ಮತದಾರರ ಓಲೈಕೆಗೆ ಕ್ಯಾಲೆಂಡರ್ ಗಿಮಿಕ್
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 22
ಚುನಾವಣೆ ಸಮೀಪಿಸಿದರೆ ಸಾಕು ರಾಜಕೀಯ ಮುಖಂಡರು ಮತದಾರರನ್ನು ಓಲೈಸಲು ಏನೆಲ್ಲ ಗಿಮಿಕ್‌ಗಳನ್ನು ಮಾಡುತ್ತಾರೆ ಎನ್ನುವುದಕ್ಕೆ 2013ನೇ ಇಸ್ವಿಯ ಹೊಸ ಕ್ಯಾಲೆಂಡರ್‌ಗಳೇ ಜೀವಂತ ಸಾಕ್ಷಿ....!
ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ರಾಜಕೀಯ ಮುಖಂಡರು ಹೊಸ ವರ್ಷದ ನೆಪದಲ್ಲಿ ಮತದಾರರಿಗೆ ಕ್ಯಾಲೆಂಡರ್ ಮುದ್ರಿಸಿ ಹಂಚುವ ಕಾರ್ಯ ಜೋರಾಗಿ ನಡೆಸುತ್ತಿದ್ದಾರೆ. ಮೊಬೈಲ್, ಗ್ರೀಟಿಂಗ್ ಕಾರ್ಡ್, ಪೋಸ್ಟರ್ ಪ್ರಚಾರ ತಾತ್ಕಾಲಿಕ.
ಆದರೆ, ಕ್ಯಾಲೆಂಡರ್‌ನಲ್ಲಿ ತಮ್ಮ ಭಾವಚಿತ್ರ ಹಾಗೂ ತಮ್ಮ ಕುರಿತಾದ ಮಾಹಿತಿ ಒದಗಿಸಿದರೆ ಚುನಾವಣೆ ಸಂದರ್ಭದಲ್ಲಿ ಹಾಗೂ ವರ್ಷಾನುಗಟ್ಟಲೇ ಮತದಾರರ ಮನದಲ್ಲಿ ಉಳಿಯುತ್ತೇವೆಂಬ ಅಚಲ ವಿಶ್ವಾಸ ರಾಜಕೀಯ ಮುಖಂಡರದ್ದು.
ಸಾವಿರಾರು ಕ್ಯಾಲೆಂಡರ್: ಶಾಸಕಿ ಸೀಮಾ ಮಸೂತಿ, ಜಿಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ಮುಂದಿನ ವಿಧಾಸಭಾ ಚುನಾವಣಾ ಅಕಾಂಕ್ಷಿಗಳಾದ ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ಇಸ್ಮಾಯಿಲ್ ತಮಟಗಾರ ಸೇರಿದಂತೆ ಬಹುತೇಕ ರಾಜಕೀಯ ಮುಖಂಡರು ಈ ಬಾರಿ ಸಾವಿರಾರು ಕ್ಯಾಲೆಂಡರ್‌ಗಳನ್ನು ಮುದ್ರಿಸಿ ಉಚಿತವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಂಚುತ್ತಿದ್ದಾರೆ. ಈ ಕ್ಯಾಲೆಂಡರ್‌ಗಳಲ್ಲಿ ಬರೀ ತಮ್ಮ ಭಾವಚಿತ್ರಗಳೊಂದಿಗೆ ತಮ್ಮ ಪಕ್ಷಗಳ ಮುಖಂಡರ ಹಾಗೂ ಧಾರ್ಮಿಕ ಮುಖಂಡರನ್ನು ಬಿಂಬಿಸಿದ್ದಾರೆ.
ಈ ಕಾರಣದಿಂದ ಸದ್ಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದೇವರ ಭಾವಚಿತ್ರ ಇರುವ ಕ್ಯಾಲೆಂಡರ್‌ಗಳ ಬದಲಿಗೆ ರಾಜಕೀಯ ಮಖಂಡರ ಭಾವಚಿತ್ರಗಳುಳ್ಳ ಕ್ಯಾಲೆಂಡರ್‌ಗಳು ಸಿಗುತ್ತಿವೆ. ಹೊಸ ವರ್ಷಕ್ಕೆ ಕಾಲಿಟ್ಟಾಗಿನಿಂದ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಈ ಬಾರಿ ನಾನೂ ಒಂದು ಕೈ ನೋಡಿಕೊಳ್ಳುತ್ತೇನೆಂದು ಸಾಕಷ್ಟು ಹಣ ವ್ಯಯಿಸಿ ಉತ್ತಮ ಗುಣಮಟ್ಟದ ಕ್ಯಾಲೆಂಡರ್ ಮುದ್ರಿಸಿ ಉಚಿತವಾಗಿ ಹಂಚುವುದರಲ್ಲಿ ನಿರತರಾಗಿದ್ದಾರೆ.
ಪಕ್ಷೇತರರೂ: ಬರೀ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರು ಮಾತ್ರವಲ್ಲ. ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಆಕಾಂಕ್ಷಿಗಳು ಸಹ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಕ್ಯಾಲೆಂಡರ್ ತಯಾರಿಸಿದ್ದಾರೆ.
ಈ ಕ್ಯಾಲೆಂಡರೇ ಅವರ ಪ್ರಚಾರದ ಬಂಡವಾಳವಾಗಲಿದೆ ಎಂಬುದು ಅವರ ಅಚಲ ನಂಬಿಕೆ. ವಿಧಾನಸಭೆ ಚುನಾವಣೆಗೆ ಟಿಕೆಟ್‌ಗೆ ಹಸಿರು ನಿಶಾನೆ ಸಿಕ್ಕ ರಾಜಕೀಯ ಮುಖಂಡರು ಮಾತ್ರ ಪ್ರತಿ ಹಳ್ಳಿಗಳಿಗೆ ಮತ್ತು ನಗರ ಪ್ರದೇಶದಲ್ಲಿನ ಮನೆಗಳಿಗೆ ಈಗಾಗಲೇ ಕ್ಯಾಲೆಂಡರ್ ತಲುಪಿಸಿದ್ದಾರೆ. ಅದರಲ್ಲೂ ಚುನಾವಣೆ ನಿಮಿತ್ತ ರಾಜಕಾರಣಿಗಳು ಅವರ ಸಮಾಜದ ಮತ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜವನ್ನು ಪ್ರತಿನಿಧಿಸುವ ಚಿಹ್ನೆ ಹಾಗೂ ಧಾರ್ಮಿಕ ಮುಖಂಡರು ಹಾಗೂ ದೇವರ ಭಾವಚಿತ್ರಗಳನ್ನು ಕ್ಯಾಲೆಂಡರ್‌ಗಳಲ್ಲಿ ಮುದ್ರಿಸಿದ್ದಾರೆ.
ಹೊಸ ವರ್ಷದ ಪ್ರಥಮ ತಿಂಗಳು ಮುಗಿಯುತ್ತಾ ಬಂದರೂ ಇವರ ಕ್ಯಾಲೆಂಡರ್ ಹಂಚಿಕೆ ಮಾತ್ರ ನಿರಂತರವಾಗಿ ಸಾಗುತ್ತಿದೆ. ಮುಖಂಡರು ಮನೆ ಮನೆಗೆ ತೆರಳಿ ಪ್ರೀತಿ-ವಿಶ್ವಾಸದಿಂದ ನೀಡುವ ಕ್ಯಾಲೆಂಡರ್‌ಗಳನ್ನು ಜನಸಮಾನ್ಯರು ಇಟ್ಟುಕೊಳ್ಳಲೇಬೇಕಾದ ಪರಿಸ್ಥಿತಿಯಲ್ಲಿ ಹೊಂದಿದ್ದಾರೆ. ಒಂದೊಂದು ಮನೆಯಲ್ಲಿ ಈ ರೀತಿಯ ರಾಜಕೀಯ ಮುಖಂಡರು ನೀಡಿದ ಎರಡ್ಮೂರು ಕ್ಯಾಲೆಂಡರ್‌ಗಳು ಕಾಣಸಿಗುತ್ತಿವೆ. ಹೀಗಾಗಿ ಜನತೆ ಒಂದೊಂದು ಕೋಣೆಯಲ್ಲಿ ಒಂದೊಂದು ಕ್ಯಾಲೆಂಡರ್ ನೇತು ಹಾಕುತ್ತಿದ್ದಾರೆ. ಕೆಲ ಜನರಿಗಂತೂ ಕ್ಯಾಲೆಂಡರ್‌ಗಳು ತಲೆನೋವಾಗಿದ್ದು, ಮುಜುಗುರಕ್ಕೀಡು ಮಾಡುತ್ತಿವೆ.
ಒಟ್ಟಾರೆ ಕ್ಯಾಲೆಂಡರ್‌ಗಳು ವ್ಯಕ್ತಿಗತ ಹಾಗೂ ಪಕ್ಷದ ಪ್ರಚಾರದ ಸಂಕೇತವಾಗಿ ಪರಿಣಮಿಸಿದ್ದು, ಪ್ರಜ್ಞಾವಂತ ನಾಗರಿಕರಲ್ಲಿ ಮಾತ್ರ ಕೊಂಚ ಅಸಮಾಧಾನ ಮೂಡಿಸಿದೆ.
- ಕಲ್ಮೇಶ ಪಟ್ಟಣದವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

