ಧಾರವಾಡ

ಸುದ್ದಿ ಸಂಕ್ಷೇಪ

Published On :

ಗಾಣಿಗ ಸಮಾಜದವರು ಶ್ರಮಜೀವಿಗಳು
ಧಾರವಾಡ: ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಸಮಾಜವನ್ನು ಮುನ್ನಡೆಸುವವರೆ ನಿಜಕ್ಕೂ ದೇವರಿಗೆ ಪ್ರಿಯರು ಎಂದು ಬಿಜಾಪುರದ ವನಶ್ರೀ ಸಂಸ್ಥಾನದ ಜಯಬಸವ ಸ್ವಾಮಿಗಳು ಹೇಳಿದರು. ತಾಲೂಕು ಗಾಣಿಗ ಸಮಾಜದ ಪ್ರಥಮ ವರ್ಷದ ವಾರ್ಷಿಕ ಸಭೆ, ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನ ಎಲ್ಲರಿಗೂ ಚರಿತ್ರೆ ಇದೆ. ಆದರೆ, ಕೆಲವರಿಗೆ ಮಾತ್ರ ಚಾರಿತ್ರ್ಯವಿದೆ. ಅದನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡಬೇಕು. ಗಾಣಿಗ ಸಮುದಾಯದ ಜನ ಶ್ರಮಜೀವಿಗಳಾಗಿದ್ದು, ಬೇರೆ ಬೇರೆ ವೃತ್ತಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ತಾವು ಗಾಣಿಗರು ಎಂದು ಹೇಳಿಕೊಳ್ಳಲು ವಿಚಾರ ಮಾಡುತ್ತಿದ್ದು, ಈ ಭಾವನೆ ತೊರೆಯಬೇಕೆಂದು ಹೇಳಿದರು. ಗಾಣಿಗ ಸಮಾಜದವರು ಒಂದಾಗಿ ಸಂಘಟನೆ ಮೂಲಕ ಸಮಾಜದ ಇತರರನ್ನು ಮುಂದಕ್ಕೆ ಕರೆದೊಯ್ದು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಸಂಘಟನೆ ಬಲಗೊಂಡರೆ ಮಾತ್ರ ಗಾಣಿಗ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯ. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಾದರಿ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಮುಂದಾಗಬೇಕೆಂದು ಸಲಹೆ ನೀಡಿದರು. ಅತಿಥಿಗಳಾಗಿ ಆಗಮಿಸಿದ ಸಂಘದ ಗೌರವಾಧ್ಯಕ್ಷ ಕೆ.ಎಫ್. ತಲವಾಯಿ, ಕೋಶಾಧ್ಯಕ್ಷ ಜಿ.ಎಸ್. ಛಬ್ಬಿ ಮಾತನಾಡಿದರು. ಜಿ.ಟಿ. ಶಿರೋಳ ಅಧ್ಯಕ್ಷತೆ ವಹಿಸಿದ್ದರು. ದುಂಡಮ್ಮ ತೇಗೂರ, ಮಲ್ಲಪ್ಪ ಚಿಕ್ಕಯ್ಯನವರ, ಅಂದಾನಪ್ಪ ಸಜ್ಜನ, ತಿಪ್ಪಮ್ಮ ಮಜ್ಜಗಿ, ಅಶ್ವಿನಿ ಮಜ್ಜಗಿ, ಅನಸೂಯಾ ಚೋಳಪ್ಪನವರ ಇದ್ದರು. ಸಂಜಯ ಕಿತ್ತೂರು ಸ್ವಾಗತಿಸಿದರು. ಅಶೋಕ ನಾಗಸಮುದ್ರ ವರದಿ ಒಪ್ಪಿಸಿದರು. ಎಂ.ಎಸ್. ಗಾಣಿಗೇರ ನಿರೂಪಿಸಿದರು.

ಸೇವೆಯಿಂದ ವಜಾ
ಹುಬ್ಬಳ್ಳಿ: ತಾಲೂಕಿನ ರಾಮಾಪುರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಅಂಗನವಾಡಿ ಕಾರ್ಯಕರ್ತೆ ಎಂದು ಸೇವೆ ಸಲ್ಲಿಸುತ್ತಿದ್ದ ಅನಸೂಯ ಬಿದರಗಡ್ಡಿ, ಉಳವವ್ವ ಒಡ್ಡೂಡಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆ, ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಇನ್ನಿತರ ಕರ್ತವ್ಯ ನಿರ್ವಹಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆ ಅನಸೂಯ ಬಿದರಗಡ್ಡಿ ಮತ್ತು ಸಹಾಯಕಿ ಉಳವವ್ವ ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೀವನರಾವ್ ಕುಲಕರ್ಣಿ
ಧಾರವಾಡ: ಇಲ್ಲಿಯ ಸಿದ್ಧಾರ್ಥ ಕಾಲೋನಿ ನಿವಾಸಿ ಜೀವನರಾವ್ ಶ್ರೀನಿವಾಸರಾವ್ ಕುಲಕರ್ಣಿ (83) ಬುಧವಾರ ನಿಧನರಾದರು. ಇವರು ಮೂಲತಃ ಸವಣೂರ ತಾಲೂಕಿನ ಕಾರಡಗಿ ಗ್ರಾಮದವರಾಗಿದ್ದು, ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನಗಲಿದ್ದಾರೆ.

ಆಯುಕ್ತರ ಕಚೇರಿ ಸ್ಥಳಾಂತರ ಇಲ್ಲ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ಆದಾಯಕರ ಆಯುಕ್ತರ ಕಚೇರಿಯನ್ನು ಸ್ಥಳಾಂತರಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ವಿತ್ತ ಖಾತೆ ಸಚಿವ ಜೆ.ಡಿ. ಸೀಲಂ ಅವರಿಗೆ ಹುಬ್ಬಳ್ಳಿಯಲ್ಲಿನ ಆದಾಯ ತೆರಿಗೆ ಇಲಾಖೆ ಆಯುಕ್ತರ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದು ಕೋರಿ ಪತ್ರ ಬರೆದಿದ್ದರು. ಸಂಸದ ಜೋಶಿ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ವಿತ್ತ ಖಾತೆ ಸಚಿವ ಜೆ.ಡಿ. ಸೀಲಂ ಅವರು ಕೇಂದ್ರದ ಎದುರು ಹುಬ್ಬಳ್ಳಿ ಆದಾಯ ತೆರಿಗೆ ಇಲಾಖೆ ಆಯುಕ್ತರ ಕಚೇರಿ ಸ್ಥಳಾಂತರಿಸುವ ಪ್ರಸ್ತಾಪ ಇಲ್ಲ ಎಂದು ಉತ್ತರಿಸಿದ್ದಾರೆಂದು ಸಂಸದ ಜೋಶಿ ತಿಳಿಸಿದ್ದಾರೆ.

ಇಂದು ಕ್ಷೀರಭಾಗ್ಯ ಯೋಜನೆ ಜಾರಿ
ಧಾರವಾಡ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಜಾರಿಗೊಳಿಸಿರುವ ಕ್ಷೀರಭಾಗ್ಯ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಆ. 31ರಿಂದ ಜಾರಿಗೊಳ್ಳಲಿದೆ. ಮೂಲಭೂತ ಸೌಕರ್ಯ, ವಾರ್ತಾ ಇಲಾಖೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಲ್ಲಿನ ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಜಾನೆ 9.30ಕ್ಕೆ ಮಕ್ಕಳಿಗೆ ಬಿಸಿಹಾಲು ವಿತರಿಸಿ ಯೋಜನೆ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ರತ್ನವ್ವ ಕಳ್ಳಿಮನಿ, ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಎ.ಎನ್. ಪಾಟೀಲ ಭಾಗವಹಿಸುವರು ಎಂದು ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.