ಸುದ್ದಿ ಸಂಕ್ಷೇಪ
ಹೊಲದಲ್ಲಿಯೇ ಕೊಳೆಯುತ್ತಿದೆ ಬತ್ತ: ರೈತ ಕಂಗಾಲು
ಕಬ್ಬು ದರ ಇತ್ಯರ್ಥಕ್ಕೆ ತೋರಿದ ಕಾಳಜಿಯನ್ನು ಸರ್ಕಾರ ಬತ್ತ ದರದ ಇತ್ಯರ್ಥಕ್ಕೆ ತೋರಿಸುತ್ತಿಲ್ಲ. ಪರಿಣಾಮ ಬತ್ತ ಬೆಳೆದ ರೈತರ ಸಮಸ್ಯೆ ದಿನೇ ದಿನೇ ತಾರಕಕ್ಕೇರುತ್ತಿದ್ದು, ಈಗ ರೈತರು ಹೊಲದಲ್ಲಿಯೇ ಬತ್ತವನ್ನು ಹಾಕಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ ಮಧ್ಯ ಪ್ರವೇಶ ಮಾಡಿ, ನಮ್ಮ ಸಮಸ್ಯೆ ಇತ್ಯರ್ಥ ಮಾಡಿ ಎಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿಯೇ ಅತ್ಯಧಿಕ ಸೋನಾಮಸೂರಿ ಬತ್ತ ಬೆಳೆಯುವ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಈಗ ದರ ಕುಸಿತ ನಾನಾ ರೀತಿಯ ಮಜಲು ಪಡೆಯುವ ಎಲ್ಲ ಸಾಧ್ಯತೆ ಇದೆ. ರೈತರು ಹೋರಾಟಕ್ಕೂ ಧುಮುಕುವ ಎಲ್ಲ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತದೆ. ಕಟಾವು ಮಾಡಿ, 2 ತಿಂಗಳಾಗುತ್ತ ಬಂದರೂ ಖರೀದಿ ಮಾಡುವುದಕ್ಕೆ ಯಾರೂ ಮುಂದೆ ಬರದೇ ಇರುವುದರಿಂದ ರೈತರೇ ಬತ್ತವನ್ನು ಚೀಲದಲ್ಲಿ ತುಂಬಿಸಿ, ಮನೆ, ಗೋದಾಮಿಗೆ ಸಾಗಿಸುತ್ತಿದ್ದಾರೆ.
ರು. 1500 ನೀಡಿ: ರಾಜ್ಯ ಸರ್ಕಾರ ಬತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆಯಾದರೂ ಇನ್ನು ಸಮರ್ಪಕವಾಗಿ ಖರೀದಿಯಾಗುತ್ತಿಲ್ಲ ಹಾಗೂ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗೆ ನೀಡುವುದಕ್ಕೂ ರೈತರು ಮುಂದಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಈಗ ರು. 1200ಗೆ (75 ಕೆಜಿ) ಕೇಳುತ್ತಿದ್ದಾರೆ. ಆದರೆ, ರೈತರು ದರಕ್ಕೆ ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಕನಿಷ್ಠ ರು. 1500 ನೀಡಿದರೆ ಮಾರಾಟ ಮಾಡಲು ಸಾಧ್ಯ ಎಂದು ಹೇಳುತ್ತಿದ್ದಾರೆ.
ಲೇವಿ ವಿವಾದ: ಈ ಬಾರಿ ಬತ್ತ ದರ ಕುಸಿತಕ್ಕೆ ಕಾರಣವಾಗಿರುವುದು ಲೇವಿ ಸಮಸ್ಯೆಯಾಗಿದೆ. ಸರ್ಕಾರ ನಿಗದಿ ಮಾಡಿರುವ ಲೇವಿ ಅಧಿಕವಾಗಿದೆ ಎಂದು ಅಕ್ಕಿಗಿರಣಿ ಮಾಲೀಕರ್ಯಾರು ಅಕ್ಕಿ ಗಿರಣಿಯನ್ನೇ ಶುರು ಮಾಡಿಲ್ಲ. ರಾಜ್ಯ ಸರ್ಕಾರ ಈ ಬಾರಿ 13.80 ದಶಲಕ್ಷ ಟನ್ ಲೇವಿ ನಿಗದಿ ಮಾಡಿದೆ. ಇದನ್ನು ಕೊಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಅಕ್ಕಿಗಿರಣಿ ಮಾಲೀಕರು ಬತ್ತ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಇದುವೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನುವುದು ಸರ್ಕಾರಕ್ಕೂ ಗೊತ್ತಿದೆ. ಆದರೂ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದ ಸರ್ಕಾರ ತಾನು ನಿಗದಿ ಮಾಡಿರುವ ಲೆಕ್ಕಾಚಾರದಲ್ಲಿಯೇ ಲೇವಿ ನೀಡುವಂತೆ ಒತ್ತಾಯಿಸಿದೆ.
ಕವಿವಿ ಪರೀಕ್ಷೆ ಮುಂದಕ್ಕೆ
ಧಾರವಾಡ: ಮೈಸೂರು ರಾಜ ವಶಂಸ್ಥ ಡಾ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ ಪ್ರಯುಕ್ತ ರಾಜ್ಯ ಸರ್ಕಾರ ರಜೆ ಘೋಷಿಸಿದ್ದರ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲಾ ತಿಳಿಸಿದ್ದಾರೆ. ಅಂತೆಯೇ ಕರ್ನಾಟಕ ವಿವಿ ಕುಲಪತಿ ಪ್ರೊ.ಎಚ್.ಬಿ. ವಾಲಿಕಾರ ಅವರ ಆದೇಶದಂತೆ ಡಿ. 11ರಂದು ಕರ್ನಾಟಕ ವಿವಿಯ ವ್ಯಾಪ್ತಿಯ ಅಡಿಯಲ್ಲಿ ನಡೆಯಬೇಕಿದ್ದ ಎಲ್ಲ ಸ್ನಾತಕ(ಯು.ಜಿ.) ಪರೀಕ್ಷೆಗಳನ್ನು ಮತ್ತು ಮೌಲ್ಯಮಾಪನ ಕಾರ್ಯವನ್ನು ಮುಂದೂಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

