ಧಾರವಾಡ

'ಸಪ್ನ ಬುಕ್‌ಹೌಸ್‌' ಉದ್ಘಾಟನೆ ಇಂದು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 4
ಪುಸ್ತಕ ಸಂತೆಗೂ ಮಾಲ್ ಪರಿಕಲ್ಪನೆ ಕೊಟ್ಟು ಪುಸ್ತಕ ಖರೀದಿಯ ಜತೆ ಜತೆಗೆ ಇನ್ನಿತರ ವಸ್ತುಗಳನ್ನು ಖರೀದಿಸುವ ಗೀಳು ಹಚ್ಚಿರುವ 'ಸಪ್ನ ಬುಕ್ ಹೌಸ್‌' ಹುಬ್ಬಳ್ಳಿಗೆ ಕಾಲಿಟ್ಟಿದೆ. ಇಂಥ ವಿಭಿನ್ನ ಪರಿಕಲ್ಪನೆಯ 'ಸಪ್ನಬುಕ್ ಹೌಸ್‌' ಶುಕ್ರವಾರ ಉದ್ಘಾಟನೆಗೊಳ್ಳಲಿದೆ.
ಹುಬ್ಬಳ್ಳಿ ಕಾಯಿನ್ ರಸ್ತೆ ಲಕ್ಷ್ಮಿಮಾಲ್‌ನಲ್ಲಿರುವ ಸಪ್ನ ಬುಕ್ ಹೌಸ್‌ನ ನೂತನ ಮಳಿಗೆಯನ್ನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕವಿವಿ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ್ ಪಾಲ್ಗೊಳ್ಳುವರು.
ಹು-ಧಾ ಸಂಗೀತ, ಸಾಹಿತ್ಯದ ತವರೂರಾಗಿದ್ದರೂ ಎಲ್ಲ ಲೇಖಕರ ಪುಸ್ತಕಗಳು ಒಂದೇ ಸೂರಿನಡಿ ಥಟ್ಟೆಂದು ಸಿಗುವಂತಹ ವ್ಯವಸ್ಥೆ ಇಲ್ಲಿರಲಿಲ್ಲ. ಇಂಥ ವಿಶೇಷತೆಯುಳ್ಳ 'ಸಪ್ನ ಬುಕ್ ಹೌಸ್‌' ಅವಳಿನಗರದಲ್ಲಿ ಆರಂಭವಾಗಬೇಕೆಂಬುದು ಸಾಹಿತ್ಯ ಪ್ರಿಯರ ಬಹುದಿನದ ಕನಸಾಗಿತ್ತು, ಅದೀಗ ನನಸಾಗಿದೆ. 'ಸಪ್ನ ಬುಕ್ ಹೌಸ್‌'ಗೆ ದೇಶದ ಅತಿ ದೊಡ್ಡ ಪುಸ್ತಕ ಮಳಿಗೆ ಎಂಬ ಹೆಗ್ಗಳಿಕೆ ಸುಖಾಸುಮ್ಮನೇ ಬಂದಿಲ್ಲ. ಆಂಗ್ಲಭಾಷೆಯ ವಿವಿಧ ಶೀರ್ಷಿಕೆಯ 2 ಲಕ್ಷ ಹಾಗೂ ಕನ್ನಡದ 20 ಸಾವಿರಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳನ್ನು 'ಸಪ್ನ ಬುಕ್ ಹೌಸ್‌' ಹೊಂದಿರುವುದೇ ಇದಕ್ಕೆ ಪ್ರಮುಖ ಕಾರಣ. 'ಸಪ್ನ ಬುಕ್ ಹೌಸ್‌'ನಲ್ಲಿ ಕೇವಲ ಪುಸ್ತಕವಲ್ಲದೇ ಪೆನ್-ಪೆನ್ಸಿಲ್‌ನಿಂದ ಆರಂಭವಾಗಿ ಮಕ್ಕಳಿಗೆ ಮನರಂಜನೆ ನೀಡುವ ಕಾರ್ಟೂನ್ ಮೂವಿ ಸಿಡಿ, ಸ್ಕೂಲ್‌ಬ್ಯಾಗ್, ವಾಟರ್ ಬ್ಯಾಗ್, ಕೀಜೈನ್, ಸಂಗೀತ-ಚಲನ ಚಿತ್ರದ ಸಿಡಿ, ಸಂಗೀತ ಪರಿಕರಗಳು, ಗಿಫ್ಟ್, ಆಟಿಕೆ, ಚಾಕ್‌ಲೇಟ್, ಕ್ರೀಡಾ ಸಾಮಗ್ರಿ ಸೇರಿದಂತೆ ನಾನಾ ಬಗೆಯ ವಸ್ತುಗಳು ಇಲ್ಲಿ ಲಭ್ಯ. 10 ಸಾವಿರ ಚದರ ಅಡಿಗಳ ಹವಾನಿಯಂತ್ರಿತ ಪರಿಸರ ಸ್ನೇಹಿ ಬೆಳಕನ್ನು ಹೊಂದಿರುವ ಪುಸ್ತಕ ಭಂಡಾರ ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ.
ಎಲ್ಲವೂ ಅಚ್ಚುಕಟ್ಟು: ಪುಸ್ತಕ ಮಳಿಗೆ ಎಂದ ಕೂಡಲೇ ರಾಶಿ ರಾಶಿ ಪುಸ್ತಕ ಹೇರಿಟ್ಟಿರುವುದು ದೃಶ್ಯ ಸರ್ವೇ ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತದೆ. ಆದರೆ, 'ಸಪ್ನ ಬುಕ್ ಹೌಸ್‌'ನಲ್ಲಿ ಎಲ್ಲವೂ ಅಚ್ಚುಕಟ್ಟು. ಪುಸ್ತಕ ಜೋಡಿಸಿಡುವ ಬಗೆ, ಪೆನ್‌ನಿಂದ ಹಿಡಿದು ಪೆನ್ಸಿಲ್‌ವರೆಗೆ, ಚಾಕಲೇಟ್‌ನಿಂದ ಹಿಡಿದು ಕ್ರೀಡಾ ಸಾಮಗ್ರಿಗಳ ವರೆಗೆ ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಪ್ರದರ್ಶನ ಮಾಡಲಾಗುತ್ತದೆ.
ಪುಸ್ತಕ ಸೇರಿದಂತೆ ಇತ್ಯಾದಿ ಸಾಮಗ್ರಿಗಳು ಕಣ್ಣಿಗೆ ಬಿದ್ದೊಡನೆಯೇ ಅದನ್ನು ಖರೀದಿಸಬೇಕೆಂಬ ಬಯಕೆ ಹುಟ್ಟಿಸುತ್ತದೆ. ಸಮಯ ಕಳೆಯಲೆಂದು ಸುಖಾಸುಮ್ಮನೇ 'ಸಪ್ನ ಬುಕ್ ಹೌಸ್‌'ಗೆ ನುಗ್ಗುವ ವ್ಯಕ್ತಿ ಏನಾದರೊಂದು ವಸ್ತು ಖರೀದಿಸಿಯೇ ಹೊರ ಬರುತ್ತಾನೆ. ಇದು 'ಸಪ್ನ ಬುಕ್ ಹೌಸ್‌'ನ ವಿಶೇಷತೆ. 'ಸಪ್ನ ಬುಕ್ ಹೌಸ್‌' ಉತ್ತರ ಕರ್ನಾಟಕ ಹೆಬ್ಬಾಗಿಲಾಗಿರುವ ಹುಬ್ಬಳ್ಳಿಯಲ್ಲಿ ಉದ್ಘಾಟನೆ ಸಜ್ಜುಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.