ಧಾರವಾಡ

ಕಾವೇರಿ ಐತೀರ್ಪಿಗೆ ರಾಜ್ಯ ಸರ್ಕಾರ ಹೊಣೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 6
ಕಾವೇರಿ ನದಿ ನೀರಿನ ವಿವಾದದ ಕುರಿತಾಗಿ ರಾಜ್ಯ ಸರ್ಕಾರ ತಜ್ಞರೊಂದಿಗೆ ಚರ್ಚಿಸಿ ಸುಪ್ರಿಂಕೋರ್ಟ್‌ಗೆ ಮನವರಿಕೆ ಮಾಡಿಕೊಡದಿದ್ದರ ಪರಿಣಾಮವಾಗಿ ಕೋರ್ಟ್ ಫೆ. 20ರೊಳಗೆ ಕಾವೇರಿ ಐತೀರ್ಪು ಅಧಿಸೂಚನೆ ಹೊರಡಿಸಿ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಈ ತಪ್ಪಿನ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಹೊರಬೇಕಿದೆಯಲ್ಲದೇ ಕೂಡಲೇ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಐತೀರ್ಪು ಕಾವೇರಿ ನದಿ ಪಾತ್ರದಲ್ಲಿರುವ ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸರ್ಕಾರ ಈ ವಿಷಯದಲ್ಲಿ ಪ್ರಾಮಾಣಿಕ ಕಳಕಳಿ ತೋರದಿದ್ದ ಪರಿಣಾಮ ರಾಜ್ಯದ ಜನ ಸಮಸ್ಯೆ ಎದುರಿಸುವಂತಾಗಿದೆ. ಸಾಲದ್ದಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವಂತೆ ಸುಪ್ರಿಂಕೋರ್ಟ್‌ಗೆ ಲಿಖಿತವಾಗಿ ಹೇಳಿಕೆ ನೀಡಿದೆ. ಇದರ ಪರಿಣಾಮವಾಗಿ ಕುಡಿಯುವ ಹಾಗೂ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಬೇಸಿಗೆಯ ತೊಂದರೆಯಂತೂ ಊಹಿಸಲಸಾಧ್ಯ ಎಂದರು. ಸರ್ಕಾರ ಆಗಿರುವ ಪ್ರಮಾದವನ್ನು ಸರಿಪಡಿಸಲು ಈ ಕೂಡಲೇ ರಾಜ್ಯದ ಸಂಸದರನ್ನೊಳಗೊಂಡು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ವಾಸ್ತವ ಸಂಗತಿ ಗಮನಕ್ಕೆ ತರಬೇಕು ಎಂದರು. ಇದೇ ವೇಳೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಪ್ರತಿಭಟಿಸಿ ಹಾಗೂ ನ್ಯಾಯಕ್ಕೆ ಆಗ್ರಹಿಸಿ ಫೆ. 7ರಿಂದ ಒಂದು ವಾರ ಕಾಲ ಪಾದಯಾತ್ರೆ ನಡೆಸಲಾಗುವುದು ಎಂದರು.
ಪ್ರಸನ್ನಕುಮಾರ ಬ್ಲಾಕ್‌ಮೇಲ್: ಕೆಜೆಪಿ ಮಾಜಿ ಸಂಸ್ಥಾಪಕ ಪ್ರಸನ್ನಕುಮಾರ ವಿಷಯವಾಗಿ ಚುನಾವಣಾ ಆಯೋಗ ಸ್ಪಷ್ಟ ನಿಲುವು ತಿಳಿಸಿದೆ. ಇದೇ ವೇಳೆ ಪ್ರಸನ್ನಕುಮಾರ ಕಾನೂನು ಮೊರೆ ಹೋಗುವುದಾದರೆ ಹೋಗಲಿ, ನಾನು ಎದುರಿಸಲು ಸಿದ್ಧನಾಗಿದ್ದೇನೆ. ಪ್ರಸನ್ನಕುಮಾರ ಮಾಡುತ್ತಿರುವ ಬ್ಲಾಕ್‌ಮೇಲ್ ತಂತ್ರಗಳ ಹಿಂದೆ ನನಗೆ ಆಗದ ಕೆಲವರಿದ್ದಾರೆ. ನಾನಿದಕ್ಕೆ ಸೊಪ್ಪು ಹಾಕುವುದಿಲ್ಲ. ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಪಕ್ಷದ ಧ್ವಜವನ್ನು ಪ್ರಸನ್ನಕುಮಾರ ನನ್ನ ಕೈಗೆ ಹಸ್ತಾಂತರಿಸಿದ್ದಾರೆ. ಆಗ ನನ್ನೊಂದಿಗಿದ್ದವರು ಈಗ ತಿರುಗಿ ಬಿದ್ದಿದ್ದಾರೆಂದರೆ ಏನರ್ಥವೆಂಬುದು ಜನತೆಗೆ ಗೊತ್ತಿದೆ. ಈ ವಿಷಯವಾಗಿ ಹೆಚ್ಚೇನು ಪ್ರಸ್ತಾಪಿಸಲಾರೆ ಎಂದರು.
ಲೆಕ್ಕಾಚಾರ ಬುಡಮೇಲು: ಈ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶ ಯಾವುದೇ ಸಂಸ್ಥೆಯಿಂದ ಅಷ್ಟು ಸಲೀಸಾಗಿ ಲೆಕ್ಕಹಾಕಲು ಸಾಧ್ಯವಿಲ್ಲ. ಕೆಜೆಪಿಯೇ ಅಧಿಕಾರಕ್ಕೆ ಬರುತ್ತೆ ಅಥವಾ ಬರುವುದಿಲ್ಲ ಎಂದರೂ ಸದ್ಯ ನಾನದನ್ನು ನಂಬುವುದಿಲ್ಲ. ರಾಜ್ಯದ ಮತದಾರರು ಪ್ರಜ್ಞಾವಂತರಿದ್ದಾರೆ. ಈ ಬಾರಿ ಅಳೆದು ತೂಗಿ ಮತ ನೀಡುತ್ತಾರೆ.
ಶೆಟ್ಟರ್ ವಿರುದ್ಧ ಪ್ರಬಲ ಸ್ಪರ್ಧಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಸ್ನೇಹ, ಉತ್ತಮ ಬಾಂಧವ್ಯವಿದ್ದರೂ ಅದು ಚುನಾವಣೆಯ ವಿಷಯದಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ನಾನು ಅವರ ಮನೆಗೆ ಊಟಕ್ಕೆ ಹೋಗಬಹುದು ಅವರು ನನ್ನ ಮನೆಗೆ ಊಟಕ್ಕೆ ಬರಬಹುದು. ಆದರೆ, ಪ್ರಸ್ತುತ ಎದುರಾಗಲಿರುವ ಚುನಾವಣೆಯಲ್ಲಿ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.