ಧಾರವಾಡ

ಕುಡಿಯಲು ನೀರಿಲ್ಲ, ದನಕರುಗಳಿಗೆ ಸರಿಯಾಗಿ ಮೇವಿಲ್ಲ

Published On :

ಧಾರವಾಡ: ಸಾಕಷ್ಟು ಖರ್ಚು ಮಾಡಿ ಬತ್ತ ಬಿತ್ತಿದ್ವಿ, ಮಳೆಯಾಗದೆ ಪೀಕು ಬರಲಿಲ್ಲ. ಸಕಾಲಕ್ಕೆ ಮಳೆ ಆಗದೆ ರೋಗ ಬಿದ್ದು ಸೋಯಾಬೀನ್ ಕೈಕೊಟ್ತು. ಸೋಯಾಬೀನ್ ಕಿತ್ತು ಗೋಂಜಾಳಾ ಹಾಕಿದ್ವಿ. ಇದೀಗ ಅದೂ ಸರಿಯಾಗಿ ಕಾಳಾಗಿಲ್ಲ. ಹೀಂಗಾದ್ರ ಹ್ಯಾಂಗ ವ್ಯವಸಾಯ ಮಾಡಬೇಕು?
ಜೊಳ್ಳು ಹಿಡಿದ ಸೋಯಾಬೀನ್ನ್ನು ಕಿತ್ತು ಒಂದೆಡೆ ಹಾಕಿದ್ದ ರಾಶಿಯ ಬಳಿ ನಿಂತು ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ರೈತ ರಾಜೇಸಾಬ, ಕೇಂದ್ರದ ಬರ ಪರಿಶೀಲನಾ ತಂಡದ ಎದುರು ಈ ರೀತಿ ತನ್ನ ಗೋಳು ತೋಡಿಕೊಂಡ. ಈ ರೈತನ ಬೆನ್ನಲ್ಲೇ ಗ್ರಾಮದ ಉಳಿದ ರೈತರು, ಕಳೆದ ಮುಂಗಾರು ಕೈಕೊಟ್ಟ ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ದೆಹಲಿಯಿಂದ ಆಗಮಿಸಿದ್ದ ಕೇಂದ್ರದ ಪಶುಸಂಗೋಪನಾ ಇಲಾಖೆ ನಿರ್ದೇಶಕ ಕಾಳಸಿಂಗ್, ಕೇಂದ್ರದ ಕುಡಿಯುವ ನೀರು ಮತ್ತು ಸ್ವಚ್ಛತೆ ಸಚಿವಾಲಯದ ಉಪ ಸಲಹೆಗಾರ ವಿಜಯಕುಮಾರ ಬಾಸ್ಲೆ ಹಾಗೂ ರಾಜ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸ್ವಾಮಿ ತಂಡ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಂಗಳವಾರ ಕಲಘಟಗಿ ತಾಲೂಕಿನ ಗಂಜಿಗಟ್ಟಿ, ಬೀರವಳ್ಳಿ, ಬಗಡಗೆರೆ ಹಾಗೂ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿ ಬರ ಸ್ಥಿತಿಯನ್ನು ಪರಿಶೀಲಿಸಿದರು.
ಮುಂಗಾರಿನಲ್ಲಿ ಶೇ.80ರಷ್ಟು ಬೆಳೆ ಹಾನಿಯಾಗಿದ್ದು, ನಾವೀಗ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಗಂಜಿಗಟ್ಟಿ ಹಾಗೂ ಬೀರವಳ್ಳಿ ರೈತರು ಕೇಂದ್ರದ ಬರ ಪರಿಶೀಲನಾ ತಂಡದ ಎದುರು ಹೇಳಿಕೊಂಡರು. ತದನಂತರ ಸಮೀಪದ ಗೊಲ್ಲನಕೆರೆಗೆ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲಿಸಿತು. ಕಲಘಟಗಿ ತಾಲೂಕಿನ ಸಮೀಕ್ಷೆ ಮುಗಿಸಿ ಮಧ್ಯಾಹ್ನದ ಊಟದ ನಂತರ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.