ಧಾರವಾಡ

27ರಂದು ಜೈನಮುನಿಗಳ ಕೇಶಲೋಚನೆ ಕಾರ್ಯಕ್ರಮ (ಸುದ್ದಿ ಸಂಕ್ಷೇಪ)

Published On :

ಜಮಖಂಡಿ:  ತಾಲೂಕಿನ ಆಲಗೂರು ಪುನರ್ವಸತಿ ಕೇಂದ್ರದಲ್ಲಿ ಜ. 27ರಂದು ಜೈನಮುನಿಗಳ ಪಿಂಛಿ ಬದಲಿಸುವುದು ಮತ್ತು ಕೇಶಲೋಚನೆಯಂತಹ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವೈರಾಗ್ಯ ಆತ್ಮ ಪರಿಶುದ್ಧತೆ ಮತ್ತು ಧರ್ಮ ಸಾಧನೆಯು ಜೈನಮುನಿಗಳ ಮುಖ್ಯ ಉದ್ದೇಶವಾಗಿದ್ದು, ನಗ್ನತೆ, ಕೇಶಲೋಚನೆಯು ವ್ರತ ಎಂದು ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥ ಮಠದ ಯುವಾಚಾರ್ಯ ಗುಣಧರನಂದಿ ಮುನಿ ಮಹಾರಾಜರು ಹೇಳಿದರು. ಮುನಿಗಳು ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ತಾಲೂಕಿನ ದಿಗಂಬರ ಜೈನ ಸಮಾಜದ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಜ. 27ರಂದು ನಡೆಯುವ ಪಿಂಛಿ ಬದಲಾವಣೆ, ಕೇಶಲೋಚನೆ ಸಮಾರಂಭದ ನಿಮಿತ್ತ ಆಲಗೂರು  ಪುನರ್ವಸತಿ ಕೇಂದ್ರದಲ್ಲಿ ಮುಂಜಾನೆ ಧ್ವಜಾರೋಹಣ, ಶಾಂತಿಮಂತ್ರ, ಮಧ್ಯಾಹ್ನ 1 ಗಂಟೆಗೆ ಕೇಶಲೋಚನೆ, 3 ಗಂಟೆಗೆ ಪ್ರವಚನ, 4 ಗಂಟೆಗೆ ಪಿಂಛಿ ಬದಲಾವಣೆ, ಆರತಿ ಹಾಗೂ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುನಿಗಳು ವಿವರಿಸಿದರು.  ಪಿಂಛಿ ಬಿಟ್ಟು ಜೈನ ಮುನಿಗಳು 7 ಹೆಜ್ಜೆ ಮುಂದೆ ಹಾಕುವಂತಿಲ್ಲ. ಹಾಗೇನಾದರೂ ಆದರೆ ಪ್ರತಿ ಹೆಜ್ಜೆಗೆ ಒಂದು ದಿನ ಉಪವಾಸ ಕೈಕೊಳ್ಳಬೇಕಾಗುತ್ತದೆ. ಅಹಿಂಸೆಯ ಪ್ರತೀಕವಾದ ಜೈನ ಪಿಂಛಿಯು ನವಿಲು ನೈಸರ್ಗಿಕವಾಗಿ ವಿಸರ್ಜಿತ ಗರಿಗಳಿಂದ ತಯಾರಿಸಲಾಗಿರುತ್ತದೆ. ಈ ಪಿಂಛಿಯನ್ನು ಪ್ರತಿ ವರ್ಷ ಬದಲಾಯಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಪೊಲೀಸ್ ರಕ್ಷಣೆ ನೀಡಲಿ: ದೇಶ, ಧರ್ಮ ಉಳಿವಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಜೈನ ಮುನಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಸೂಕ್ತ ರಕ್ಷಣೆ ನೀಡಬೇಕು. ಜೈನಧರ್ಮ ಗುರುಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು. ಈ ಕುರಿತಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಮುಂದಿನ ತಿಂಗಳು ಮಂಡಿಸಲಾಗುವ ರಾಜ್ಯ ಬಜೆಟ್‌ನಲ್ಲಿ ಜೈನ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಸರ್ಕಾರವು ಮಠ ಮಾನ್ಯಗಳಿಗೆ ನೀಡಿದ ಅನುದಾನ ಸದ್ಬಳಕೆಯಾಗಿದ್ದು, ಈ ಹಣದಿಂದ ಅನೇಕ ಶೈಕ್ಷಣಿಕ,ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಗಳು ಅಭಿವೃದ್ಧಿ ಹೊಂದಿವೆ. ಬಡಮಕ್ಕಳು ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಶ್ವೇತಾಂಬರ ಮತ್ತು ದಿಗಂಬರ ಬಾಂಧವರಲ್ಲಿ ನಿರಂತರ ಸಾಮರಸ್ಯವಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.