ಧಾರವಾಡ

ಹದಗೆಟ್ಟ ರಸ್ತೆ: ಮಾರ್ಚ್‌ನೊಳಗೆ ದುರಸ್ತಿ?

Published On :

ಹುಬ್ಬಳ್ಳಿ ರೇಲ್ವೆ ಸ್ಟೇಶನ್ ರಸ್ತೆಯಿಂದ ಸಿಬಿಟಿ ವರೆಗಿನ ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ನಿರ್ಮಾಣ ನಿಧಿಯಿಂದ ರು. 8 ಕೋಟಿ ಬಿಡುಗಡೆಯಾಗಿದೆ. ಕರ್ನಾಟಕ ನಗರ ಮೂಲ ಸೌಲಭ್ಯ ಮತ್ತು ಹಣಕಾಸು ಇಲಾಖೆ ರಸ್ತೆ ದುರಸ್ತಿಗಾಗಿ ಮಹಾನಗರ ಪಾಲಿಕೆಗೆ ರು. 10 ಕೋಟಿ ನೀಡಲಿದ್ದು, ಇದರಲ್ಲಿ ರು. 3 ಕೋಟಿಯನ್ನು ಈಗಾಗಲೇ ನೀಡಿದೆ. ಹದಗೆಟ್ಟ ರಸ್ತೆ ಪರಿಶೀಲನೆ ನಂತರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಸಂಸದ ಪ್ರಹ್ಲಾದ ಜೋಶಿ, ರಸ್ತೆ ದುರಸ್ತಿಗಾಗಿ ಮುಂದಿನ 7 ದಿನಗಳೊಳಗೆ ತುರ್ತು ಟೆಂಡರ್ ಕರೆಯುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾಗಿ ತಿಳಿಸಿದರು. ಒಳ ಚರಂಡಿ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದವರೇ ರಸ್ತೆ ಮರು ನಿರ್ಮಿಸಬೇಕೆಂಬ ಷರತ್ತು ಇತ್ತು. ರಸ್ತೆ ನಿರ್ಮಾಣದ ಅನುಭವ ಕೊರತೆ ಗುತ್ತಿಗೆದಾರರಿಗೆ ಇದ್ದಿದ್ದರಿಂದ ರಸ್ತೆ ನಿರ್ಮಾಣಕ್ಕೆ ಬೇಕಾದ ಹಣವನ್ನು ಅವರು ಕರ್ನಾಟಕ ನಗರ ಮೂಲ ಸೌಲಭ್ಯ ಮತ್ತು ಹಣಕಾಸು ಇಲಾಖೆಗೆ ನೀಡಿದ್ದಾರೆ. ಈ ಹಣವನ್ನು ಇಲಾಖೆ ಹಂತಹಂತವಾಗಿ ಪಾಲಿಕೆಗೆ ಹಸ್ತಾಂತರಿಸಲಿದೆ ಎಂದರು. 3-4 ತಿಂಗ ಳಿಂದ ಹುಬ್ಬಳ್ಳಿಯಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿದೆ. ಈಗಂತೂ ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಹಿಂದುಳಿದಿವೆ. ಈ ಕುರಿತು ತಾವು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ, ತ್ವರಿತ ಕ್ರಮಕ್ಕೆ ಸೂಚಿಸುವುದಾಗಿ ಸಂಸದ ಜೋಶಿ ತಿಳಿಸಿದರು. ರಸ್ತೆ ದುರಸ್ತಿಗೊಳಿಸಲು ಅಧಿಕಾರಿಗಳು ಇನ್ನೂ ವಿಳಂಬ ಮಾಡಿದಲ್ಲಿ ಬಿಜೆಪಿ ಸಾರ್ವಜನಿಕರೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ: ಹದಗೆಟ್ಟ ರಸ್ತೆಯಿಂದ ಏಳುತ್ತಿರುವ ಧೂಳಿನಿಂದಾಗಿ ವ್ಯಾಪಾರ ಕುಸಿಯುತ್ತಿದೆ... ರಸ್ತೆ ಅಗೆದು ಆರು ತಿಂಗಳಾದರೂ ದುರಸ್ತಿಗೊಳಿಸಿಲ್ಲ... ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಮಾತ್ರ ಶೂನ್ಯ... ಬರೀ ಭರವಸೆ ನೀಡುತ್ತಿರುವ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ...
ಒಳಚರಂಡಿ ರಸ್ತೆ ಕಾಮಗಾರಿಗಾಗಿ ಅಗೆದ ರಸ್ತೆ ದುರಸ್ತಿಗೊಳಿಸದೆ ಇದ್ದಿದ್ದರಿಂದ ಆಗುತ್ತಿರುವ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಹಾಗೂ ಕರ್ನಾಟಕ ನಗರ ಮೂಲ ಸೌಲಭ್ಯ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ನಗರದ ಪ್ರಮುಖ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಸಾರ್ವಜನಿಕರು ನೀಡಿದ ದೂರಿನ ಸ್ಯಾಂಪಲ್‌ಗಳಿವು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಳೆದ ಆರು ತಿಂಗಳಲ್ಲಿ ಹಲವಾರು ಬಾರಿ ಹದಗೆಟ್ಟಿರುವ ರಸ್ತೆ ಕುರಿತು ಪರಿಶೀಲನೆ ನಡೆಸಿದ್ದರೂ ರಸ್ತೆಗಳು ದುರಸ್ತಿಯಾಗಿಲ್ಲ. ಧೂಳಿನ ವಾತಾವರಣದಲ್ಲಿ ದಿನ ಕಳೆಯುತ್ತಿರುವುದರಿಂದ ವ್ಯಾಪಾರಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳದಲ್ಲಿದ್ದ ನಾಗರಿಕರು ದೂರಿದರು.
ಸ್ಟೇಶನ್ ರಸ್ತೆ, ಮರಾಠಾ ಗಲ್ಲಿ, ಮ್ಯಾದರ ಓಣಿ, ಪೆಂಡಾರ ಗಲ್ಲಿ, ಕಮರಿಪೇಟ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಜೋಶಿ ಸಾರ್ವಜನಿಕರ ಆಕ್ರೋಶ ಎದುರಿಸಬೇಕಾಯಿತು.
ಸ್ಥಳದಲ್ಲಿದ್ದ ಕರ್ನಾಟಕ ನಗರ ಮೂಲ ಸೌಲಭ್ಯ ಮತ್ತು ಹಣಕಾಸು ಇಲಾಖೆ ಹುಬ್ಬಳ್ಳಿಯ ಕಾರ್ಯನಿರ್ವಾಹಕ ಅಭಿಯಂತರ ಎಲ್.ಆರ್. ನಾಯಕ ಹಾಗೂ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡ ಸಂಸದ ಜೋಶಿ, ಏಳುತ್ತಿರುವ ಧೂಳು ತಡೆಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಹದಗೆಟ್ಟಿರುವ ರಸ್ತೆ ನಿರ್ಮಾಣಕ್ಕೆ ತ್ವರಿತ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸುವಂತೆ ನಿರ್ದೇಶನ ನೀಡಿದ ಸಂಸದ ಜೋಶಿ, ಈ ಸಂದರ್ಭದಲ್ಲಿ ರಸ್ತೆಯ ಹದಗೆಟ್ಟ ಭಾಗವನ್ನಷ್ಟೇ ಡಾಂಬರೀಕರಣ ಮಾಡದೇ, ಪೂರ್ಣ ರಸ್ತೆಗೆ ಡಾಂಬರ್ ಹಾಕುವಂತೆ ಸೂಚನೆ ನೀಡಿದರು. ಹಗಲು-ರಾತ್ರಿ ಕೆಲಸ ಮಾಡಿ, ರಸ್ತೆ ದುರಸ್ತಿಗೊಳಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಆಯುಕ್ತ ರಮಣದೀಪ ಚೌಧರಿ ತಿಳಿಸಿದರು.
ಪಾಲಿಕೆ ಸದಸ್ಯರಾದ ಡಾ. ಪಾಂಡುರಂಗ ಪಾಟೀಲ, ಸುಧೀರ ಸರಾಫ, ಡಿ.ಕೆ. ಚೌಹಾಣ್, ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ರಂಗಾ ಬದ್ದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹದಗೆಟ್ಟ ರಸ್ತೆ ದುರಸ್ತಿ ಕಾಮಗಾರಿಯನ್ನು ಜನವರಿಯಲ್ಲಿ ಪ್ರಾರಂಭಿಸಿ ಮಾರ್ಚ್‌ನೊಳಗೆ ಪೂರ್ಣಗೊಳಿಸಲಾಗುವುದು. ಒಳಚರಂಡಿಗಾಗಿ ರಸ್ತೆ ಅಗೆದಿದ್ದು ಧೂಳು ಏಳಲು ಪ್ರಮುಖ ಕಾರಣ. ಇದರೊಂದಿಗೆ ರಾತ್ರಿ ಸಮಯದಲ್ಲಿ ಹೆಚ್ಚಿನ ಸರಕು ಇರುವ ಲಾರಿಗಳ ಸಂಚಾರವೂ ಮತ್ತೊಂದು ಕಾರಣ. ರಿಂಗ್‌ರೋಡ್ ನಿರ್ಮಾಣವಾದಲ್ಲಿ ಲಾರಿಗಳು ನಗರ ಪ್ರವೇಶಿಸದೆ ಸಂಚರಿಸಲು ಅನುಕೂಲವಾಗುತ್ತದೆ. ಇದರಿಂದ ಧೂಳು ನಿಯಂತ್ರಣಕ್ಕೆ ಬರುತ್ತದೆ. ನಗರದ ಮಧ್ಯದಲ್ಲಿ ಬಸ್ ನಿಲ್ದಾಣ ಇರುವುದೂ ಧೂಳು ಏಳಲು ಮತ್ತೊಂದು ಕಾರಣ. ಒಳ ಚರಂಡಿಗಾಗಿ ರಸ್ತೆ ಅಗೆದಿರುವುದು ಹಾಗೂ ರಸ್ತೆ ಮರುನಿರ್ಮಾಣದ ಕುರಿತು ಎಂಜಿನಿಯರ್‌ಗಳಿಂದ ತಕ್ಷಣ ವರದಿ ತರಿಸಿಕೊಳ್ಳಲಾಗುವುದು. ತಕ್ಷಣ ಟೆಂಡರ್ ಕರೆದು, ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು.
- ರಮಣದೀಪ ಚೌಧರಿ, ಆಯುಕ್ತರು, ಮಹಾನಗರ ಪಾಲಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.