ಮೋಜು, ಮಸ್ತಿಗೆ ಅವಕಾಶವಿಲ್ಲ: ಸಚಿವ ಲಾಡ್
ಧಾರವಾಡ: ಹುಬ್ಬಳ್ಳಿ ಗ್ರೌಂಡ್ ಬಚಾವೋ ಹೋರಾಟ ಸಮಿತಿ ಪದಾಧಿಕಾರಿಗಳು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ ದೇಶಪಾಂಡೆ ನಗರದಲ್ಲಿನ ಮೈದಾನದ ಕುರಿತು ಕೂಲಂಕಷ ಚರ್ಚೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಕುರಿತು ಮಾತನಾಡಿದ ಸಚಿವ ಸಂತೋಷ ಲಾಡ್, ಯಾವುದೇ ಹಂತದಲ್ಲೂ ಮೈದಾನದಲ್ಲಿ ಮೋಜು ಮಸ್ತಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ಮೈದಾನವನ್ನು ಮುಕ್ತವಾಗಿಡುವುದರ ಕುರಿತು ಸರ್ಕಾರ ಸಕರಾತ್ಮಕ ವಿಚಾರ ಹೊಂದಿದೆ. ಮೈದಾನದ ಕುರಿತು ತಮ್ಮ ವಾದಕ್ಕೆ ತಕ್ಕ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಿದರು. ಅಲ್ಲದೇ, ಸದ್ಯದಲ್ಲಿಯೇ ರಿಕ್ರಿಯೇಶನ್ ಕ್ಲಬ್ ಮತ್ತು ಹೋರಾಟ ಸಮಿತಿ ಪದಾಧಿಕಾರಿಗಳ ಜತೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
1915ರಲ್ಲಿ ಬ್ರಿಟಿಷ್ ಸರ್ಕಾರ ಮೈದಾನ ಜಾಗೆಯನ್ನು ಜಿಮಖಾನಾಗೆ ನೀಡುವ ಸಂದರ್ಭದಲ್ಲಿ ವಿಧಿಸಿದ್ದ ಕೆಲ ಷರತ್ತುಗಳನ್ನು ರಿಕ್ರಿಯೇಶನ್ ಕ್ಲಬ್ ಪದಾಧಿಕಾರಿಗಳು ಉಲ್ಲಂಘಿಸಿದ್ದಾರೆ. ಮೈದಾನ ಜಾಗೆಯನ್ನು ಸ್ವಂತ ಆಸ್ತಿಯಾಗಿ ಮಾಡಿಕೊಂಡು ತಮಗೆ ಅನುಕೂಲವಾಗುವಂಥ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆಂದು. ಜಾಗೆಯ ಸುತ್ತಲೂ ಶಾಲಾ ಕಾಲೇಜುಗಳು, ಆಸ್ಪತ್ರೆ, ದೇವಸ್ಥಾನಗಳಿದ್ದು, ಸಾರ್ವಜನಿಕ ವಾಸ ಸ್ಥಾನವಾಗಿದೆ. ಇಂಥ ಜಾಗೆಯಲ್ಲಿ ಮೋಜು ಮಸ್ತಿಗಾಗಿ ಜೂಜುಕೇಂದ್ರ, ಬಾರ್ ಆಂಡ್ ರೆಸ್ಟೋರೆಂಟ್ ಸ್ಥಾಪನೆ ಮಾಡಲು ಮುಂದಾಗಿರುವುದು ಸರಿಯಲ್ಲ. ಹೀಗಾಗಿ ಮೂಲ ಪತ್ರದಲ್ಲಿರುವ ಕರಾರಿನಂತೆ ಸರ್ಕಾರ ಮೈದಾನ ಜಾಗೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮೊದಲಿನಿಂದಲೂ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ, ಸದ್ಯ ರಿಕ್ರಿಯೇಶನ್ ಕ್ಲಬ್ನವರು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಸಾರ್ವಜನಿಕರ ಪರವಾಗಿದೆ. ಈ ಮೈದಾನದಲ್ಲಿ ವಿವಿಧ ಚಟುವಟಿಕೆ ನಡೆಯದಂತೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಮುಕ್ತವಾಗಿರಿಸುವಂತೆ ಮಾಡಲು ಸರ್ಕಾರ ಖಂಡಿತ ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಹೋರಾಟ ಸಮಿತಿಯ ಸಿ.ಬಿ.ಎಲ್. ಹೆಗಡೆ, ಡಾ. ಮಹೇಶ ನಾಲವಾಡ, ಅಮೃತ ಇಜಾರಿ, ಕಾಡಯ್ಯ ಹಿರೇಮಠ, ಶೀಲಾ ಮಿರ್ಜಿ, ಶೀತಲ ಮಲಗಾವಿ, ಹನುಮಂತಪ್ಪ ಮೇಟಿ, ಎಸ್.ಎಸ್. ಪಾಟೀಲ, ವೆಂಕಟೇಶ ಸವದತ್ತಿ, ಸುನಿತಾ ಹೆಗಡೆ, ವಸಂತ ಹೊಸಮನಿ, ಎನ್.ಕೆ. ಮುಗಳಿ ಮತ್ತಿತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

