ಧಾರವಾಡ

27ರಿಂದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 21
ಅಖಿಲ ಭಾರತ 11ನೇ ಶರಣ ಸಾಹಿತ್ಯ ಸಮ್ಮೇಳನವು ಧಾರವಾಡದ ಮುರುಘಾಮಠದಲ್ಲಿ ಡಿ. 27ರಿಂದ 29ರ ವರೆಗೆ ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಹಾಪೋಷಕ ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಈಗಾಗಲೇ ಮೈಸೂರು, ಬೆಂಗಳೂರು, ಹೊಸಪೇಟೆ, ಚಿಕ್ಕಮಗಳೂರು, ಬೆಳಗಾವಿ ರಾಯಚೂರು, ಮುಂಬೈ ಸೇರಿದಂತೆ 10 ಕಡೆ ಸಮ್ಮೇಳನಗಳು ನಡೆದಿದ್ದು, ಪ್ರಥಮ ಬಾರಿಗೆ ಧಾರವಾಡದಲ್ಲಿ 11ನೇ ಸಮ್ಮೇಳನಕ್ಕೆ ಸಿದ್ಧತೆ ನಡೆದಿದೆ. ಸಮ್ಮೇಳನಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ವಿದ್ವಾಂಸ ಡಾ. ಅಜಯಕುಮಾರ ಸಿಂಗ್ ಸರ್ವಾಧ್ಯಕ್ಷರಾಗಿದ್ದಾರೆ ಎಂದರು.
ಸಿದ್ದರಾಮಯ್ಯ ಉದ್ಘಾಟನೆ: ಡಿ. 27ರ ಬೆಳಗ್ಗೆ 11ಕ್ಕೆ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಶ್ರೀ, ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀ, ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುತ್ತಾರೆ. ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಪೂರ್ವಾಧ್ಯಕ್ಷ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಹಾಗೂ ಸರ್ವಾಧ್ಯಕ್ಷರಾದ ಡಾ. ಅಜಯಕುಮಾರ ಸಿಂಗ್ ಮಾತನಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುತ್ತಾರೆ. ನಾಡೋಜ ಚನ್ನವೀರ ಕಣವಿ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಸಚಿವರಾದ ಡಾ. ಶಾಮನೂರ ಶಿವಶಂಕರಪ್ಪ, ಉಮಾಶ್ರೀ ಭಾಗವಹಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
3 ದಿನಗಳಲ್ಲಿ ಭಕ್ತಿ ಚಳವಳಿ: ವ್ಯವಸ್ಥೆಗೆ ಪ್ರತಿಭಟನೆ, ಸಮಾಜ ಸೇವೆಯಲ್ಲಿ ಮಠಗಳು, ವಚನ ಸಾಹಿತ್ಯ-ಪರ್ಯಾಯ ಸಂಸ್ಕೃತಿ, ಪ್ರಜಾಪ್ರಭುತ್ವದಲ್ಲಿ ಧರ್ಮದ ಸ್ಥಾನ, ಮಹಿಳೆಯರು-ಸಾಮಾಜಿಕ ಸಮಾನತೆ ವಿಷಯಗಳಲ್ಲಿ ಚಿಂತನ ಗೋಷ್ಠಿ ಹಾಗೂ ಸಂವಾದಗಳು ನಡೆಯಲಿವೆ. ವಚನ ಸಂಗೀತ, ನೃತ್ಯ, ನಾಟಕ, ಪುಸ್ತಕ ಪ್ರದರ್ಶನ, ಮಾರಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ. 29ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯ ವಹಿಸುತ್ತಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮ್ಮೇಳನಕ್ಕೆ ಸಾವಿರಾರು ಪ್ರತಿನಿಧಿಗಳು ಆಗಮಿಸುತ್ತಾರೆ ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಚಂದ್ರಕಾಂತ ಬೆಲ್ಲದ, ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಮಾತನಾಡಿದರು. ಮೋಹನ ನಾಗಮ್ಮನವರ, ಎಂ.ವಿ. ವಡ್ಡಿನ, ನಾಗರಾಜ ಪಟ್ಟಣಶೆಟ್ಟಿ, ಪ್ರೊ. ಶಂಭು ಹೆಗಡಾಳ, ಪಿ.ಎಂ. ಮುದಿಗೌಡರ, ಸಿದ್ರಾಮ ನಡಕಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.