ಸಾಂಸ್ಕೃತಿಕ ಜನೋತ್ಸವ ಧಾರವಾಡ ಉತ್ಸವ
ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 13
ನಾಡಿನ ಶ್ರೀಮಂತ ಕಲಾಪರಂಪರೆಯನ್ನು ಅನಾವರಣಗೊಳಿಸುವ, ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಜನೋತ್ಸವವೆಂದೇ ಬಿಂಬಿತವಾಗಿರುವ ಮೂರು ದಿನಗಳ ಧಾರವಾಡ ಉತ್ಸವಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ದೊರೆತಿದೆ.
ಬರಗಾಲದ ನಿಮಿತ್ತ ಕಳೆದ ವರ್ಷ ಧಾರವಾಡ ಉತ್ಸವ ಆಚರಣೆಯಾಗದಿದ್ದರೂ ಪ್ರಸಕ್ತ ವರ್ಷದ ಈ ಉತ್ಸವ ಎರಡು ವರ್ಷಗಳ ಸಂತಸವನ್ನು ಧಾರವಾಡಿಗರಿಗೆ ಒಟ್ಟೊಟ್ಟಿಗೆ ತಂದಿದೆ. ಸ್ಥಳೀಯ, ರಾಷ್ಟ್ರೀಯ, ಅಂತಾರಾಷ್ಟೀಯ ನೂರಾರು ಕಲಾವಿದರ ಸಹಭಾಗಿತ್ವದ ಈ ಉತ್ಸವಕ್ಕೆ ಕರ್ನಾಟಕ ಕಲಾ ಕಾಲೇಜು ಆವರಣದಲ್ಲಿ ನಿರ್ಮಿಸಲಾದ ಮುಖ್ಯ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಅದ್ಧೂರಿ ಚಾಲನೆ ನೀಡಿದರು.
ರಥ ಎಳೆಯಿರಿ: ನಂತರ ಮಾತನಾಡಿದ ಅವರು, ಕನ್ನಡಿಗರೆಲ್ಲರೂ ಅಭಿವೃದ್ಧಿಯ ರಥ ಎಳೆದು ರಾಜ್ಯದ ಕೀರ್ತಿ ದೇಶದೆಲ್ಲೆಡೆ ಪಸರಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪೈಕಿ ಧಾರವಾಡದ ಕೊಡುಗೆ ಅಪಾರ. ತನ್ನದೇ ಆದ ವೈಶಿಷ್ಟ್ಯ, ವೈಭವ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುತ್ತು-ರತ್ನಗಳ ಆಗರ ಧಾರವಾಡ. ಹೋರಾಟದ ಇತಿಹಾಸದಲ್ಲೂ ಪ್ರಮುಖ ಸ್ಥಾನ ಪಡೆದುಕೊಂಡ ಈ ಜಿಲ್ಲೆ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಅಪಾರ ಜ್ಞಾನದ ಸಂಪತ್ತು ಹೊಂದಿದೆ. ಮುಂದಿನ ಪೀಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನಾವೆಲ್ಲರೂ ಇಂತಹ ಉತ್ಸವಗಳ ಮೂಲಕ ಶ್ರಮ ವಹಿಸುವುದು ಅಗತ್ಯವಿದೆ ಎಂದರು.
ದರ್ಶನಕ್ಕೆ ಬಂದೆ: ವಿಶೇಷ ಆಹ್ವಾನಿತರಾಗಿದ್ದ ಭಾರತಿ ವಿಷ್ಣುವರ್ಧನ್, ಧಾರವಾಡ ಜನತೆಯ ದರ್ಶನಕ್ಕೆಂದು ಈ ಉತ್ಸವಕ್ಕೆ ಬಂದಿದ್ದೇನೆ. ಸಾವಿರಾರು ಜನರನ್ನು ನೋಡಿ ತುಂಬ ಸಂತಸವಾಗಿದೆ ಎಂದರು.
ಯಾವ ಆಶ್ರಯವಿಲ್ಲದೇ: ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿಯೇ ಧಾರವಾಡದಂತಹ ನಗರ ಇನ್ನೊಂದಿಲ್ಲ. ಮೈಸೂರು ದಸರೆಗೆ ರಾಜಾಶ್ರಯವಿದ್ದು, ಯಾವ ಆಶ್ರಯವಿಲ್ಲದೇ ಜನಾಶ್ರಯದಿಂದ ಇವತ್ತು ಏಕಕಾಲಕ್ಕೆ 20 ವೇದಿಕೆಗಳಲ್ಲಿ ಧಾರವಾಡ ಉತ್ಸವ ಸಂಭ್ರಮಿಸುತ್ತಿರುವುದು ವಿಶೇಷವೇ ಸರಿ ಎಂದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಬಸವರಾಜ ಹೊರಟ್ಟಿ, ಸಂಸದ ಪ್ರಹ್ಲಾದ ಜೋಶಿ, ನಾಡೋಜ ಚೆನ್ನವೀರ ಕಣವಿ, ಡಾ.ಗಿರಡ್ಡಿ ಗೋವಿಂದರಾಜ, ಜಿಲ್ಲಾಧಿಕಾರಿ ಸಮೀರ ಶುಕ್ಲ ಮತ್ತಿತರರು ಉದ್ಘಾಟನೆ ಸಂದರ್ಭದಲ್ಲಿ ಇದ್ದರು.
ಸಾಹಿತಿಗಳ ಕೊರತೆ: ಇದಕ್ಕೂ ಮುಂಚೆ ಮಧ್ಯಾಹ್ನ 3ರ ಸುಮಾರಿಗೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವದ ಮೆರವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಗಿದ ಮೆರವಣಿಗೆ ಉತ್ಸವದ ಸಂಭ್ರಮವನ್ನು ಎಲ್ಲರಿಗೂ ಸಾರಿತು. ಅನೆ, ಒಂಟೆಗಳು, ಕುದುರೆ ಹಾಗೂ ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಮತ್ತಷ್ಟು ಕಳೆ ತಂದವು. ಆದರೆ, ಸಾಹಿತಿಯಗಳ ಬೀಡು ಧಾರವಾಡದ ಉತ್ಸವದ ಈ ಮೆರವಣಿಗೆಯಲ್ಲಿ ಒಬ್ಬ ಸಾಹಿತಿಯೂ ಕಾಣಲಿಲ್ಲ ಎಂಬ ಕೊರಗು ಮಾತ್ರ ಕಾಡುತ್ತಿತ್ತು.
ಧಾರವಾಡದ ವಿದ್ಯಾವರ್ಧಕ ಸಂಘ, ರಂಗಾಯಣ, ಸೃಜನಾ ರಂಗಮಂದಿರ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಮೊದಲ ದಿನ ಶುಕ್ರವಾರ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮುಖ್ಯ ವೇದಿಕೆಯಲ್ಲಿ ಉದ್ಘಾಟನೆ ನಂತರ ಗುರುಕಿರಣ ಅವರ ರಸಮಂಜರಿ ಇದ್ದ ಕಾರಣ ಉಳಿದ ವೇದಿಕೆಗಳಲ್ಲಿ ಜನರ ಕೊರತೆ ಸಾಮಾನ್ಯವಾಗಿತ್ತು. ಮುಖ್ಯ ವೇದಿಕೆ ಸಾವಿರಾರು ಜನರಿಂದ ತುಂಬಿ ತುಳುಕಿತು. 15 ಆಹಾರದ ಮಳಿಗೆ ಹಾಗೂ 15 ಪ್ರದರ್ಶನದ ಮಳಿಗೆಗಳು ಜನರ ಗಮನ ಸೆಳೆದವು.
ಚಳಿಯಲ್ಲೂ ಉತ್ಸಾಹ...
ಕಳೆದ ವಾರದಿಂದ ಧಾರವಾಡದಲ್ಲಿ 10 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಸಂಜೆಯಾದರೆ ಸಾಕು ಮೈಕೊರೆಯುವ ಚಳಿಯ ಅನುಭವ. ಧಾರವಾಡ ಉತ್ಸವದ ಎಲ್ಲ ವೇದಿಕೆಗಳಲ್ಲಿನ ಎಲ್ಲ ಕಾರ್ಯಕ್ರಮಗಳು ಸಂಜೆ 6ರ ರಿಂದಲೇ ಚಳಿಯ ಮಧ್ಯೆ ಆರಂಭವಾದರೂ ಉತ್ಸವದ ಉತ್ಸಾಹಕ್ಕೆ ಮಾತ್ರ ಕೊರತೆ ಇರಲಿಲ್ಲ. ಮೊದಲ ದಿನ ಮುಖ್ಯ ವೇದಿಕೆಯಲ್ಲಿ ರಾತ್ರಿ 11ರ ವರೆಗೆ ಗುರುಕಿರಣ ಹಾಗೂ ಜಾವೇದ ಅಲಿ ತಂಡದ ರಸಮಂಜರಿ ಕಾರ್ಯಕ್ರಮವನ್ನು ಧಾರವಾಡದ ಮಂದಿ ಎಂತಹ ಕೊರೆಯುವ ಚಳಿಯಲ್ಲಿಯೂ ತಪ್ಪಿಸಿಕೊಳ್ಳಲಿಲ್ಲ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

