ಧಾರವಾಡ

ಬಡವರಿಗೂ ಉನ್ನತವೈದ್ಯಕೀಯ ಸೌಲಭ್ಯ ಸಿಗಲಿ

Published On :

ಧಾರವಾಡ: ರುಪಾಯಿಗೆ ಒಂದು ಕೆಜಿ ಅಕ್ಕಿ ಪೂರೈಸಿ ಕಡು ಬಡವರ ಹಸಿವು ನೀಗಿಸುವ ಸರ್ಕಾರ, ಅವರಿಗೆ ಸಮರ್ಪಕ ಆರೋಗ್ಯ ನೀಡುವಲ್ಲಿ ವಿಫಲವಾಗಿದೆ ಎಂದು ಸಾಹಿತಿ ಮೋಹನ ನಾಗಮ್ಮನವರ ಹೇಳಿದರು. ಸೌಂದರ್ಯ ಫೌಂಡೇಶನ್ ಹಾಗೂ ಅಯ್ಯಪ್ಪ ಸೇವಾ ಸಮಿತಿ ಇಲ್ಲಿನ ಸಾರಸ್ವತಪುರ ಮಸಾಲಗಾರ ಓಣಿಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ವೆಚ್ಚದಲ್ಲಿ ವೈದ್ಯಕೀಯ ಕಲಿತ ಸಾಕಷ್ಟು ವೈದ್ಯರು ಬಡವರನ್ನು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ನಿರ್ಲಕ್ಷಿಸುತ್ತಿದ್ದಾರೆ. ಆದರೆ, ವಾಸನ್ ಕಣ್ಣಿನ ಆಸ್ಪತ್ರೆ ಬಡವರೆ ವಾಸಿಸುವ ಸ್ಥಳಗಳಿಗೆ ಹೋಗಿ ನೇತ್ರ ತಪಾಸಣೆ ಮಾಡುತ್ತಿರುವುದು ಸ್ವಾಗತಾರ್ಹ. ಅಲ್ಲದೆ, ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ತಜ್ಞರು ಗ್ರಾಮೀಣ ಪ್ರದೇಶ ಮತ್ತು ಬಡವರು ವಾಸಿಸುವ ಸ್ಲಂಗಳ ಕಡೆಗೆ ನಡೆಯಬೇಕಾದ ಅಗತ್ಯತೆ ಇದೆ ಎಂದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ದಯಾನಂದ ಮಾಸೂರ, ಪಾಲಿಕೆ ಸದಸ್ಯೆ ಶೈಲಾ ಕಾಮರಡ್ಡಿ, ಡಾ. ಸೋಮಶೇಖರ ಘನಿ, ಪ್ರಕಾಶ ಘಾಟಗೆ, ಶ್ರೀಧರ ಫಂಜೀಕರ, ವಿ.ಡಿ. ಕಾಮರೆಡ್ಡಿ, ಪಾಪು ಧಾರೆ, ಶಂಕರ ಮಾಳೆ, ಸುದರ್ಶನ ಬಾಳಿಗಾ ಇದ್ದರು. ಸೌಂದರ್ಯ ಫೌಂಡೇಶನ್ ಅಧ್ಯಕ್ಷ ಮಂಜುನಾಥ ಬಡಿಗೇರ ಸ್ವಾಗತಿಸಿ,  ಪ್ರಭು ಹಂಚಿನಾಳ ನಿರೂಪಿಸಿದರು.
ಬಿಎಸ್ಪಿ ರಾಜ್ಯ ಸಮಿತಿಗೆ ಈರಪ್ಪ ಮಾದರ ನೇಮಕ
ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್‌ಪಿ ರಾಜ್ಯ ಸಮಿತಿ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಿದೆ. ಪ್ರೇಮನಾಥ್ ಚಿಕ್ಕತುಂಬಳ್, ನಿಂಗಪ್ಪ ವೀರಪ್ಪ ಮಾರಗನೂರು, ಚಂದ್ರಶೇಖರ ಕುರುಬರ ಅವರನ್ನು ಲೋಕಸಭಾ ಸಂಯೋಜಕರನ್ನಾಗಿ, ಈರಪ್ಪ ಬರಮಪ್ಪ ಮಾದರ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ, ನವಾಬ್ ಸಾಬ್ ಬೆಳಗಲಿ, ಶ್ರೀಕಾಂತ ಬಿ. ದಾದುಗೋಳ, ಚಂದ್ರು ಹರಿಣ ಶಿಕಾರಿ ಅವರನ್ನು ಉಪಾಧ್ಯಕ್ಷರನ್ನಾಗಿ, ಶಿವರಾಜ್ ಪಾಟೀಲ್ ಪ್ರಧಾನ ಕಾರ್ಯದರ್ಶಿ, ಹನುಮಂತಪ್ಪ ಪಿ. ತಗರಗುಂಟೆ ಖಜಾಂಚಿ, ಫೈರೋಜ್ ಖಾನ್ ಅವರಿಗೆ ಕಚೇರಿ ಕಾರ್ಯದರ್ಶಿ ಜವಾಬ್ದಾರಿ ವಹಿಸಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆದೇಶ ಹೊರಡಿಸಿದ್ದಾರೆ.
ಮಕ್ಕಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಲು ಕರೆ
ಹುಬ್ಬಳ್ಳಿ: ಭಾರತೀಯ ಸಂಸ್ಕೃತಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕವಾಗಿ ಬೆಳೆಯುತ್ತ ರಾಷ್ಟ್ರಭಕ್ತಿ ಬೆಳೆಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ವಿಭಾಗ ಪ್ರಚಾರಕ ಅರುಣ ಕುಮಾರ ಹೇಳಿದರು. ನಗರದಲ್ಲಿ ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಯುವ ಸಮಾವೇಶದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸದಾಚಾರದಿಂದ ವರ್ತಿಸಬೇಕು. ಸ್ವಾಮಿ ವಿವೇಕಾನಂದರ ವಿದ್ವತ್ ವಾಣಿಗಳನ್ನು ಅಧ್ಯಯನ ಮಾಡಿ ಎಂದು ಹೇಳಿದರು. ಕನಕದಾಸ ಕಾಲೇಜಿನ ಪ್ರಾಧ್ಯಾಪಕ ಅಣ್ಣಪ್ಪ ಕೊರವರ ಅಧ್ಯಕ್ಷತೆ ವಹಿಸಿದ್ದರು. ಕೆ. ಗೋವರ್ಧನರಾವ್, ನಗರ ಸಂಚಾಲಕ ಸಂದೀಪ ಬೂದಿಹಾಳ ಪೂರ್ಣಾನಂದ ಮಳಲಿ. ಡಾ. ಮಧುಸೂಧನ ಕುಲಕರ್ಣಿ ಮತ್ತಿತರರು ಇದ್ದರು.
ಮಹಿಳಾ ಮಂಡಳದ ನೂತನ ಪದಾಧಿಕಾರಿಗಳು
ಕಲಘಟಗಿ: ಹಳೇ ಹುಬ್ಬಳ್ಳಿಯ ಹೇಮರೆಡ್ಡಿ ಮಲ್ಲಮ್ಮ ಕಾಲನಿಯ ಧನಶ್ರೀ ಮಹಿಳಾ ಮಂಡಳದ ನೂತನ ಅಧ್ಯಕ್ಷರಾಗಿ ಪದ್ಮಾ ಸಾವಳಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗೀತಾದೇವಿ ಮೇಟಿ, ಕಾರ್ಯದರ್ಶಿಯಾಗಿ ಚಂದ್ರಿಕಾ ಕಮಡೊಳ್ಳಿಯವರು ಆಯ್ಕೆಯಾಗಿದ್ದಾರೆಂದು ಕುಸುಮಾ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಕ್ಕಿಂತ ಗ್ರಾಮೀಣರ ಆರೋಗ್ಯ ಉತ್ತಮ: ಡಾ. ಡಿ. ನಾಗರಾಜ
ಧಾರವಾಡ: ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಇಲ್ಲಿನ ಮಾನಸಿಕ ಆಸ್ಪತ್ರೆ ನಿರ್ದೇಶಕ ಡಾ. ಡಿ. ನಾಗರಾಜ ಹೇಳಿದರು.
ಕೆ.ಸಿ. ಪಾರ್ಕ್ ಬಳಿ ಇರುವ ಪ್ರೋಬಸ್ ಕ್ಲಬ್‌ನಲ್ಲಿ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದ ಜನ ಹೆಚ್ಚು ಜಂಕ್‌ಫುಡ್ ಸೇವಿಸುತ್ತಾರೆ. ಅಲ್ಲದೆ, ಎಲ್ಲದಕ್ಕೂ ವಾಹನಗಳನ್ನು ಬಳಸುವುದರಿಂದ ದೇಹಕ್ಕೆ ಶ್ರಮ ಸಿಗುವುದಿಲ್ಲ. ಬೊಜ್ಜುತನ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಾಮಾನ್ಯವಾಗುತ್ತದೆ. ಗ್ರಾಮೀಣ ಪ್ರದೇಶ ಜನ ನಿತ್ಯ ಮನೆ ಕೆಲಸ ಮಾಡುವುದಲ್ಲದೇ ಹೊಲಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಅವರ ಆಹಾರ ಪದ್ಧತಿ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಗರ ಮಂದಿಗಿಂತ ಹಳ್ಳಿಗರು ಒಳ್ಳೆಯ ಆರೋಗ್ಯ ಹೊಂದಿರುತ್ತಾರೆ ಎಂದರು.
ನಗರದ ಜನ ತಮ್ಮ ಮಕ್ಕಳನ್ನು ಎಂಜಿನಿಯರಿಂಗ್, ಡಾಕ್ಟರ್ ಹಾಗೂ ಉನ್ನತ ಹುದ್ದೆಗಳಿಗೆ ಏರಿಸಬೇಕೆಂಬ ಆಸೆಯಿಂದ ತಮಗೂ ಹಾಗೂ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಮಕ್ಕಳು ಕಾಟಾಚಾರಕ್ಕೆ ಓದುವ ಸ್ಥಿತಿ ಬಂದಿದೆ. ಆದ್ದರಿಂದ ಕಡಿಮೆ ಊಟ, ದೈಹಿಕ ಶ್ರಮ, ಸರಿಯಾದ ಸಮಯಕ್ಕೆ ನಿದ್ದೆ ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯಬೇಕಿದೆ. ದೇಶದಲ್ಲಿ ವೈದ್ಯಕೀಯ ವಿಜ್ಞಾನದಲ್ಲಾದ ಸುಧಾರಣೆಗಳಿಂದ ಜನರ ಆರೋಗ್ಯ ಸುಧಾರಿಸುತ್ತಿದ್ದು, ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ನಿದ್ದೆ ಮಾಡುವಾಗ ಎಷ್ಟು ಹೊತ್ತು ಮಲಗುತ್ತೇವೆ ಎಂಬುದಕ್ಕಿಂತ ಆಳವಾಗಿ ಎಷ್ಟು ಹೊತ್ತು ನಿದ್ರಿಸಿದೆವು ಎಂಬುದು ಮುಖ್ಯ. ಇದಕ್ಕಾಗಿ ಮಲಗುವ ಮುನ್ನ ದೇವರ ಧ್ಯಾನ ಮಾಡುವುದರಿಂದ ಮನಸ್ಸಿನ ಕಳವಳ ದೂರಾಗಿ ಶಾಂತ ನಿದ್ದೆಯಾಗುವುದು. ಎದ್ದ ಬಳಿಕ ಮನಸ್ಸು ತಿಳಿಯಾಗಿರುತ್ತದೆ ಎಂದರು.
ಕ್ಲಬ್‌ನ ಅಧ್ಯಕ್ಷ ಕೆ.ಎಂ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಎಂ.ಎನ್. ಗದಗ ಪರಿಚಯಿಸಿದರು. ಎಫ್.ಎಸ್. ಕೋತಂಬರಿ ಶಂಕ್ರಣ್ಣ ತೊರಗಲ್ ಸ್ವಾಗತಿಸಿ, ನಿರೂಪಿಸಿದರು. ಭಾಗ್ಯವತಿ ನಡಕಟ್ಟಿ, ರಮೇಶ ಸಿದ್ಧಾಂತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.