ನರೇಂದ್ರ ಮೋದಿಯನ್ನು ಒಪ್ಪಿದರೆ ಮಾತ್ರ ಮೈತ್ರಿ: ಪ್ರಹ್ಲಾದ ಜೋಶಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 22
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಬೇಕಿದ್ದರೆ ಜೆಡಿಎಸ್ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮೈತ್ರಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ, ಪ್ರಹ್ಲಾದ್ ಜೋಶಿ ಪಟ್ಟು ಹಾಕಿದ್ದಾರೆ.
ಗುರುವಾರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಗೆ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಈ ಚುನಾವಣೆಗೆ ಅಷ್ಟೇ ಸೀಮಿತ. ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಬೇಕು ಎಂದರೆ ಜೆಡಿಎಸ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಸ್ವೀಕರಿಸುವುದಕ್ಕೆ ಸಿದ್ಧವಾಗಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ತನ್ನ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲಿಲ್ಲ. ಅದೇ ರೀತಿ ಜೆಡಿಎಸ್ ಕೂಡ ಮೂರು ವಿಧಾನಪರಿಷತ್ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದೆ ಎಂದರು.
ಸಂಸತ್ತಿನ ಅಧಿವೇಶನದಲ್ಲಿ ರೂಪಾಯಿ ಅಪಮೌಲ್ಯ, ಕಲ್ಲಿದ್ದಲು ಹಂಚಿಕೆಯ ಕಡತಗಳ ನಾಪತ್ತೆ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಆಗಬಾರದು ಎಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ತನ್ನ ಸದಸ್ಯರಿಂದ ಗದ್ದಲ ಹುಟ್ಟು ಹಾಕುತ್ತಿದೆ. ಸಾಮಾನ್ಯವಾಗಿ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಗದ್ದಲ ಮಾಡುವುದು ವಾಡಿಕೆ. ಆದರೆ, ಯುಪಿಎ ಸರ್ಕಾರದಲ್ಲಿ ಆಡಳಿತ ಪಕ್ಷದವರೇ ಗದ್ದಲ ಹುಟ್ಟು ಹಾಕಿ ಅಧಿವೇಶನ ನಡೆಯದಂತೆ ಮತ್ತು ವಿವಾದಾತ್ಮಕ ವಿಷಯಗಳು ಚರ್ಚೆಗೆ ಬಾರದಂತೆ ತಡೆಯುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ನಲ್ಲಿ ರಾಜ್ಯಕ್ಕೆ ಆಗಮಿಸುವ ಕಾರ್ಯಕ್ರಮವಿದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಪಕ್ಷಕ್ಕೆ ಕರೆತರಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಒತ್ತಾಸೆ. ಹೀಗಾಗಿ ಈ ವಿಚಾರವನ್ನು ಪಕ್ಷದ ವರಿಷ್ಠರಿಗೆ ಗಮನಕ್ಕೆ ತಂದಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಲಾಟರಿ: ಲಾಟರಿ ಹೊಡೆದು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಾಧನೆ ಶೂನ್ಯ ಎಂದು ಬಣ್ಣಿಸಿದ ಸಂಸದ ಜೋಶಿ, ಪಡಿತರ ಧಾನ್ಯ ವಿತರಿಸುವಲ್ಲಿ ವಿಫಲವಾಗಿದೆ ಎಂದರು. ಹುಬ್ಬಳ್ಳಿ ನಗರದ ಜಿಮಖಾನಾ ಮೈದಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟದ ಕುರಿತು ಪ್ರಸ್ತಾಪಿಸಿದ ಅವರು, ರಿಕ್ರಿಯೇಷನ್ ಕ್ಲಬ್ಗೆ ನನ್ನನ್ನು ಗೌರವ ಉಪಾಧ್ಯಕ್ಷ ಎಂದು ನೇಮಕ ಮಾಡಲಾಗಿದೆ. ಗೌರವ ಉಪಾಧ್ಯಕ್ಷ ಹುದ್ದೆಗೆ ಆಡಳಿತಾತ್ಮಕ ಅಧಿಕಾರವಿರುವುದಿಲ್ಲ. ಕ್ಲಬ್ ಪರ ಮತ್ತು ವಿರುದ್ಧ ಹೋರಾಟಗಳು ನಡೆಯುತ್ತಿದ್ದು, ಕ್ಲಬ್ ವಿರೋಧ ನಡೆಯುತ್ತಿರುವ ಹೋರಾಟವನ್ನು ಮತ್ತು ಹೋರಾಟಗಾರರನ್ನು ಅಗೌರವದಿಂದ ನೋಡುವುದಿಲ್ಲ. ರಿಕ್ರಿಯೇಷನ್ ಕ್ಲಬ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್ನ ಶಾಸಕರಿದ್ದಾರೆ. ಹೀಗಾಗಿ ಅವರೇ ಸರ್ಕಾರದಿಂದ ಸಮರ್ಥ ಅಧಿಕಾರಿಯನ್ನು ನೇಮಕ ಮಾಡಿ ಸೀಮಿತ ಕಾಲಾವಧಿಯಲ್ಲಿ ವಿವಾದ ಪರಿಹರಿಸಲಿ ಎಂದರು.
ಕ್ಲಬ್ನಲ್ಲಿ ನಡೆಸಲು ಉದ್ದೇಶಿಸಿರುವ ನಂಗಾನಾಚ್, ಬಾರ್ ಮತ್ತು ಇಸ್ಪಿಟ್ ಆಟದ ಕುರಿತು ಕ್ಲಬ್ನ ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಬೇಕು. ಈ ನಿಟ್ಟಿನಲ್ಲಿ ಸ್ಪಷ್ಟೀಕರಣ ನೀಡುವಂತೆ ಕ್ಲಬ್ ಆಡಳಿತ ಮಂಡಳಿ ಸದಸ್ಯರಿಗೆ ಸಲಹೆ ನೀಡುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

