ಉಸುಕಿನ ಬರ ಕಾರ್ಮಿಕರ ಗಂಜಿಗೆ ಬರೆ!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 16
ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ಏಳೆಂಟು ತಿಂಗಳಿಂದ ಕಂಡು ಬರುತ್ತಿರುವ ಉಸುಕಿನ 'ಬರ' ಕೂಲಿ-ಕಾರ್ಮಿಕರ ಒಪ್ಪಿತ್ತಿನ ಗಂಜಿಗೂ 'ಬರೆ' ಎಳೆದಿದೆ!
ರಿಯಲ್ ಎಸ್ಟೇಟ್ ಉದ್ಯಮದ ಮೇಲೆಯೂ ಇದರ ಪ್ರಭಾವ ಬೀರಿದ್ದು, ಅಪಾರ್ಟಮೆಂಟ್ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಮಾರಾಟ ಮಾಡುವ ಬಹುತೇಕ ಮಾಲೀಕರುಗಳು ಉಸುಕಿನಿಂದ ಬರದಿಂದಾಗಿ ಕಾಮಗಾರಿ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಮಾಲೀಕರುಗಳ ಮೇಲೆ ಈ ಬರ ಅಷ್ಟೊಂದು ಪ್ರಭಾವ ಬೀರಲ್ಲವಾದರೂ ಇದೇ ಕಸುಬನ್ನು ನಂಬಿಕೊಂಡು ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಒಪ್ಪತ್ತಿನ ಗಂಜಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿಗೆ ಸಿಲುಕಿವೆ.
ಕೆಲಸಕ್ಕಾಗಿ ಅಲೆದಾಟ: ಕಟ್ಟಡ ನಿರ್ಮಾಣ ಕಾರ್ಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಬಡ ಕೂಲಿ -ಕಾರ್ಮಿಕರು, ರಿಯಲ್ ಎಸ್ಟೇಟ್ ಮಾಲೀಕರು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿದ್ದರ ಪರಿಣಾಮ ಕೆಲಸಕ್ಕಾಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಲೆದಾಡುವಂತಾಗಿದೆ ಎಂದು ಗೌಂಡಿ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿರುವ ಬಸಪ್ಪ ತಳವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಆಂತಕ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕಾರ್ಮಿಕರು ದೂರದ ಊರುಗಳಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇದೀಗ ಮನೆಗೆಲಸ ಸಿಕ್ಕರೂ ಸಾಕು ಎಂಬ ತೀರ್ಮಾನಕ್ಕೆ ಬಂದು ನಿತ್ಯವೂ ಒಂದಿಲ್ಲೊಂದು ಮನೆಗಳಿಗೆ ತೆರಳಿ ಕೆಲಸ ನೀಡುವಂತೆ ಅಂಗಲಾಚುವಂತಾಗಿದೆ.
ಬಾರ್ ಬೆಂಡಿಂಗ್: ಕಟ್ಟಡ ಕೆಲಸದಲ್ಲಿ ಅತಿ ಹೆಚ್ಚು ದೈಹಿಕ ಶ್ರಮವಹಿಸಿ ಕೆಲಸ ನಿರ್ವಹಿಸುವವರು ಬಾರ್ ಬೆಡ್ಡಿಂಗ್ ಕೆಲಸಗಾರರು. ವಾರದಲ್ಲಿ 1-2 ದಿನ ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ ಬಾರ್ ಬೆಂಡಿಂಗ್ ಕೆಲಸಗಾರರು ಖಾಲಿ ಅಡ್ಡಾಡುವಂತಾಗಿದೆ ಎಂದು ರಫೀಕ್ ಬಾಷಾ ತಿಳಿಸಿದ್ದಾರೆ.
ಕಟ್ಟದ ಒಂದು ಹಂತದ ಕಾಮಗಾರಿ ಪೂರ್ಣಗೊಂಡ ನಂತರವೇ ಬಾರ್ ಬೆಂಡಿಂಗ್ ಕೆಲಸ ಆರಂಭವಾಗುತ್ತದೆ. ಆದರೆ, ಉಸುಕಿನ ಕೊರತೆಯಿಂದಾಗಿ ಬಹುತೇಕ ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆ ಆಧಾರದ ಮೇಲೆ ಮನೆ ನಿರ್ಮಿಸಿಕೊಡುವ ಮಾಲೀಕರಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದು, ಮನೆ ಕಟ್ಟಡ ಆರಂಭಕ್ಕೆ ಮುನ್ನ ಇದ್ದ ಉಸುಕಿನ ದರದಲ್ಲಿ ಇಂದು ನಾಲ್ಕಾರು ಪಟ್ಟು ಹೆಚ್ಚಾಗಿದೆ. ಆದ್ದರಿಂದ ಗುತ್ತಿಗೆದಾರರು ಅನಿವಾರ್ಯವಾಗಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದೂ ಬಾಷಾ ಅಳಲು ತೋಡಿಕೊಂಡರು.
ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ಗಳೂ: ಹೊಸ ಕಟ್ಟಡಗಳ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುವವರಿಗೂ ಉಸುಕಿನ ಬರ ಬರೆ ನೀಡಿದೆ. ನಗರದಲ್ಲೇ ಇರುವ ಅನೇಕ ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ಗಳು ಕೆಲಸಕ್ಕಾಗಿ ಅಲೆಯುವಂತಾಗಿದೆ. ಇನ್ನೂ ಎರಡ್ಮೂರು ತಿಂಗಳು ಉಸುಕಿನ ಅಭಾವ ಇದೇ ರೀತಿಯಾಗಿ ಮುಂದುವರೆದಲ್ಲಿ ಕಾಂಟ್ರ್ಯಾಕ್ಟರ್ಗಳ ಬದುಕು ಮೂರಾಬಟ್ಟೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹನುಮಂತ ಮೇಸ್ತ್ರಿ ತಿಳಿಸಿದ್ದಾರೆ.
ಅಕ್ಕಪಕ್ಕದಿಂದ: ಕಟ್ಟಡ ಕಾಮಗಾರಿ ಸೇರಿದಂತೆ ಮತ್ತಿತರ ಕೆಲಸಗಳನ್ನು ಆರಿಸಿಕೊಂಡು ನಿತ್ಯವೂ ನೂರಾರು ರುಪಾಯಿ ಸಂಪಾದಿಸಿ ಆ ದಿನದ ಗಂಜಿ ಕಾಯಿಸಿಕೊಳ್ಳುವ ಸಾವಿರಾರು ಯುವಕರು ಹಾಗೂ ಮಹಿಳೆಯರು ನಿತ್ಯವೂ ನಗರಕ್ಕೆ ಆಗಮಿಸುತ್ತಾರೆ.
ಆದರೆ, ವಾಣಿಜ್ಯನಗರಿಯಲ್ಲಿ ಬಿಲ್ಡಿಂಗ್ ಕಾಮಗಾರಿಗೆ ಗ್ರಹಣ ಹಿಡಿದ ಪರಿಣಾಮ ನಿತ್ಯವೂ ಕುಂದಗೋಳ, ಅದರಗುಂಚಿ, ನೂಲ್ವಿ, ಛಬ್ಬಿ, ತಡಸ ಸೇರಿದಂತೆ ಮತ್ತಿತರ ಕಡೆಗಳಿಂದ ಬರುವ ಕೂಲಿ ಕಾರ್ಮಿಕರು ಮನೆಯಿಂದ ತಂದ ಬುತ್ತಿ ಗಂಟನ್ನು ತಿಂದು ಸಾಲಸೋಲ ಮಾಡಿ ಮನೆಗೆ ಮರಳುವಂತಾಗಿದೆ ಎಂದು ಅನೇಕ ಕಾರ್ಮಿಕರು ತಿಳಿಸಿದ್ದಾರೆ.
ಆಯಾ ಡೆವಲಪರ್ಸ್ ಹಾಗೂ ಗುತ್ತಿಗೆದಾರರ ಬಳಿ ಕಾಯಂ ಆಗಿ ಕೆಲಸ ನಿರ್ವಹಿಸುವ ಕಾರ್ಮಿಕರಂತೂ, ಮಾಲೀಕರುಗಳ ಬಳಿ ಈಗಾಗಲೇ ಸಾಕಷ್ಟು ಹಣ ಮುಂಗಡವಾಗಿ ಪಡೆದಿದ್ದಾರೆ. ಕಟ್ಟಡ ಕಾಮಗಾರಿ ಆರಂಭಗೊಂಡರೇ ಆದಷ್ಟು ಬೇಗನೆ ಕೆಲಸ ನಿರ್ವಹಿಸಿ ಮಾಡಿದ ಸಾಲ ಬಗೆಹರಿಸಿದರಾಯ್ತು ಎಂಬ ಆಶಾ ಭಾವನೆಯಲ್ಲೇ ದಿನ ದೂಡುತ್ತಿದ್ದಾರೆ.
ಕಾಳಸಂತೆಯಲ್ಲಿ: ಅವಳಿನಗರಕ್ಕೆ ಗದಗ ಜಿಲ್ಲೆಯ ಹೊಳೆ ಇಟಗಿ, ಮುಂಡರಗಿ ಸೇರಿದಂತೆ ಮತ್ತಿತರ ಕಡೆಗಳಿಂದ ಹಾಗೂ ಹಾವೇರಿ ಜಿಲ್ಲೆಯ ಕೆಲ ಪ್ರದೇಶಗಳಿಂದ ಉಸುಕು ಪೂರೈಕೆಯಾಗುತ್ತದೆ. ಆದರೆ, ಇಲ್ಲಿಂದ ನಿತ್ಯವೂ ಸಾಕಷ್ಟು ಪ್ರಮಾಣದಲ್ಲಿ ಉಸುಕು ಪೂರೈಕೆಯಾಗುತ್ತಿದ್ದರೂ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಸದ್ಯ ಉಸುಕಿನ ಲಾರಿಯೊಂದಕ್ಕೆ 20 ರಿಂದ 25 ಸಾವಿರ ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯರಂತೂ ಮನೆ ಕಟ್ಟುವ ಕೆಲಸದಿಂದ ಈಗಾಗಲೇ ಸಾಕಷ್ಟು ದೂರು ಸರಿದಿದ್ದಾರೆ. ತೀರಾ ಅವಶ್ಯಕವಿರುವ ಜನರು ಕಾಳಸಂತೆಯಿಂದ ಅಷ್ಟೊ-ಇಷ್ಟೊ ಉಸುಕು ಖರೀದಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂರು ಮಹಡಿಯ ಮನೆ ಕಟ್ಟಬೇಕೆಂಬ ಕನಸು ಹೊಂದಿರುವವರು ಗಗನಕ್ಕೇರಿರುವ ಉಸುಕಿನ ಬೆಲೆಯಿಂದಾಗಿ ಒಂದೇ ಮಹಡಿ ಮನೆ ಸಾಕು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.
ಉಸುಕು ಸಾಗಾಟದ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆಯೇನೋ ನಿಜ. ಆದರೆ, ಕಾಳಸಂತೆಯಲ್ಲಿ ಉಸುಕು ಮಾರಾಟವಾಗುತ್ತಿರುವುದನ್ನು ತಡೆಗಟ್ಟುವಲ್ಲಿ ಇಲಾಖೆ ವಿಫಲಗೊಂಡಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ಜಂಟಿಯಾಗಿ ಉಸುಕು ಕಾಳಸಂತೆಯಲ್ಲಿ ಮಾರಾಟವಾಗದಂತೆ ಜಾಗೃತಿವಹಿಸುವ ಮೂಲಕ ಸಾವಿರಾರು ಕುಟುಂಬಗಳ ಒಪ್ಪಿನ ಗಂಜಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಬೇಕಿದೆ.
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

