ಮರಳು: ಮುಷ್ಕರಕ್ಕೆ ಹೊರಟ್ಟಿ ಬೆಂಬಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 25
ಧಾರವಾಡ ಜಿಲ್ಲೆಗೆ ಮರಳು ಪರ್ಮಿಟ್ ನೀಡುವಂತೆ ಆಗ್ರಹಿಸಿ ಶ್ರೀ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರವೂ ಮುಂದುವರೆದಿದ್ದು, ಮಾಜಿ ಸಚಿವರು ಆಗಿರುವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗಬ್ಬೂರ ಬೈಪಾಸ್ನಲ್ಲಿ ಬಳಿ 600-700 ಲಾರಿಗಳನ್ನು ನಿಲ್ಲಿಸಿಕೊಂಡು ಮುಷ್ಕರ ನಡೆಸುತ್ತಿರುವ ಸ್ಥಳಕ್ಕೆ ಬೆಂಬಲಿಗರೊಂದಿಗೆ ತೆರಳಿದ ಹೊರಟ್ಟಿ ಮುಷ್ಕರ ನಿರತರನ್ನುದ್ದೇಶಿಸಿ ಮಾತನಾಡಿ, ಸರ್ಕಾರದ ಕೆಟ್ಟ ನೀತಿಯಿಂದಾಗಿ ಎಲ್ಲರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಮರಳು ಪರ್ಮಿಟ್ಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ಕಾನೂನಿನಿಂದ ಗುತ್ತಿಗೆದಾರರು, ಕಟ್ಟಡ ಮಾಲೀಕರು, ಕಾರ್ಮಿಕರು ಹಾಗೂ ಲಾರಿ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ. ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುವಂತಹ ಕಾಯ್ದೆ ಜಾರಿಗೆ ತರುವುದು ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ತುಂಗಭದ್ರಾ ಮರಳು ಸಾಗಾಣಿಕೆದಾರರು ಆರಂಭಿಸಿರುವ ಹೋರಾಟ ನ್ಯಾಯಯುತವಾಗಿದ್ದು ಸರ್ಕಾರ ತಕ್ಷಣ ಇದಕ್ಕೆ ಸ್ಪಂದಿಸಬೇಕು ಎಂದೂ ಹೊರಟ್ಟಿ ಒತ್ತಾಯಿಸಿದರು.
ನಂತರ ಮಾತನಾಡಿದ ಸಂಘದ ಪದಾಧಿಕಾರಿಗಳು, 2011ರ ಮರಳು ನೀತಿಗೆ ಸಂಘ ವಿರೋಧ ವ್ಯಕ್ತಪಡಿಸಿದಾಗ ಅದನ್ನು ಪರಿಷ್ಕರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ, ಮರಳು ಸಾಗಾಣಿಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತಷ್ಟು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವಂತೆ ಕಾನೂನು ಜಾರಿಗೆ ತರಲಾಗಿದೆ ಎಂದು ದೂರಿದರು.
ಮರಳು ಸಾಗಾಣಿಕೆ ನಿರ್ವಹಣೆ ಜವಾಬ್ದಾರಿಯನ್ನು ಹೊಂದಿದ್ದ ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತ ತಿಂಗಳಿಗೊಂದು ಕಾನೂನು ಜಾರಿಗೆ ತರುತ್ತಿರುವುದರಿಂದ ಅದನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಧಾರವಾಡ ಜಿಲ್ಲಾಧಿಕಾರಿಗಳು ಮರಳು ಪರ್ಮಿಟ್ ನೀಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಮರಳು ಸಾಗಾಣಿಕೆದಾರರ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.
ಪಾಲಿಕೆ ಸದಸ್ಯ ಸಂತೋಷ ಹಿರೇಕೆರೂರ, ಅಲ್ತಾಫ್ ಕಿತ್ತೂರ, ರಾಜಣ್ಣ ಕೊರವಿ, ಫಮೀದಾ ಕಿಲ್ಲೇದಾರ, ಸಂಘದ ದುರ್ಗಪ್ಪ ದೊಡ್ಡಮನಿ, ಪ್ರಭಾಕರ ಉಪಾಧ್ಯ, ಯಮನೂರ ಬಿಜವಾಡ, ಸೋಮಶೇಖರ ಬೆಂಡಿಗೇರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

