ಧಾರವಾಡ

ಸಂಕ್ಷಿಪ್ತ ಸುದ್ದಿ

Published On :

ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ
ನವಲಗುಂದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. 19ರಿಂದ ತಹಸೀಲ್ದಾರ್ ಕಾರ್ಯಾಲಯದ ಎದುರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಹೋರಾಟ ಸಮಿತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಮಲಪ್ರಭಾ ಕಾಲುವೆಗಳ ಅಸಮರ್ಪಕ ನಿರ್ವಹಣೆ, ಈ ಕುರಿತು ತನಿಖೆ, ರೈತರ ಜಮೀನುಗಳಿಗೆ ಸಮರ್ಪಕ ರಸ್ತೆ ನಿರ್ಮಾಣ, ಕನಕ ಬಿಟಿ ಹತ್ತಿ ಬೀಜದಿಂದ ರೈತರಿಗಾದ ಹಾನಿ ಭರಿಸಬೇಕು ಮತ್ತು ರೈತರಿಗೆ ಮೋಸ ಮಾಡಿದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಉಳ್ಳಾಗಡ್ಡಿ, ಗೋವಿನಜೋಳ, ಹತ್ತಿ ಹಾಗೂ ಕಡಲೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕು. ಮಲಪ್ರಭಾ ಬಲದಂಡೆ ಕಾಲುವೆಯ 18ನೇ ಹಂಚಿಕೆಯ ಕಾಲುವೆ ಪುನರ್ ನಿರ್ಮಾಣದ ಕಳಪೆ ಕಾಮಗಾರಿಯನ್ನು ಪರಿಶೀಲಿಸಬೇಕು ಹಾಗೂ ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ರೈತ ಧುರೀಣರಾದ ಎಚ್.ಕೆ. ಲಕ್ಕಣ್ಣವರ, ಕೊಟ್ರೇಶ ಶಿರೂರ, ಮಲ್ಲಿಕಾರ್ಜುನ ನವಲಗುಂದ, ಪರಮೇಶ್ವರಪ್ಪ ಹೊಸಬಾಳ, ಪರಪ್ಪ ತೆಗ್ಗಿನಮನಿ ಹಾಗೂ ಸಹದೇವಪ್ಪ ಶಿರೋಳ ಮುಂತಾದವರು ಒತ್ತಾಯಿಸಿದ್ದಾರೆ.
ಇಂದು ತಹಸೀಲ್ದಾರ್ ಮನವಿ: ನವಲಗುಂದ ರೈತ ಸೇನಾ ಕರ್ನಾಟಕ ಸಂಘಟನೆಯಿಂದ ಮಹದಾಯಿ ನದಿ ಜೋಡಣೆಗಾಗಿ ಒತ್ತಾಯಿಸಿ ಡಿ. 19ರಂದು ಮನವಿ ಸಲ್ಲಿಸಲಾಗುವುದು. ಅಂದು ಬೆಳಗ್ಗೆ 11.30ಕ್ಕೆ ಇಲ್ಲಿಯ ಲಿಂಗರಾಜ ಸರ್ಕಲ್‌ನಿಂದ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಾಲೂಕು ಅಧ್ಯಕ್ಷ ಸಿ.ಎಸ್. ನವಲಗುಂದ ತಿಳಿಸಿದ್ದಾರೆ. ಈ ಮೆರವಣಿಗೆಯಲ್ಲಿ ಈ ಭಾಗದ ಮಠಾಧೀಶರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಸ್ಸಾರ್ ಬೆಂಬಲ: ಮಹದಾಯಿ ಹಾಗೂ ಮಲಪ್ರಭಾ ನದಿ ಜೋಡಣೆಗೆ ಒತ್ತಾಯಿಸಿ ಸವದತ್ತಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ರೈತ ಸೇನಾ ಕರ್ನಾಟಕ ಸಂಘಟನೆಗೆ ನವಲಗುಂದ ಬಿಎಸ್‌ಆರ್ ಘಟಕ ಬೆಂಬಲ ಸೂಚಿಸಿದೆ ಎಂದು ಧುರೀಣರಾದ ಶಂಭು ಶಿದ್ರಾಮಶೆಟ್ಟರ್ ತಿಳಿಸಿದ್ದಾರೆ.  ಅದೇ ರೀತಿ ಮಲಪ್ರಭಾ ಕಾಲುವೆಗೆ ನೀರು ಹರಿಸುವುದನ್ನು ಡಿ. 31ಕ್ಕೆ ನಿಲ್ಲಿಸುವುದಾಗಿ ನೀರಾವರಿ ಇಲಾಖೆ ಗಡವು ಕೊಟ್ಟಿದ್ದು, ತೇವಾಂಶದ ಕೊರತೆ ಉಂಟಾಗಿ ಬೆಳೆ ನಾಶವಾಗದುವ ಭೀತಿ ಇದೆ. ಹೀಗಾಗಿ, ಜ. 21ರ ವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಶಂಭು ಶಿದ್ರಾಮಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣಾಧಿಕಾರಿಗಳಿಗೆ ಸಕಾಲ ಸೇವೆ ತರಬೇತಿ
ಧಾರವಾಡ: ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಕಾಲ ಯೋಜನೆ ಕುರಿತು ಡಿ. 21 ಹಾಗೂ 22ರಂದು ಜಿಪಂ ಸಭಾ ಭವನದಲ್ಲಿ ಎರಡು ದಿನಗಳ ತರಬೇತಿ ಆಯೋಜಿಸಲಾಗಿದೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಷಯ ತಜ್ಞರು ತರಬೇತಿ ನೀಡಲಿದ್ದು, ಜಿಲ್ಲಾ ಆಡಳಿತ ತರಬೇತಿ ಸಂಸ್ಥೆ ತರಬೇತಿಯನ್ನು ಯೋಜಿಸಿದೆ. ಡಿ. 21ರಂದು ಬೆಳಗ್ಗೆ 10ರಿಂದ ತರಬೇತಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಂ.ಎಂ.ಅಣ್ಣಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಿನ್ನಿಸ್ ವೀರನ ಸಾಹಸ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 18
ಗಿನ್ನಿಸ್ ದಾಖಲೆ ವೀರ ಗೌತಮ್ ವರ್ಮಾ ಅವರು ಡಿ. 20ರಂದು ಸಂಜೆ 4ಕ್ಕೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ವಿವಿಧ ಸಾಹಸ ಪ್ರದರ್ಶಿಸಲಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗೌತಮ್ ವರ್ಮಾ, 51 ತೆಂಗಿನಕಾಯಿಗಳ ಸಿಪ್ಪೆಯನ್ನು 38 ನಿಮಿಷದಲ್ಲಿ ಸುಲಿಯುವುದು ಹಾಗೂ ಮತ್ತಿತರ ಸಾಧನೆಗಳ ಮೂಲಕ ತಾವೂ ವಿವಿಧ ದಾಖಲೆ ರಚಿಸಿದ್ದಾಗಿ ಹೇಳಿದರು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಆದಕಾರಣ ಸಾರ್ವಜನಿಕರು ನೆಹರು ಮೈದಾನಕ್ಕೆ ಆಗಮಿಸಿ, ತಾವು ಪ್ರದರ್ಶಿಸುವ ಸಾಹಸಗಳನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಕೋರಿದರು.
25ರಂದು ಹಳೇಹುಬ್ಬಳ್ಳಿಯಲ್ಲಿ ರಜಪೂತ ಸಮಾಜದ ವಧು-ವರರ ಸಮ್ಮೇಳನ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಅರವಿಂದನಗರದ ರಜಪೂತ ಸಮಾಜದ ಸಭಾಭವನದಲ್ಲಿ ನಗರದ ರಜಪೂತ ಸಮಾಜ ವತಿಯಿಂದ ಡಿ. 25ರಂದು ಬೆಳಗ್ಗೆ 10ಕ್ಕೆ ವಧು-ವರರ ಸಮ್ಮೇಳನ ಆಯೋಜಿಸಲಾಗಿದೆ. ಆಸಕ್ತರು ವಧು-ವರರ ಪರಿಚಯ ಪತ್ರವನ್ನು ಸೂಕ್ತ ಮಾಹಿತಿಯೊಂದಿಗೆ ಸಲ್ಲಿಸಬೇಕು. ಮಾಹಿತಿಗೆ ಸಮಾಜದ ಅಧ್ಯಕ್ಷ ಎ.ಆರ್. ರಜಪೂತ (9448114014) ಅಥವಾ ಕಾರ್ಯದರ್ಶಿ ಗೋಪಾಲಸಿಂಗ್ ಹಜಾರೆ (9343542729) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಮರಳು ವ್ಯವಸ್ಥೆ ಕಲ್ಪಿಸಿ: ಪ್ರತಿಭಟನೆ
ಹಿರೇಕೆರೂರು:  ಲೋಕೋಪಯೋಗಿ ಗುತ್ತಿಗೆದಾರರ ಸಂಘ ಮತ್ತು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮರಳು ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಎನ್. ಗಂಗೋಳ ಮಾತನಾಡಿ, ತಾಲೂಕಿನ ಗಡಿಭಾಗದಲ್ಲಿ ಹರಿದು ಹೋಗಿರುವ ತುಂಗಭದ್ರಾ ನದಿಯಿಂದ ಮಾತ್ರ ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಮರಳು ಲಭ್ಯವಾಗುತ್ತಿದೆ. ಮರಳು ತರಲು ಸಾಧ್ಯವಾಗದೆ ಕಳೆದ 6 ತಿಂಗಳಿನಿಂದ ಗುತ್ತಿಗೆದಾರರು, ಕಟ್ಟಡಕಾರ್ಮಿಕರು ಬಡ ಜನತೆ ಮತ್ತು ರೈತಾಪಿ ವರ್ಗದವರಿಗೆ ಮರಳು ಸಿಗದೆ ಕಟ್ಟಗಳ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಎಲ್ಲರಿಗೂ ತೀವ್ರ ತೊಂದರೆಯಾಗಿದೆ. ಮರಳು ಸಿಗದೆ ಪರಿಸ್ಥಿತಿ ಈ ರೀತಿ ಇದ್ದರೂ ಸಹ ಸರ್ಕಾರ ಹೊಸದಾಗಿ 30 ಸಿಮೆಂಟ್ ಕಾರ್ಖಾನೆಗಳಿಗೆ ಅನುಮತಿ ನೀಡಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆದಾರರು ಮನೆ ಕಟ್ಟುವಂಥವರಿಗೆ ಮತ್ತು ದೇವಸ್ಥಾನದ ಕಟ್ಟಡಕಟ್ಟುವ ಕೆಲಸಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಡ ಕೂಲಿ ಕಾರ್ಮಿಕರು  ದೈನಂದಿನ ಜೀವನ ನಡೆಸುವುದು ದುಸ್ತರವಾಗಿದೆ. ತಕ್ಷಣ ಮರಳು ನೀತಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.  ಮನವಿಯನ್ನು ತಹಸೀಲ್ದಾರ್ ಟಿ.ಬಿ. ಹೊಸೂರ ಅವರಿಗೆ ಸಲ್ಲಿಸಿದರು. ಗುತ್ತಿಗೆದಾರರಾದ ಸಂಘದ ಕೋಶಾಧ್ಯಕ್ಷ ಪ್ರಕಾಶ ಜಿ.ಪಿ, ಪ್ರಥಮ ದರ್ಜೆ ಗುತ್ತಿಗೆದಾರ ಎಲ್.ಎಸ್. ಚಪ್ಪರದಳ್ಳಿ ಮಾತನಾಡಿದರು. ಗುತ್ತಿಗೆದಾರರಾದ ವೆಂಕಟೇಶ ಉಪ್ಪಾರ, ರವಿ ಸಿದ್ದಪ್ಪಗೌಡ್ರ, ಎಚ್.ಮೌನೇಶ, ಎಂ.ಬಿ. ಬಲಮುರಿ, ರವಿ ಪುಟ್ಟಪ್ಪಗೌಡ್ರ, ರವಿ ಚಿಂದಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.