ಧಾರವಾಡ

ಮೂಲ ಆಶಯ ಮರೆತ ರಂಗಾಯಣ

Published On :

ಧಾರವಾಡ: ನಾಟಕ ಪ್ರದರ್ಶನಗಳು ಬರಿ ಮನರಂಜನೆಗಳಲ್ಲ, ಅವು ಸಮಾಜದ ಪುನರ್ ವಿಮರ್ಶೆ, ಭಾಷೆ, ಸಂವಹನ ಕಟ್ಟುವ ಪ್ರಕ್ರಿಯೆ. ಇದನ್ನು ರಂಗಾಯಣ ಅರಿಯಲಿ ಎಂದು ರಂಗತಜ್ಞ ಪ್ರಸನ್ನ ಹೇಳಿದರು.
ರಂಗಭೂಮಿ ಪುರೋಭಿವೃದ್ಧಿ ಸಮಿತಿ ಮಂಗಳವಾರ ಇಲ್ಲಿನ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಏರ್ಪಡಿಸಿದ್ದ ರಂಗಾಯಣ ಸ್ವಾಯತ್ತತೆ-ದಿಕ್ಕು ದೆಸೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರ ರಂಗಾಯಣಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ಬಲ ನೀಡುತ್ತಿದೆ. ಆದರೆ, ಅನುದಾನ ಪೂರ್ತಿ ಪೋಲಾಗುತ್ತಿದೆ. ರಾಜ್ಯದ ಮೂರು ರಂಗಾಯಣಗಳು ಪ್ರತಿವರ್ಷ ಪುಸ್ತಕ ಪ್ರಕಟಣೆ, ಮಕ್ಕಳ ಶಿಬಿರಗಳನ್ನು ಮಾಡಿ ನಾವಿಷ್ಟು ಕಾರ್ಯಕ್ರಮಗಳನ್ನು ಮಾಡಿದೆವು ಎಂದು ಅಂಕಿ-ಸಂಖ್ಯೆಯನ್ನು ಹೇಳಿಕೊಳ್ಳುತ್ತಿವೆ. ಎಲ್ಲ ರಂಗಾಯಣಗಳು ರಂಗಾಯಣದ ಮೂಲ ಕೆಲಸ ಮರೆತು ಕಾರ್ಯ ನಿರ್ವಹಿಸುತ್ತಿರುವುದು ತೀರಾ ಬೇಸರದ ಸಂಗತಿ ಎಂದು ಹೇಳಿದರು.
ಪ್ರಪಂಚದ ಯಾವ ವೃತ್ತಿ ರಂಗ ಕಲಾವಿದರನ್ನು ಸರ್ಕಾರ ಕಾಯಂ ಮಾಡಿಲ್ಲ. ಆದರೆ, ಕರ್ನಾಟಕದಲ್ಲಿ ಸರ್ಕಾರ ಈ ಕೆಲಸ ಮಾಡಿದ್ದರಿಂದ ಕಾಯಂ ಕಲಾವಿದರೆ ಈಗ ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಸರ್ಕಾರ ತನ್ನ ತಪ್ಪಿನ ಮೂಲಕ ರಂಗಾಯಣದ ಭವಿಷ್ಯ ಅಳಿಯುವಂತಾಗಿದೆ. ರಂಗಾಯಣಗಳಲ್ಲಿ ಗಟ್ಟಿಯಾದ ನಾಟಕಗಳು ನಡೆಯುತ್ತಿಲ್ಲ. ಬಿ.ವಿ. ಕಾರಂತರ ಆಶಯದಿಂದ ಹುಟ್ಟಿಕೊಂಡ ಈ ರಂಗಾಯಣದ ದಿಕ್ಕು-ದೆಸೆ ಬೇರೆಡೆ ತಿರಗುತ್ತಿದೆ. ರಂಗಾಯಣ ಸರಿದಾರಿಯಲ್ಲಿ ನಡೆದಿದ್ದರೆ ಸಾಹಿತ್ಯ ಕ್ಷೇತ್ರಕ್ಕಿಂತ ರಂಗಭೂಮಿ ಕೊಡುಗೆ ಜಾಸ್ತಿ ಇರುತ್ತಿತ್ತು. ಸಮಾಜದ ಬದಲಾವಣೆಗೆ ರಂಗಭೂಮಿ ಒಂದೇ ಅಸ್ತ್ರವಾಗಿದ್ದು, ವೃತ್ತಿಪರ ರಂಗಭೂಮಿ ಮತ್ತೊಮ್ಮೆ ಕಟ್ಟಬೇಕಾದ ಅಗತ್ಯತೆ ನಮಗಿದೆ ಎಂದು ಹೇಳಿದರು.
ಪ್ರಾಮಾಣಿಕ ಪ್ರಯತ್ನ ಇಲ್ಲ: ಸಮುದಾಯದ ರಂಗ ಚಿಂತಕ ಕೆ. ಮುದ್ದುಕೃಷ್ಣ ಮಾತನಾಡಿ, ಸರ್ಕಾರದ ಕಪಿಮುಷ್ಟಿಯಲ್ಲಿ ಸಿಕ್ಕು ರಂಗ ಸಮಾಜದ ಸದಸ್ಯರು ಹಾಗೂ ರಂಗಾಯಣದ ನಿರ್ದೇಶಕರು ರಂಗಾಯಣದ ಹಾದಿ ತಪ್ಪಿಸುತ್ತಿದ್ದಾರೆ. ತಮಗೆ ಬೇಕಾದ ಪ್ರಶಸ್ತಿ ಹಾಗೂ ಅನುದಾನ ದೊರೆತರೆ ಸಾಕೆಂದು ಯಾರಿಂದಲೂ ರಂಗಭೂಮಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ. ರಂಗಪರಂಪರೆ ಇಲ್ಲದ ರಂಗ ನಿರ್ದೇಶಕರ ಆಯ್ಕೆಯಾದಾಗ ರಂಗ ಸಮಾಜದ ಒಬ್ಬ ಸದಸ್ಯರೂ ಮಾತಾಡಲಿಲ್ಲ. ಆದ್ದರಿಂದ ಮೈಸೂರಿನಲ್ಲಿ ಸಾಹಿತಿ, ಕಲಾವಿದರ ಒಕ್ಕೂಟ ರಚಿಸಿಕೊಂಡಿದ್ದು, ರಂಗ ಸಮಾಜದ ಸ್ವರೂಪದಲ್ಲಿ ಗೊಂದಲಗಳಿದ್ದು, ಸರಿಪಡಿಸಿ ರಂಗ ತಜ್ಞರನ್ನು ನೇಮಿಸಬೇಕು. ರಂಗಾಯಣ ಕಲಾವಿದರ ವರ್ಗಾವಣೆ ರದ್ದುಪಡಿಸಿ ಎಲ್ಲ ರಂಗಾಯಣಗಳಿಗೆ ಪ್ರತ್ಯೇಕ ಕಲಾವಿದರ ಆಯ್ಕೆ ಮಾಡಬೇಕು. ರಾಜಕೀಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಾಯಣದ ಆಡಳಿತದಲ್ಲಿ ಕೈ ಹಾಕುವಂತಿಲ್ಲ ಎಂದು ಸಿಎಂಗೆ, ಕನ್ನಡ-ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ದರೂ ಅವರು ಸಹ ಇದನ್ನು ಗಂಭೀರವಾಗಿ ಪರಿಣಿಸುತ್ತಿಲ್ಲ ಎಂದರು.
ರಂಗ ನಿರ್ದೇಶಕ ಪ್ರಕಾಶ ಗರುಡ, ಬಿ.ವಿ. ಕಾರಂತ ರಂಗ ಪ್ರತಿಷ್ಠಾನದ ಕಾರ್ಯನಿರ್ವಾಹಕ ಟ್ರಸ್ಟಿ ಎಂ. ಜಯರಾಮ ಪಾಟೀಲ, ರಂಗಭೂಮಿ ಪುರೋಭಿವೃದ್ಧಿ ಸಮಿತಿ ಕಾರ್ಯದರ್ಶಿ ಕೆ.ಎಚ್. ನಾಯಕ ಇದ್ದರು. ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಜಗುಚಂದ್ರ ಕೂಡ್ಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.