ತೇಜಪಾಲ್ ಭಗವದ್ಗೀತೆ ಓದಲಿ: ಮುತಾಲಿಕ್
ಹುಬ್ಬಳ್ಳಿ: ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲುಪಾಲಾಗಿರುವ ತೆಹೆಲ್ಕಾ ನಿವೃತ್ತ ಸಂಪಾದಕ ತರುಣ ತೇಜಪಾಲ್ಗೆ ರಾಷ್ಟ್ರ, ಸಮಾಜ ಹಾಗೂ ಮಹಿಳೆಯರ ಸುರಕ್ಷತೆ ಸಾರುವ ಭಗವದ್ಗೀತೆ ಕೃತಿಯನ್ನು ತಲುಪಿಸಲಾಗುವುದು ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.
ಗೋವಾ ಜೈಲ್ನಲ್ಲಿರುವ ತೇಜಪಾಲ್ಗೆ ಖುದ್ದಾಗಿ ಸೇನಾದ ಕಾರ್ಯಕರ್ತರು ಭಗವದ್ಗೀತೆ ಕೃತಿ ನೀಡಲಿದ್ದಾರೆ. ಇದೇ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದ ಮೇರೆಗೆ ಕರ್ತವ್ಯಕ್ಕೆ ರಾಜೀನಾಮೆ ನೀಡಿರುವ ಉಪಸಂಪಾದಕಿ ಶೋಮಾ ಚೌಧರಿ ಹಾಗೂ ತೆಹೆಲ್ಕಾ ಕಾರ್ಯಾಲಯಕ್ಕೂ ಭಗವದ್ಗೀತೆ ಕೃತಿ ತಲುಪಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ತೇಜಪಾಲ್ ಕರ್ಮಕಾಂಡವನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಆರೋಪಿ ಜೈಲ್ ಸೇಲುವಂತೆ ಮಾಡಿದ ಮಾಧ್ಯಮಗಳಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವುದಾಗಿ ಮುತಾಲಿಕ್ ತಿಳಿಸಿದರು.
ರಾಷ್ಟ್ರೀಯವಾದಿಗಳ ವಿರುದ್ಧ ಸುಳ್ಳು ಕುಟುಕು ಕಾರ್ಯಾಚರಣೆ ನಡೆಸುವ ಮೂಲಕ ಕೋಟ್ಯಾಂತರ ಅಕ್ರಮ ಹಣವನ್ನು ತೇಜಪಾಲ್ ಸಂಪಾದಿಸಿದ್ದಾರೆ. 2 ವರ್ಷದ ಹಿಂದೆ ಗೋವಾದಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯೊಂದರಲ್ಲಿ ಆರೋಪಿ ತೇಜಪಾಲ್ ನೀಡಿರುವ ಹೇಳಿಕೆ ಹಾಗೂ ವರ್ತನೆ ಅವರಲ್ಲಿನ ವಿಕೃತ ಮನಸ್ಸಿಗೆ ಸಾಕ್ಷಿ ಎಂದರು.
ಚುನಾವಣೆ ಸಂದರ್ಭದಲ್ಲಿ ಜಾರ್ಜ್ ಫನಾಂಡೀಸ್ ಸೇರಿದಂತೆ ರಾಷ್ಟ್ರೀಯವಾದಿಗಳ ಮೇಲೆ ಇಲ್ಲಸಲ್ಲದ ವರದಿಗಳನ್ನು ಪ್ರಕಟಿಸುವ ಮೂಲಕ ತೇಜಪಾಲ್ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದೂ ಮುತಾಲಿಕ್ ಆರೋಪಿಸಿದರು.
ಹಕ್ಕುಚ್ಯುತಿ ಖಂಡನೀಯ: ಶಾಸಕ ರಮೇಶಕುಮಾರ್ ಶಾಸಕಾಂಗದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದು ಖಂಡನೀಯ.
ರಮೇಶಕುಮಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಹಿರೇಮಠ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಆಕ್ಷೇಪಿಸಬೇಕಿದ್ದಲ್ಲಿ ಶಾಸಕ, ನ್ಯಾಯಾಲಯದಲ್ಲಿ ಹಿರೇಮಠ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ, ಅಥವಾ ಕಾನೂನಾತ್ಮಕ ಹೋರಾಟ ನಡೆಸಲಿ. ಇದೆಲ್ಲವನ್ನೂ ಬಿಟ್ಟು ಅಧಿವೇಶದಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದು ತರವಲ್ಲ ಎಂದರು.
ಸಿಎಂಗೆ ಮನವಿ: ಕರಾವಳಿ ಪ್ರದೇಶ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮತ್ತಿತರ ಪ್ರದೇಶಗಳು ಭಯೋತ್ಪಾದಕರ ತಾಣಗಳಾಗಿ ಮಾರ್ಪಡುತ್ತೀವೆ ಎಂದು ಆಂತಕ ವ್ಯಕ್ತಪಡಿಸಿದ ಮುತಾಲಿಕ್, ಇವರುಗಳ ದಮನಕ್ಕೆ ವಿಶೇಷ ಪಡೆ ನಿಯೋಜಿಸುವಂತೆ ಆಗ್ರಹಿಸಿ ಡಿ. 4ರಂದು ಸಿಎಂ ಹಾಗೂ ಗೃಹ ಸಚಿವರಿಗೆ ಸೇನಾದ ವತಿಯಿಂದ ಮನವಿ ಅರ್ಪಿಸಲಾಗುವುದೆಂದರು.
ಪೊಲೀಸ್ ಸಿಬ್ಬಂದಿ ಮುಕ್ತವಾಗಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಿಸಬೇಕಲ್ಲದೇ ಎಲ್ಲ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವಂತೆಯೂ ಆಗ್ರಹಿಸಲಾಗುವುದು ಎಂದರು.
ರು. 5 ಸಾವಿರ ನೀಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಜ್ ಯಾತ್ರಿಗಳಿಗೆ ಪ್ರತಿವರ್ಷವೂ ರು. 42 ಸಾವಿರ ಸಬ್ಸಿಡಿ ನೀಡುತ್ತೀವೆ. ಇದೀಗ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗ ತೊಡಗಿದೆ. ಆದ್ದರಿಂದ ಪ್ರತಿಯೊಬ್ಬ ಮಾಲಾಧಾರಿಗಳಿಗೆ ಸರ್ಕಾರ ರು. 5 ಸಾವಿರ ನೀಡಬೇಕೆಂದು ಒತ್ತಾಯಿಸಿದರು.
ಎಲ್ಲ ಕೈದಿಗಳಿಗೂ ವಿಸ್ತರಿಸಲಿ: ಭಯೋತ್ಪಾದನೆ ಆರೋಪದ ಮೇರೆಗೆ ಸಿಲುಕಿ ಹಾಕಿಕೊಂಡಿರುವ ಅಬ್ದುಲ್ ನಾಜೀರ್ ಮದನಿಯ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಅಚ್ಚರಿಯನ್ನುಂಟು ಮಾಡಿದೆ.
ರಾಜ್ಯದಲ್ಲಿ 918 ಕೈದಿಗಳಿದ್ದ ಈ ಪೈಕಿ 113 ದೀರ್ಫ ಹಾಗೂ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿ ಎಂದು ಆಗ್ರಹಿಸಿ ಅವರು 2006 ರಿಂದ 2013ರ ವರೆಗೆ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡದೇ ಇರಲು ರಾಜ್ಯಪಾಲರ ಹಠವೇ ಕಾರಣವಾಗಿದೆ ಎಂದು ದೂರಿದರು.
ಶಾದಿಭಾಗ್ಯ ಯೋಜನೆ ಜಾರಿಯಿಂದ ಸಮಾಜದಲ್ಲಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಉಂಟಾಗುತ್ತಿದೆ ಎಂದ ಮುತಾಲಿಕ್, ಮೌಢ್ಯ ಕಾನೂನು ಜಾರಿಗೆ ಸಂಬಂಧಿಸಿದಂತೆ ಪೂರ್ವಾಪರಗಳನ್ನು ಯೋಚಿಸದೆ ಇರುವುದು ದುರದುಷ್ಟಕರ ಎಂದೂ ಅಭಿಪ್ರಾಯಪಟ್ಟರು.
ಸೇನಾದ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಕುಮಾರ ಹಕಾರೆ, ಮಿದುಳಾ ಹದಿಪುರ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

