ಧಾರವಾಡ

ಕೊಳಚೆ ನೀರಿನಿಂದ ಸಮೃದ್ಧ ಬೆಳೆ..!

Published On :

ಹೆಬ್ಬಳ್ಳಿ (ಧಾರವಾಡ): ಕೃಷಿ ಭೂಮಿಯನ್ನು ನೀರಾವರಿಗೆ ಅಳವಡಿಸಲು ಕೊಳವೆ ಬಾವಿಯೇ ಬೇಕು ಅಥವಾ ನದಿ, ಕಾಲುವೆ ಹಾಗೂ ಹಳ್ಳಗಳೇ ಬೇಕೆಂದು ಕೈ ಕಟ್ಟಿ ಕುಳಿತುಕೊಳ್ಳದೇ ಇಲ್ಲೊಬ್ಬ ರೈತ ತಮ್ಮ ಮನೆ ಎದುರು ನಿತ್ಯ ಹರಿಯುವ ಮಳೆ ನೀರು ಹಾಗೂ ಕೊಳಚೆ ನೀರಿನಿಂದಲೇ ಸಮೃದ್ಧ ಕೃಷಿ ಆರಂಭಿಸಿದ್ದಾನೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಮೆಹಬೂಬಸಾಬ ಗುಡಸಲಮನಿ ಎಂಬ ರೈತ ಈ ವಿಶಿಷ್ಟ ಪ್ರಯೋಗ ಮಾಡುವ ಮೂಲಕ ಯಶಸ್ವಿಯೂ ಆಗಿದ್ದಾನೆ. ಮೆಹಬೂಬಸಾಬನ ಮನೆಯು ಗ್ರಾಮದ ಅಗಸಿ ಓಣಿಯಲ್ಲಿದೆ. ಓಣಿಯ ಆರಂಭದಿಂದ ಅಂತ್ಯದವರೆಗೂ ತುಸು ಇಳಿಜಾರಿದ್ದು ಕೊನೆಯ ಮನೆಯೇ ಮೆಹಬೂಬಸಾಬನದ್ದು. ತಮ್ಮ ಮನೆಯ ಹಿಂದುಗಡೆಯೇ ಕೃಷಿ ಜಮೀನು ಹೊಂದಿರುವ ಇವರು, ಓಣಿಯಲ್ಲಿ ಹರಿಯುವ ಮಳೆ ನೀರು, ನಲ್ಲಿ ಹಾಗೂ ಕೊಳಚೆ ನೀರು ಈ ರೈತನ ಮನೆಯ ಎದುರೇ ಹರಿದು ವ್ಯರ್ಥವಾಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಬರಗಾಲದಿಂದ ಕಂಗೆಟ್ಟಿದ್ದ ಮೆಹಬೂಬಸಾಬ, ಈ ಮಳೆ ಹಾಗೂ ಕೊಳಚೆ ನೀರನ್ನೇ ಉಪಯೋಗಿಸಿ ಕೃಷಿ ಮಾಡಿದರೆ ಹೇಗೆ ಎಂಬ ವಿಚಾರ ಮಾಡಿದ್ದೇ ತಡ ಕಾಯಕ ಆರಂಭಿಸಿ ಪೋಲಾಗುತ್ತಿದ್ದ ನೀರನ್ನು ಹೊಲಕ್ಕೆ ತಿರುಗಿಸಿಕೊಳ್ಳುವ ಮೂಲಕ ಈಗ ಉತ್ತಮ ಫಸಲು ಪಡೆಯುತ್ತಿದ್ದಾನೆ. ಓಣಿಯಲ್ಲಿ ಹರಿಯುವ ಕೊಳಚೆ ನೀರನ್ನೆಲ್ಲ ತನ್ನ ಮನೆಯ ಕಡೆ ಹರಿಯುವಂತೆ ಮಾಡಿ ಮುಂಚೆ ಇದ್ದ ಎಲ್ಲ ತಗ್ಗುಗಳನ್ನೆಲ್ಲ ಮುಚ್ಚಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಮನೆಯ ಮುಂದೆ ಒಂದು ಗುಂಡಿ ತೋಡಿ ಅಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ಮನೆಯ ಒಳಗಡೆ ಹಾಯ್ದು ನೇರವಾಗಿ ತಮ್ಮ ಹೊಲಕ್ಕೆ ಪೈಪ್‌ಲೈನ್ ಜೋಡಿಸಿದ್ದಾರೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಆತನ ಹೊಲಕ್ಕೆ ಹೋಗುತ್ತಿದೆ. ಮೊದಲು ಕೊಳಚೆ ಓಣಿಯಾದ ಅಗಸಿ ಓಣಿ ಈಗ ಮಾದರಿ ಓಣಿಯಾಗಿದೆ. ಎಲ್ಲಿಯೂ ನೀರು ನಿಲ್ಲದೇ ಸ್ವಚ್ಛವಾಗಿ ಕಾಣುತ್ತಿದೆ.
ಎಲ್ಲ ಹಳ್ಳಿಗಳಲ್ಲಿ ಗ್ರಾಮಸ್ಥರು ನಲ್ಲಿ ಮೂಲಕ ನೀರು ಬಂದಾಗ ತಮಗೆ ಬೇಕಾದಷ್ಟು ನೀರು ಪಡೆದುಕೊಂಡು ಉಳಿದ ನೀರನ್ನು ಬೇಕಾಬಿಟ್ಟಿ ಪೋಲು ಮಾಡುವುದು ಸಾಮಾನ್ಯ.
ಬಟ್ಟೆ, ಪಾತ್ರೆ ಮನೆ ಎದುರೇ ತೊಳೆದು ನೀರು ಓಣಿಯಲ್ಲಿ ನಿಲ್ಲುವಂತೆ ಮಾಡುತ್ತಾರೆ. ಅಲ್ಲದೆ, ಮಳೆಗಾಲದಲ್ಲಿ ಮನೆ ಮೇಲೆ ಬಿದ್ದ ನೀರು ಸುಖಾಸುಮ್ಮನೆ ಹರಿದು ಗಟಾರು ಪಾಲಾಗುತ್ತದೆ. ಇದರಿಂದ ನೀರು ಕೊಳಚೆಯಾಗಿ ಕ್ರಿಮಿಕೀಟ ತುಂಬಿಕೊಂಡು ರೋಗಗಳ ತಾಣವಾದ ಸಂದರ್ಭಗಳಿವೆ. ಈ ಹಿನ್ನೆಲೆಯಲ್ಲಿ ಹರಿದು ಪೋಲಾಗುವ ನೀರನ್ನು ಹಿಡಿದಿಟ್ಟು ಕೃಷಿ ಚಟುವಟಿಕೆಗೆ ಬಳಸುತ್ತಿರುವ ಮೆಹಬೂಬಸಾಬನ ಸಾಧನೆ ಮೆಚ್ಚುವಂತಹುದ್ದೇ ಎನ್ನುವ ಮಾತುಗಳು ಇಡೀ ಹೆಬ್ಬಳ್ಳಿಯಲ್ಲಿ ಕೇಳಿ ಬರುತ್ತಿವೆ.
ಮುಂಗಾರಿನಲ್ಲಿ ರು. 2 ಲಕ್ಷ ಆದಾಯ..
ಧಾರವಾಡದ ಹೆಬ್ಬಳ್ಳಿ ಭಾಗ ಪೂರ್ತಿ ಮಳೆಯಾಶ್ರಿತ ಕೃಷಿ ಭೂಮಿ ಹೊಂದಿದೆ. ಮಳೆಯಾದರೆ ಮಾತ್ರ ಇಲ್ಲಿ ಬೆಳೆ. ಆಗಾಗ ಮಳೆ ಕೈಕೊಡುವುದರಿಂದ ಬರಗಾಲ ನಮಗೆ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಪೋಲಾಗುತ್ತಿದ್ದ ಮಳೆ ಹಾಗೂ ಕೊಳಚೆ ನೀರನ್ನು ಎರಡು ವರ್ಷಗಳಿಂದ ಹಿಡಿದಿಟ್ಟು ಕೃಷಿ ಚಟುವಟಿಕೆ ಕೈಗೊಂಡಿದ್ದೇನೆ. ಕಳೆದ ವರ್ಷ ಸಂಪ್ರದಾಯಿಕ ಬೆಳೆ ತೆಗೆದಿದ್ದು, ಕಳೆದ ಮುಂಗಾರು ಹಂಗಾಮಿನಲ್ಲಿ ತರಕಾರಿ ಬೆಳೆದು ರು. 2 ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ಮೆಹಬೂಸಾಬ. ನೀರು ಅಮೂಲ್ಯವಾಗಿದ್ದು. ಇದನ್ನು ಪೋಲು ಮಾಡದೆ ಒಂದೆಡೆ ಹಿಡಿದಿಟ್ಟು ಉತ್ತಮ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಸ್ನೇಹಿತ ಮೆಹಬೂಬಸಾಬ್ ಉಳಿದ ರೈತರಿಗೆ ಮಾದರಿ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಗ್ರಾಮದ ಬಳಿಯೇ ಹೊಲಗಳಿರುತ್ತವೆ. ಅವಕಾಶವಿದ್ದ ರೈತರು ಈ ರೀತಿಯ ಪ್ರಯೋಗ ಅಳವಡಿಸಿಕೊಂಡರೆ ಬರಗಾಲ ಬಿಸಿ ರೈತರಿಗೆ ತಾಕೋದಿಲ್ಲ ಎನ್ನುತ್ತಾರೆ ಗ್ರಾಪಂ ಸದಸ್ಯ ಮೌಲಾಸಾಬ ಸವಣೂರ. ಎಲ್ಲೆಡೆ ಬರಗಾಲ ಛಾಯೆ ಆವರಿಸುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ನೆರವನ್ನೇ ನೆಚ್ಚಿ ಸಬ್ಸಿಡಿ, ಸಾಲಮನ್ನಾ, ಬಡ್ಡಿ ರಹಿತ ಸಾಲ ಮತ್ತಿತರರೆ ಕಾರ್ಯಕ್ರಮಗಳ ಮೊರೆ ಹೋಗದೆ ತಮ್ಮಲ್ಲಿರುವ ಜ್ಞಾನ ಬಳಸಿ ಈ ರೀತಿಯ ಪ್ರಯೋಗದ ಮೂಲಕ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ರೈತರು ಮುಂದಾಗಬೇಕಿದೆ.

ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.