ಮಾಹಿತಿ ಹಕ್ಕಿನ 'ಮಾಹಿತಿ' ಎಷ್ಟು ಸತ್ಯ?
ಹುಬ್ಬಳ್ಳಿ: ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಸರಿಯಾದ ಉತ್ತರವನ್ನೇ ನೀಡುತ್ತಾರಾ? ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿಷಯಕ್ಕೆ ಬಂದಾಗ ಇದಕ್ಕೆ ಸಿಗುವ ಸ್ಪಷ್ಟ ಉತ್ತರ 'ಇಲ್ಲ'.
ನಿಜ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಸಾರ್ವಜನಿಕರಿಂದ ಕೇಳಲಾದ ಮಾಹಿತಿಗೆ ಹಾರಿಕೆ ಉತ್ತರ ಅಥವಾ ಮಾಹಿತಿ ನೀಡುತ್ತಿದ್ದಾರೆ. ತನ್ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ವ್ಯವಸ್ಥಿತ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಆರ್ಟಿಐ ಕಾರ್ಯಕರ್ತ ಹಾಗೂ ನ್ಯಾಯವಾದಿ ಮೋಹನ ಮಾಳಿಗೇರ ಅವರನ್ನು ಪಾಲಿಕೆಯ ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆ. ತಾವು ತಪ್ಪು ಮಾಹಿತಿ ನೀಡಿದ್ದಲ್ಲದೇ ಒಂದೇ ದಿನ ಎರಡು ರೀತಿಯ ಮಾಹಿತಿ ಉತ್ತರ ನೀಡುವ ಮೂಲಕ ದಂಗು ಬಡಿಸುವ ಕೆಲಸ ಮಾಡಿದ್ದಾರೆ. ಮಾಹಿತಿ ಹಕ್ಕಿನ ಬಗ್ಗೆ ಪರಿಪೂರ್ಣ ಮಾಹಿತಿ ಹೊಂದಿರದೇ ಮನ ಬಂದಂತೆ ಉತ್ತರ ಗೀಚಿ ಕಳುಹಿಸುತ್ತಿದ್ದಾರೆ. ಇಂಥ ಅವಾಂತರ ಸೃಷ್ಟಿಸಿರುವ ದಾಖಲೆಯನ್ನು ಮಾಳಿಗೇರ, 'ಕನ್ನಡಪ್ರಭ'ಕ್ಕೆ ಒದಗಿಸಿದ್ದಾರೆ.
ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ಮಾಹಿತಿ ಆಯೋಗ ಮತ್ತು ಮಾಹಿತಿ ಹಕ್ಕು ಅಧಿನಿಯಮ 2005 ಜಾರಿಗೆ ತರಲಾಯಿತು. ಆದರೆ ಹು-ಧಾ ಪಾಲಿಕೆ ಅಧಿಕಾರಿಗಳಿಗೆ ಇವೆಲ್ಲವೂ ಲೆಕ್ಕಕ್ಕಿಲ್ಲ ಎಂಬಂತಿದೆ.
ಪ್ರಕರಣ-1: ಆರ್ಟಿಐ ಕಾರ್ಯಕರ್ತ ಮೋಹನ ಮಾಳಿಗೇರ, ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್ಗಳಿಗೆ ಬೀದಿ ದೀಪ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಪಾಲಿಕೆಯ ಅಧಿಕಾರಿಗಳಿಂದಮಾಹಿತಿ ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಪಾಲಿಕೆಯ ವಿದ್ಯುತ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್. ಎಸ್. ಪಠಕೆ ಕೊಟ್ಟ ಉತ್ತರ ಅಚ್ಚರಿ ಮೂಡಿಸುವಂತಿತ್ತು. ಪಠಕೆ ಅವರದ್ದೇ ಸಹಿಯುಳ್ಳ ಎರಡು ಪ್ರತ್ಯೇಕ ಉತ್ತರ ಪ್ರತಿ ಒಂದೇ ದಿನದಂದು ಮಾಳಿಗೇರ ಅವರ ಕೈಸೇರಿತ್ತು. ಒಂದರಲ್ಲಿ ನೀವು ಕೇಳಿದ ಮಾಹಿತಿಯು ಪ್ರಶ್ನಾರ್ಥಕ ರೂಪದಲ್ಲಿದ್ದು ಇದಕ್ಕೆ ಮಾಹಿತಿ ಹಕ್ಕಿನ ಪರಿಭಾಷೆಯಲ್ಲಿ ಉತ್ತರಿಸಲಾಗದು ಎಂದು ಸೂಚಿಸಿ ಮಾಹಿತಿ ನಿರಾಕರಿಸಲಾಗಿತ್ತು. ಇನ್ನೊಂದು ಪ್ರತಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 67 ವಾರ್ಡ್ಗಳಲ್ಲಿ ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ ಎಂಬ ಉತ್ತರ ನೀಡಲಾಗಿತ್ತು. ಒಂದೇ ಪ್ರಶ್ನೆಗೆ ಎರಡು ಬಗೆಯ ಉತ್ತರ ಹಾಗೂ ಪರಿಪೂರ್ಣ ಮಾಹಿತಿ ರಹಿತ ಪ್ರತಿ ಕೈ ಸಿಕ್ಕಾಗ ಮಾಳಿಗೇರ ಗೊಂದಲಕ್ಕೀಡಾದರು. 'ಕನ್ನಡಪ್ರಭ' ಎಸ್.ಎಸ್. ಪಠಕೆ ಅವರನ್ನು ಪ್ರಶ್ನಿಸಿದಾಗ, ಮಾಳಿಗೇರ ಯಾವ ಉದ್ದೇಶಕ್ಕಾಗಿ ಮಾಹಿತಿ ಅಗತ್ಯ ಎಂಬ ಅಂಶವನ್ನು ಅರ್ಜಿಯಲ್ಲಿ ಸಲ್ಲಿಸದೇ ಇರುವ ಕಾರಣಕ್ಕೆ ಉತ್ತರ ನೀಡುವಲ್ಲಿ ಇಂಥ ಸಮಸ್ಯೆಯಾಯಿತು ಎನ್ನುವ ಮೂಲಕ ಮತ್ತೊಂದು ಅವಾಂತರ ಸೃಷ್ಟಿಸಿದರು. ಮಾಹಿತಿ ಹಕ್ಕು ಅಧಿನಿಯಮ 2005ರ ಪುಸ್ತಕದ 221ನೇ ಪುಟ ಹಾಗೂ 289ನೇ ಪುಟದಲ್ಲಿ ಯಾವ ಕಾರಣಕ್ಕೆ ಮಾಹಿತಿ ಅಗತ್ಯ ಎಂಬ ಅಂಶ ಅರ್ಜಿಯಲ್ಲಿ ತಿಳಿಸಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಆದಾಗ್ಯೂ ಪಠಕೆ ಈ ರೀತಿ ಹೇಳಿಕೆ ನೀಡಿದ್ದಲ್ಲದೇ, ಎರಡು ಬಗೆಯ ಉತ್ತರ ನೀಡಿದ್ದು ಮಾಹಿತಿ ನೀಡುವ ಕಾರ್ಯದಿಂದ ನುಣುಚಿಕೊಳ್ಳುವ ಜೊತೆಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದೂ ಸ್ಪಷ್ಟವಾಗುತ್ತದೆ.
ಪ್ರಕರಣ-2: ಇದಷ್ಟೇ ಅಲ್ಲ ಮತ್ತೊಂದು ಪ್ರಕರಣದಲ್ಲಿಯೂ ಅಧಿಕಾರಿಗಳ ಉದಾಸೀನತೆ ಪ್ರದರ್ಶನವಾಗಿದೆ. ಮಾಳಿಗೇರ ಅವರು, 1983ರಿಂದ 2012ರವರೆಗೆ ಮಹಾನಗರ ಪಾಲಿಕೆಗೆ ಬಂದ ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯವೆಷ್ಟು? ಈ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಂದ ಅನುದಾನವೆಷ್ಟು? ಈ ಅನುದಾನದಿಂದ ಕೈಗೊಂಡ ಕಾಮಗಾರಿಗಳ ಮಾಹಿತಿ ಕೇಳಿದ್ದರು. ಆದರೆ ಇದಕ್ಕೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಎ. ಎನ್. ರಾಮದಾಸ್, ಕೇಳಿದ ಮಾಹಿತಿ ಪ್ರಶ್ನಾರ್ಥಕ ರೂಪದಲ್ಲಿದೆ ಎಂದು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಾಳಿಗೇರ ಅವರ ವಿಷಯದಲ್ಲಿ ಮಾತ್ರವಲ್ಲ ಇದೇ ರೀತಿ ಅನೇಕ ಜನರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುವುದು, ಮಾಹಿತಿ ನಿರಾಕರಿಸುತ್ತಿದ್ದಾರೆ ಎಂಬ ವ್ಯಾಪಕ ದೂರು ಪಾಲಿಕೆ ಅಧಿಕಾರಿಗಳ ಮೇಲಿದೆ. ಈ ಸಂಗತಿಯನ್ನು ಪಾಲಿಕೆಯ ಆಯುಕ್ತರು, ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕಿದೆಯಲ್ಲದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯನ್ನು ಎಷ್ಟರ ಮಟ್ಟಿಗೆ ನಂಬಬೇಕು ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ ಎದುರಾಗಲಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

