ಧಾರವಾಡ

ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು

Published On :

 ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 23
ಕಣ್ಣಳತೆಯಲ್ಲೇ ವಿಧಾನಸಭೆ ಚುನಾವಣೆ ಇದೆ. ಅದಕ್ಕೆ ಮಿನಿ ಮಹಾಸಮರವೇ ತಾಲೀಮು ಎನ್ನುವಂತೆ ವರ್ತಿಸಿದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವಂತೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಶನಿವಾರ ಉಮೇದುವಾರಿಕೆ ಸಲ್ಲಿಸಿದರು.
ಮಹಾನಗರ ಪಾಲಿಕೆಗೆ ಸಂಪರ್ಕ ಕಲ್ಪಿಸುವ ಕೋರ್ಟ್ ಸರ್ಕಲ್, ಈದ್ಗಾ ಮೈದಾನ, ಕಿತ್ತೂರು ಚನ್ನಮ್ಮ ಸರ್ಕಲ್, ಹೊಸೂರು ಸರ್ಕಲ್, ಲ್ಯಾಮಿಂಗ್ಟನ್ ರೋಡ್, ಸ್ಟೇಷನ್ ರೋಡ್‌ಗಳಲ್ಲಿ ನಾನಾ ರಾಜಕೀಯ ಪಕ್ಷಗಳ ಹಿರಿ, ಕಿರಿ ಫುಡಾರಿಗಳ ದರ್ಬಾರ್. ಪರಿಣಾಮವಾಗಿ ಇಡೀ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದಂತೂ ಸತ್ಯ. ಸಂಚಾರ ವ್ಯವಸ್ಥೆ ಸರಿಪಡಿಸುವುದಕ್ಕೆ ಟೊಂಕ ಕಟ್ಟಿ ನಿಂತ ಪೊಲೀಸ್ ಪಡೆಯ ಬೆವರು ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಸ್ವಲ್ಪ ಜಾಸ್ತಿನೇ ಹರಿಯಿತು. ಅಡ್ಡಾದಿಡ್ಡಿ ಬರುವ ವಾಹನಗಳು, ಅವುಗಳ ಮಧ್ಯೆ ರಾಜಕೀಯ ಪಕ್ಷಗಳ ನಾಮಪತ್ರ ಮೆರವಣಿಗೆ. ಈ ಮೆರವಣಿಗೆಯಲ್ಲೂ ಕುದುರೆ ಗಾಡಿಗಳು, ಎತ್ತಿನ ಗಾಡಿಗಳು ಮತ್ತು ತೆರೆದ ಜೀಪುಗಳು ಕಾಣಿಸಿಕೊಂಡವು. ಚುನಾವಣಾ ಅಭ್ಯರ್ಥಿ ತೆರೆದ ವಾಹನದಲ್ಲಿ, ಕುದುರೆ ಗಾಡಿಯಲ್ಲಿ ಸಾಗುತ್ತಿದ್ದರೆ ಆ ಅಭ್ಯರ್ಥಿ ಹಿಂದೆ ಮುಂದೆ ಜೈಕಾರ ಹಾಕುವ ಕಾರ್ಯಕರ್ತರ ದಂಡು. ಅವರ ಬೈಕ್‌ಗಳಿಗೆ ಕಟ್ಟಿದ ಧ್ವಜಗಳು ಆಯಾ ಪಕ್ಷದ ಸಾಮರ್ಥ್ಯ ಸೂಚಿಸುವಂತಿದ್ದವು. ಕೆಲ ಅಭ್ಯರ್ಥಿಗಳ ನಾಮಪತ್ರ ಮೆರವಣಿಗೆ ಕಳಪೆಯಾಗಿದ್ದರೆ, ಇನ್ನೂ ಕೆಲವರದ್ದು ಜೋರು, ಬಲು ಜೋರು, ಹಿಂದೆ ಮುಂದೆ ಸಾಗುತ್ತಿದ್ದ ಬೈಕ್‌ಗಳಿಂದಾಗಿ ವ್ಯಾಪಾರ ಉದ್ಯೋಗಕ್ಕಾಗಿ ತೆರಳುವ ನಾಗರಿಕರು ಏನಪ್ಪಾ ಇದು? ಇನ್ನೂ ಮುಗಿದಿಲ್ಲವೇ? ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದರು. ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಮತದಾರರನ್ನು ಆಕರ್ಷಿಸುವುದಕ್ಕೆ ಹಲವು ಹುರಿಯಾಳುಗಳು ನಾನಾ ಸರ್ಕಸ್ ನೋಡಿದ ಮೇಲೆ ಹಿಂದಿನ ಕಾರ್ಪೋರೇಷನ್ ಎಲೆಕ್ಷನ್‌ಗೆ ನಡೆದ ನಾಮಪತ್ರ ಸಲ್ಲಿಕೆ ಮೆರವಣಿಗೆಯನ್ನು ನಿವಾಳಿಸಿ ಒಗೆಯಬೇಕು ಎನ್ನುವಂತಿತ್ತು.
ಶುಕ್ರವಾರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರ ಅಭ್ಯರ್ಥಿಗಳಿಂದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಂಟಾದ ಗೊಂದಲವನ್ನು ಲಘು ಲಾಠಿ ಪ್ರಹಾರದಿಂದ ನಿಯಂತ್ರಿಸಿದ್ದ ಪೊಲೀಸರು ಶನಿವಾರ ಮಾತ್ರ ಪಾಲಿಕೆ ಕಚೇರಿ ಆವರಣದೊಳಕ್ಕೆ ಬೆಂಬಲಿಗರ ವಾಹನಗಳು ನುಸುಳದಂತೆ ಎಚ್ಚರಿಕೆ ಕ್ರಮ ತೆಗೆದುಕೊಂಡಿದ್ದರು. ಅಲ್ಲದೇ ಶುಕ್ರವಾರಕ್ಕೆ ಹೋಲಿಸಿದರೆ ಹು-ಧಾ ಪೊಲೀಸ್ ಕಮಿಷನರೇಟ್ ಶನಿವಾರ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಿತ್ತು.
ಲಾಠಿ ಪ್ರಹಾರ:  ರಾಜಕೀಯ ನಾಯಕರ ಮತ್ತು ಕಾರ್ಯಕರ್ತರಿಂದ ಉಂಟಾಗುತ್ತಿದ್ದ ಸಂಚಾರ ಅಸ್ತವ್ಯಸ್ತ ಸರಿಪಡಿಸುವುದಕ್ಕೆ ಎರಡನೇ ದಿನ ಕೂಡ ಪೊಲೀಸರು ರಾಜಕೀಯ ಕಾರ್ಯಕರ್ತರಿಗೆ ಬೆತ್ತದ ರುಚಿ ತೋರಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಎರಡು ದಿನ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಹು-ಧಾ ಪೊಲೀಸ್ ಕಮಿಷನರೇಟ್ ತೊಡಗಿಸಿಕೊಂಡಿದ್ದು, ಹೆಲ್ಮೆಟ್ ಇಲ್ಲದ ಬೈಕ್ ಸವಾರಿಗರರು ನಿರಾಳರಾಗಿದ್ದರು. ಇದ್ದ ಬಿದ್ದ ಸಿಬ್ಬಂದಿ ಎಲ್ಲ ಬಂದೋಬಸ್ತ್‌ಗೆ ನಿಯೋಜಿತವಾಗಿದ್ದರಿಂದ  ಮೊದಲು ಇದ್ದಷ್ಟು ಪ್ರಮಾಣದಲ್ಲಿ ಹೆಲ್ಮೆಟ್ ಚೆಕ್ಕಿಂಗ್ ನಗರದಲ್ಲಿ ಕಾಣಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.