ಸಾಹಿತ್ಯ ಸಂಭ್ರಮದ ಸ್ವಾರಸ್ಯಕರ ಸುದ್ದಿಗಳು... (ಸುದ್ದಿ ಸಂಕ್ಷೇಪ)
ಪ್ರಮುಖರ ಗೈರು
ಸಾಹಿತ್ಯ ಸಂಭ್ರಮದ ಮುಖ್ಯ ಆಕರ್ಷಣೆ ಯು.ಆರ್. ಅನಂತಮೂರ್ತಿ ಆಗಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ಸಮಾರಂಭಕ್ಕೆ ಆಗಮಿಸಲಿಲ್ಲ. ಲೇಖಕರಾದ ಜೋಗಿ ಹಾಗೂ ಕುಂ. ವೀರಭದ್ರಪ್ಪ ಅವರೂ ಸಮಾರಂಭದಲ್ಲಿ ಗೈರಾಗಿದ್ದು ಕಂಡು ಬಂದಿತು.
ವ್ಯಾಪಾರ ಅಷ್ಟಕ್ಕಷ್ಟೇ
ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಂಭ್ರಮದ ಸಲುವಾಗಿಯೇ ಧಾರವಾಡ ಹಾಗೂ ಹುಬ್ಬಳ್ಳಿಯ ಕರಾವಳಿ ಪ್ರಕಾಶನ, ಮನೋಹರ ಗ್ರಂಥಮಾಲಾ, ಸಿರಿಗನ್ನಡ ಪುಸ್ತಕ ಮಳಿಗೆ, ಸಾಹಿತ್ಯ ಪ್ರಕಾಶನ, ರಾಮಕೃಷ್ಣ ವಿವೇಕಾನಂದ ಆಶ್ರಮದ ಪುಸ್ತಕಾಲಯ, ಚೈತನ್ಯ ಪ್ರಕಾಶನ ತಮ್ಮ ಪುಸ್ತಕ ಮಾರಾಟ ಮಾಡಲು ಮಳಿಗೆ ಹಾಕಿದ್ದವು. ಆದರೆ, ಪುಸ್ತಕಗಳ ಖರೀದಿ ಮಾತ್ರ ಹೇಳಿಕೊಳ್ಳುವಷ್ಟಿರಲಿಲ್ಲ. ಮಳಿಗೆಗಳ ಎದುರು ಜನರೇ ಕಾಣುತ್ತಿರಲಿಲ್ಲ.
ಹೊಟ್ಟೆ ತುಂಬದ ಊಟ
ಒಂದು ಹೋಳಿಗೆ, ಒಂದು ಸೌಟು ಪಲಾವ್, ಇನ್ನೊಂದು ಸೌಟು ಮೊಸರನ್ನ ಹಾಗೂ ಒಂದು ಕಪ್ ಮಜ್ಜಿಗೆ. ಇದು ಸಾಹಿತ್ಯ ಸಂಭ್ರಮದಲ್ಲಿ ಆಯೋಜಕರು ಏರ್ಪಡಿಸಿದ್ದ ಮಧ್ಯಾಹ್ನದ ಊಟದ ಮೆನು. ರುಚಿ ವಿಷಯದಲ್ಲಿ ಅದ್ಭುತ.
ಆದರೆ, ಪ್ರಮಾಣ ತೀರಾ ಕಡಿಮೆಯಿದ್ದ ಕಾರಣ ಬೆಳಗ್ಗೆಯಿಂದ ಸಾಹಿತ್ಯ ಕೃಷಿ ಮಾಡಿದ ಸಾಹಿತಿಗಳು, ಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಈ ಊಟದಿಂದ ಹೊಟ್ಟೆ ತುಂಬಲಿಲ್ಲ.
ಮರ್ಯಾದೆ ಹೋಗಬಾರ್ದು
ನಾನು, ಶೆಟ್ಟಿ, ಗಿರಡ್ಡಿ ಏಕವಚನದ ಗೆಳೆಯರು. ಮಂದಿಯಾಗಿದ್ದಾಗ ಮಾತ್ರ ಮರ್ಯಾದಿಂದ ಮಾತಾಡ್ತೇವಿ. ಯಾಕಂದ್ರ, ಮರ್ಯಾದ ಹೋಗಬಾರ್ದ ನೋಡ್ರಿ.. ಎಂದು ಲೇಖಕರೊಂದಿಗಿನ ಸಂವಾದದಲ್ಲಿ ಚಂಪಾ ಹೇಳಿದಾಗ, ಸಭಿಕರ ಸಾಲಿನಲ್ಲಿ ಕುಳಿತಿದ್ದ, ಡಾ ಗಿರಡ್ಡಿ ಗೋವಿಂದರಾಜ, ಯಾರ ಮರ್ಯಾದೆ ಎಂದು ಪ್ರಶ್ನಿಸಿದರು. ಆಗ ಸಭೆ ನಗೆಗಡಲಲ್ಲಿ ತೇಲಿತು.
ಇಂದು ಬೈಕ್ ರ್ಯಾಲಿ
ಕಲಘಟಗಿ: ಗಣರಾಜ್ಯೋತ್ಸವದ ಅಂಗವಾಗಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ವತಿಯಿಂದ ಜ. 26ರಂದು ಪಟ್ಟಣದಲ್ಲಿ ಬೈಕ್ ರ್ಯಾಲಿಯನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಆರಂಭವಾಗಲಿರುವ ರ್ಯಾಲಿಗೆ ನ್ಯಾಯವಾದಿ ಕೆ.ಬಿ. ಗುಡಿಹಾಳ ಚಾಲನೆ ನೀಡುವರು ಎಂದು ತಾಲೂಕು ಅಧ್ಯಕ್ಷ ಅನಿಲ್ ಪಮ್ಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಡು-ನುಡಿ ಅಭಿವೃದ್ಧಿಗೆ ಟೈ
ಹುಬ್ಬಳ್ಳಿ: ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಆರ್ಥಿಕ ಸಂಪತ್ತಿನ ರಚನೆ ತನ್ಮೂಲಕ ನಾಡು ನುಡಿಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು 'ಟೈ' ಉದ್ದೇಶ ಎಂದು ದೇಶಪಾಂಡೆ ಫೌಂಡೇಷನ್ನ ಗುರುರಾಜ್ ದೇಶ್ ದೇಶಪಾಂಡೆ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕದಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳಿಂದ ಆರಂಭವಾದ ದಿ ಇಂಡಸ್ ಎಂಟರ್ಪ್ರಿನರ್ಸ್ 17 ದೇಶಗಳಲ್ಲಿ 61 ಶಾಖೆಗಳಲ್ಲಿ13 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಅನುಭವಿ ಉದ್ಯಮಿಗಳ ಅನುಭವ ಮತ್ತು ತಾಂತ್ರಿಕತೆಯನ್ನು ಯುವ ಉದ್ಯಮಿಗಳಿಗೆ ತಲುಪಿಸುವ ಕೆಲಸವನ್ನು ಟೈ ಮಾಡುತ್ತಿದ್ದು, ಫಾರ್ಚೂನ್ 500 ಕಂಪನಿಗಳಲ್ಲಿ ಸೇರ್ಪಡೆಗೊಂಡ ಔದ್ಯಮಿಕ ಸಂಸ್ಥೆಗಳು ಕೂಡ ಟೈನೊಂದಿಗೆ ಸೇರಿಕೊಂಡಿವೆ. ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಧಾರವಾಡ ಮತ್ತು ಬೆಳಗಾವಿ ನಗರಗಳ ಉದ್ಯಮಿಗಳಿಗೆ ನೆರವಾಗುವುದಕ್ಕೆ ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಟೈ ಶಾಖೆ ಸದ್ಯ 200ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಈ ಸದಸ್ಯರ ಮುಖಾಂತರ ಈ ಭಾಗದ ಅಭಿವೃದ್ಧಿಗೆ ವಿಶೇಷ ಉಪನ್ಯಾಸ, ಚರ್ಚಾಕೂಟ, ಶೈಕ್ಷಣಿಕ ಅಧ್ಯಯನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

