ಧಾರವಾಡ

43ನೇ ಅಖಿಲ ಭಾರತ ಅಂತರ್ ಸಾಂಸ್ಥಿಕ ಟಿಟಿ ಟೂರ್ನಿ

Published On :

ಧಾರವಾಡ: ಇತ್ತೀಚೆಗೆ ಚೀನಾದಲ್ಲಿ ಜರುಗಿದ ಏಶಿಯನ್ ಯುವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಅಭಿಷೇಕ ಯಾದವ, ಜಿ. ಸತ್ಯನ್, ಸೌರವ್ ಸಹಾ, ಸ್ನೇಹಶಿಷ್ ಗ್ರೋವರ್ ಅವರಂಥ ಪ್ರಬಲ ಆಟಗಾರರನ್ನುಳ್ಳ ಅಗ್ರ ಶ್ರೇಯಾಂಕಿತ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರೋಮಿಶನ್ ಬೋರ್ಡ್ (ಪಿಎಸ್‌ಪಿಬಿ)ತಂಡವು 43ನೇ ಅಖಿಲ ಭಾರತ ಅಂತರ್ ಸಾಂಸ್ಥಿಕ ಟಿಟಿ ಪಂದ್ಯಾವಳಿಯಲ್ಲಿ ಮುನ್ನಡೆ ಸಾಧಿಸಿದೆ.
ಗುರುವಾರದಿಂದ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ಈ ಪಂದ್ಯಾವಳಿಯಲ್ಲಿ ಪಿಎಸ್‌ಪಿಬಿ ಬಾಲಕರ ತಂಡವು ತನ್ನ ಮೊದಲ ಪಂದ್ಯದಲ್ಲಿ ಏರ್ ಇಂಡಿಯಾ ತಂಡವನ್ನು 3-0 ಪಂದ್ಯಗಳ ಸುಲಭದ ಜಯ ದಾಖಲಿಸಿತು. ನಂತರ ಪ್ರಬಲ ರೇಲ್ವೆ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್ (ಆರ್‌ಎಸ್‌ಪಿಬಿ) ವಿರುದ್ಧವೂ ಪಿಎಸ್‌ಪಿಬಿ ಬಾಲಕರು ಉತ್ತಮ ಆಟವಾಡಿ 3-0ದಿಂದ ಜಯ ಪಡೆದರು.
ನಂತರ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್‌ಗಳಾಗಿದ್ದ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ತಂಡಕ್ಕೆ ಏರ್ ಇಂಡಿಯಾ ತಂಡ 3-1 ಪಂದ್ಯಗಳ ಸೋಲಿನ ಆಘಾತ ನೀಡಿತು.
ಇನ್ನು, ಬಾಲಕಿಯರ ವಿಭಾಗದಲ್ಲಿ ಪಿಎಸ್‌ಪಿಬಿ ತಂಡವು ಏರ್ ಇಂಡಿಯಾ ವಿರುದ್ಧ 3-0 ಪಂದ್ಯಗಳ ಸುಲಭದ ಜಯ ದಾಖಲಿಸಿದರೆ ತನ್ನ ಮುಂದಿನ ಪಂದ್ಯದಲ್ಲಿ ಏರ್ ಇಂಡಿಯಾ ತಂಡವು ಆರ್‌ಎಸ್‌ಪಿಬಿ ವಿರುದ್ಧ 3-1 ಪಂದ್ಯಗಳ ಜಯ ಪಡೆಯುವ ಮೂಲಕ ಸಮಾಧಾನದ ನಿಟ್ಟುಸಿರು ಬಿಟ್ಟಿತು. ಸೆಂಟ್ರಲ್ ರೆವೆನ್ಯೂ ಸ್ಪೋರ್ಟ್ಸ್ ಬೋರ್ಡ್, ಭಾರತೀಯ ಜೀವವಿಮಾ ನಿಗಮಗಳು ಕ್ರಮವಾಗಿ ಬಿಎಸ್ಸೆನ್ನೆಲ್ ಮತ್ತು ಏರ್ ಫೋರ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ತಂಡಗಳು ಬಾರದೆ ವಾಕ್ ಓವರ್ ಪಡೆದವು. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ತಂಡವು ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ತಂಡದ ವಿರುದ್ಧ 3-0 ಅಂತರದ ಜಯ ದಾಖಲಿಸಿದರೆ, ಇಂಡಿಯನ್ ಆಡಿಟ್ ಆಂಡ್ ಅಕೌಂಟ್ಸ್ ಡಿಪಾರ್ಟ್‌ಮೆಂಟ್ (ಐಎಎಡಿ) ತಂಡವು ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ ತಂಡದ ಸವಾಲನ್ನು 3-0ದಿಂದ ಬದಿಗಿರಿಸಿತು.
ಆ. 22ರಿಂದ 27ರ ವರೆಗೆ ನಡೆಯಲಿರುವ ಈ ಪಂದ್ಯಾವಳಿಯನ್ನು ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಜೀವವಿಮಾ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಎ.ಕೆ. ಸಾಹೂ ಉದ್ಘಾಟಿಸಿದರು. ಟಿಟಿಎಐ ಕಾರ್ಯದರ್ಶಿ ಧನರಾಜ ಚೌಧರಿ, ಬಿ. ಸಾಯಿಕುಮಾರ, ಕೆ.ಎಂ. ಬಸವರಾಜ, ಎ.ಎಸ್. ಕ್ಲೇರ್, ಧಾರವಾಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ರವಿ ಒಡೆಯರ, ಕಾರ್ಯದರ್ಶಿ ಟಿ.ಜಿ. ಉಪಾಧ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.