ಧಾರವಾಡ

ಡಾ. ವಸಂತಾ ಕಾಮತ್ ಅರ್ಜಿ ವಿಚಾರಣೆ 29ಕ್ಕೆ

Published On :

ಧಾರವಾಡ: ಕಿಮ್ಸ್ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಡಾ. ವಸಂತಾ ಕಾಮತ್ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠವು ಮತ್ತೆ 29ಕ್ಕೆ ಮುಂದೂಡಿದೆ.  ಆ. 8ರಂದು ನ್ಯಾಯಮೂರ್ತಿ ಅರವಿಂದ ಕುಮಾರ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ಅರ್ಜಿದಾರ ವಸಂತಾ ಕಾಮತ ಪರ ವಾದ ಆಲಿಸಲು ಪ್ರಕರಣವನ್ನು 21ಕ್ಕೆ ಮುಂದೂಡಿತ್ತು. ಬುಧವಾರ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ಪರ ವಕೀಲರಾದ ರಾಜಗೋಪಾಲ ಹಾಗೂ ಕೆ.ಎಲ್. ಪಾಟೀಲ ಅವರ ವಾದ ಆಲಿಸಿ ವಾದ ಅಪೂರ್ಣವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಆ. 29ಕ್ಕೆ ಮುಂದೂಡಿದೆ. ಸುಬ್ರಹ್ಮಣ್ಯ ಜೋಯಿಸ್ ಕಿಮ್ಸ್ ಪರವಾಗಿ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಕಾಂತರಾಜ ಅವರು ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದರು.
ಕಲಘಟಗಿ: ಇಂದು ಸ್ವಾಮಿ ವಿವೇಕಾನಂದ ರಥಯಾತ್ರೆ
ಕಲಘಟಗಿ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಕಲಘಟಗಿ ಪಟ್ಟಣದಲ್ಲಿ ಆ. 22ರ ಸಂಜೆ 4ಕ್ಕೆ ಸ್ವಾಮಿ ವಿವೇಕಾನಂದರ ರಥಯಾತ್ರೆ ಜರುಗಲಿದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಐ.ವಿ. ಜವಳಿ ಹಾಗೂ ನ್ಯಾಯವಾದಿ ಕೆ.ಬಿ. ಗುಡಿಹಾಳ ಜಂಟಿಯಾಗಿ ತಿಳಿಸಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ರಥಯಾತ್ರೆಯನ್ನು ನಡೆಸಲಾಗುವುದು. ಅಂದು ಸಂಜೆ ಪಟ್ಟಣದ ಯುವಶಕ್ತಿ ಸರ್ಕಲ್‌ಗೆ ಹಳಿಯಾಳದಿಂದ ಆಗಮಿಸಲಿದ್ದು ಹನ್ನೆರಡು ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಪುಷ್ಪಾರ್ಪಣೆ ಮಾಡಿ ರಥಕ್ಕೆ ಚಾಲನೆ ನೀಡಲಿದ್ದಾರೆ. ರಥವು ಹನುಮಾನ ಕ್ರಾಸ್‌ನಿಂದ  ರಾಷ್ಟ್ರೀಯ ಹೆದ್ದಾರಿಗುಂಟ ಮಲ್ಲಿಕಾರ್ಜುನ ದೇವಸ್ಥಾನ, ಬೆಂಡಿಗೇರಿ ಓಣಿ ಮೂಲಕ ಚೌತಮನೆ ಕಟ್ಟೆ ಶಿವಗಂಗಾ ಚಿತ್ರಮಂದಿರಕ್ಕೆ ತೆರಳಿ ಸಮಾವೇಶದ ಕಾರ್ಯಕ್ರಮ ಜರುಗುವುದು. ಹನ್ನೆರಡು ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಹಾವಾಕ್ಯಾನಂದಜಿ ಮಹಾರಾಜ್, ಗುಲಬರ್ಗಾ ಆಶ್ರಮದ ಸ್ವಾಮಿ ಮಹೇಶ್ವರಾನಂದಜಿ ಮಹಾರಾಜ್ ಉಪಸ್ಥಿತರಿರುವರು. ಧಾರವಾಡದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಆರ್ಶೀಚನ ನೀಡುವರು. ಬೆಂಗಳೂರಿನ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್, ಮೈಸೂರಿನ ವೀರೇಶಾನಂದಜಿ ಮಹಾರಾಜ್, ಬೆಂಗಳೂರಿನ ರಮೇಶ ಉಮರಾಣಿ ಉಪನ್ಯಾಸ ನೀಡುವರು. ಸ್ಥಳೀಯ ವೈದ್ಯ ಡಾ. ಎಚ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿವರು. ಬಿಇಒ ಎಂ.ಬಿ. ಮಾಳಗಿ, ರಾಜಶೇಖರ ಪಾಟೀಲ, ಪಿ.ವಿ. ನಾಯಕ, ಅನೀಲ ಪಮ್ಮಾರ ಹಾಗೂ ಪಟ್ಟಣದ ಎಲ್ಲ ವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳ ಪ್ರಾಚಾರ್ಯರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ನೀಡಲಿ: ಚಿಂತಾಲ
ಧಾರವಾಡ: ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ಸ್ವ- ಸಹಾಯ ಗುಂಪುಗಳಿಗೆ ಅದರಲ್ಲೂ ಮಹಿಳಾ ಸ್ವ ಸಹಾಯ ಹಾಗೂ ಜಂಟಿ ಬಾಧ್ಯತಾ ಗುಂಪುಗಳಿಗೆ ಆದ್ಯತೆಯ ಮೇರೆಗೆ ಸುಲಭ ಸಾಲ- ಸೌಲಭ್ಯ ಕಲ್ಪಿಸಲು ಬ್ಯಾಂಕ್‌ಗಳು ಮುಂದಾಗಬೇಕೆಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಜಿ.ಆರ್. ಚಿಂತಾಲ ಅಭಿಪ್ರಾಯಿಸಿದರು. ಇಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಏರ್ಪಡಿಸಿದ್ದ ಸ್ವ- ಸಹಾಯ ಸಂಘಗಳ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳು, ಬ್ಯಾಂಕ್‌ಗಳು ಕ್ರಾಂತಿಯನ್ನೇ ಮಾಡಿದ್ದು, ಮಹಿಳೆಯರ ಬದುಕಿನ ಚಿತ್ರಣವನ್ನೆ ಬದಲಿಸಿವೆ. ಬ್ಯಾಂಕ್ ಸಹಾಯ ಪಡೆದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶ ಜನತೆ ಬದುಕು ಕಾಣುವ ವಿಶ್ವಾಸವನ್ನು ಹೊಂದುತ್ತಿದ್ದಾರೆ ಎಂದರು. ಬಡ ಜನರು ಅಭಿವೃದ್ಧಿಯ ಏಣಿ ಹತ್ತಲು ಬ್ಯಾಂಕುಗಳು ಅವರಿಗೆ ಮುಂದೆ ನಿಂತು ಪ್ರೇರಣೆ ನೀಡಬೇಕು. ಸದ್ಯ ರಾಜ್ಯದಲ್ಲಿ 90 ಲಕ್ಷಕ್ಕೂ ಮಿಕ್ಕಿದ ಸ್ವ ಸಹಾಯ ಸಂಘಗಳು ವಿವಿಧ ಬ್ಯಾಂಕ್‌ಗಳ ನೆರವಿನಿಂದ ಸಾಲ ಸಂಪರ್ಕಕ್ಕೆ ತರಲಾಗಿದೆ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ನಬಾರ್ಡ್ ಗ್ರಾಮೀಣ ಬ್ಯಾಂಕುಗಳ ಪ್ರಗತಿಯನ್ನು ಅತ್ಯಂತ ಆಸಕ್ತಿಯಿಂದ ಗಮನಿಸುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಸಿ. ಸಾಂಬಶಿವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೈ.ಎನ್. ಮಹದೇವಯ್ಯ, ಸುಧೀರ ಚಂದಕ್ಕರ, ಶಿಲ್ಪಾ ಶಂಕ್ರಯ್ಯ, ಉಲ್ಲಾಸ ಗುನಗಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.