತರ ಹಿರಿಯ ಕಲಾವಿದ ಪಂ. ರಾಜೀವ ತಾರಾನಾಥ ಅವರ ಸರೋದವಾದನ ಕೂಡ ಜರುಗಲಿದೆ. ಕಳೆದ ವರ್ಷದಿಂದ ಆರಂಭವಾಗಿರುವ ಈ ರಾಷ್ಟ್ರೀಯ ಸಮ್ಮಾನ ಸಂಗೀತ ಕ್ಷೇತ್ರದಲ್ಲಿ ಅನುಪಮ ಕೊಡುಗೆ ನೀಡಿದ ಕಲಾವಿದರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ. ಅದೇ ರೀತಿ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹಿಸಲು ಯುವಪುರಸ್ಕಾರ ಕೂಡ ನೀಡಲಾಗುತ್ತಿದೆ ಎಂದು ಬೆಲ್ಲದ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭಾರತಿದೇವಿ ರಾಜಗುರು, ನಿಜಗುಣಿ ರಾಜಗುರು, ಡಾ. ಉದಯ ದೇಸಾಯಿ, ಬಿ.ಡಿ. ಹಿರೇಗೌಡರ ಇದ್ದರು.
ಹಲ್ಲೆ: ಮೂವರ ಬಂಧನ
ಧಾರವಾಡ: ತಾಲೂಕಿನ ನರೇಂದ್ರ ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈಯ್ಯಲು ಯತ್ನಿಸಿದ ಆರೋಪದ ಮೇಲೆ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ತಡರಾತ್ರಿ ಮೂವರನ್ನು ಬಂಧಿಸಿದ್ದಾರೆ. ಗ್ರಾಮದ ಪ್ರವೀಣ ಗಂಟಿ ಎಂಬಾತನೇ ಹಲ್ಲೆಗೊಳಗಾದ ಗ್ರಾಪಂ ಸದಸ್ಯ. ಇದೇ ಗ್ರಾಮದ ಬಸಯ್ಯ ಹಿರೇಮಠ, ಧಾರವಾಡದ ಕೃಷ್ಣಾ ತಿಗಡಿ ಮತ್ತು ಈರಪ್ಪ ತಳವಾರ ಬಂಧಿತ ಆರೋಪಿಗಳಾಗಿದ್ದಾರೆ. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ನರೇಂದ್ರ ಬೈಪಾಸ್ ಬಳಿಯ ರೆಸಾರ್ಟ್‌ನಲ್ಲಿ ಕಳೆದ ಆ. 5ರಂದು ಈ ಮೂವರು ಆರೋಪಿಗಳು ಗ್ರಾಪಂ ಸದಸ್ಯ ಪ್ರವೀಣ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಸಮೀಪದ ಎಸ್‌ಡಿಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ.
23ರಂದು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ
ಹುಬ್ಬಳ್ಳಿ: ವರ್ಗಾವಣೆಗೊಂಡಿರುವ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ತಂಬಾಕದ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವುದು, ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ವತಿಯಿಂದ ಆ. 23ರಂದು ಇಲ್ಲಿಯ ವಿದ್ಯಾನಗರದ ನಿಗಮದ ಪ್ರಧಾನ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ.
ಕೈಮಗ್ಗ ನಿಗಮದ ತಾಂತ್ರಿಕ ಅಧಿಕಾರಿಗಳನ್ನು ಬೇರೆ ಸಂಸ್ಥೆಗಳಿಗೆ ವರ್ಗಾಯಿಸುವುದು, ಹೊರಗಿನಿಂದ ಕಳಪೆ ಗುಣಮಟ್ಟದ ಬಟ್ಟೆ ಖರೀದಿಸಿ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಪೂರೈಸುವುದು ಸೇರಿದಂತೆ ಇಲಾಖೆಯಲ್ಲಿ ಹಲವಾರು ಭ್ರಷ್ಟಾಚಾರಗಳು ನಡೆಯುತ್ತಿವೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ತಂಬಾಕದ ಅವರ ವರ್ಗಾವಣೆ ಕಳೆದ ಆ. 10ರಂದು ಆಗಿದ್ದು, ಈ ಸ್ಥಾನಕ್ಕೆ ಸೀಮಾ ಗರಗ ಎಂಬ ಅಧಿಕಾರಿಯನ್ನು ಸರ್ಕಾರ ನೇಮಿಸಿದೆ. ಆದರೆ, ತಂಬಾಕದಿಂದ ಅವರು ಇದುವರೆಗೂ ಸೇವೆಯಿಂದ ಬಿಡುಗಡೆಗೊಂಡಿಲ್ಲ. ಕೆಲ ಫೈಲ್‌ಗಳನ್ನು ತರಿಸಿ, ಹಿಂದಿನ ದಿನಾಂಕ ನಮೂದಿಸಿ ಆದೇಶ ಹೊರಡಿಸುತ್ತಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ದೂರಿದ್ದಾರೆ.
ಧರಣಿ ನಡೆಸದಂತೆ ಸಂಘದ ಸದಸ್ಯರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ಈ ಕರೆಗಳಿಗೆ ತಾವು ಜಗ್ಗುವುದಿಲ್ಲ ಎಂದು ತಿಳಿಸಿರುವ ಮಾಳವದೆ, ಸರ್ಕಾರ ಇನ್ನಾದರೂ ಕೈಮಗ್ಗ ನಿಗಮ ಹಾಗೂ ನೇಕಾರರ ಬಗ್ಗೆ ಕಾಳಜಿ ವಹಿಸಲಿ ಎಂದು ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

