ಧಾರವಾಡ

ಬೆಳ್ಳಿ ಹಬ್ಬ ಆಚರಣೆಗೆ ನಿರ್ಧಾರ

Published On :

ಗಜೇಂದ್ರಗಡ: ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಅಮೋಘ. ಗ್ರಾಮೀಣ ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ 1987ರಲ್ಲಿ ಜನ್ಮ ತಾಳಿರುವ ನೆಹರು ಯುವ ಕೇಂದ್ರಕ್ಕೆ 25 ಸಂವತ್ಸರ ತುಂಬಿದ ಪ್ರಯುಕ್ತ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.
ಅವರು ಶನಿವಾರ ಸ್ಥಳೀಯ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಅವರ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಯುವಕರಲ್ಲಿ ಹುದುಗಿರುವ ಪ್ರತಿಭಾ ಶಕ್ತಿಯನ್ನು ಜಾಗೃತಿಗೊಳಿಸುವುದು ಕೇಂದ್ರದ ಮುಖ್ಯ ಗುರಿಯಾಗಿದೆ. ಪಂ. ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ದಿನ ನ. 14 ರಂದು ದೆಹಲಿಯಲ್ಲಿ ಬೃಹತ್ ಸಮಾರಂಭವನ್ನು ಆಯೋಜಿಸಲಾಗಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವ ನೇತಾರ ರಾಹುಲ್‌ಗಾಂಧಿ, ಪ್ರಧಾನಮಂತ್ರಿ ಮನಮೋಹನ ಸಿಂಗ್, ಕೇಂದ್ರದ ಎಲ್ಲ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು.
ಆಗಸ್ಟ್ 20 ರಂದು ಬೆಂಗಳೂರನಲ್ಲಿ ರಾಜೀವಗಾಂಧಿ ಜನ್ಮದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನಾಗಿ ಆಚರಿಸಲು ಉದ್ದೇಶಿಸಿದೆ. ಇದಕ್ಕಾಗಿ ಈಗಾಗಲೆ ಸಕಲ ಸಿದ್ಧತೆ ನಡೆದಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಎರಡೂ ಸಮಾರಂಭವನ್ನು ಜನಮನದಲ್ಲಿ ಉಳಿಯುವಂತೆ ನಡೆಸಲಾಗುವುದು. ಪ್ರತಿಯೊಂದು ಹಳ್ಳಿಯ ಗ್ರಾಮೀಣ ಪ್ರತಿಭಾವಂತ 1 ಲಕ್ಷ ಯುವಕ-ಯುವತಿಯರಿಗೆ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡಲು ಪಣ ತೊಡಲಾಗಿದೆ. ಕೇಂದ್ರ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರು. 200 ಕೋಟಿ ಅನುದಾನದಲ್ಲಿ ಯುವಕ, ಯುವತಿಯರಿಗೆ ವಿವಿಧ ತರಬೇತಿ ನೀಡಲಾಗುವುದು.
ಯುವಕರ ಬಲವರ್ಧನೆ ಕೇಂದ್ರದ ಮೂಲ ಉದ್ದೇಶ ಸಫಲಗೊಳಿಸುವುದು ತಮ್ಮ ಮುಂದಿರುವ ಗುರಿಯಾಗಿದೆ. ಯುವ ಜನತೆ ದೇಶದ ಆಸ್ತಿ ಎಂದು ರಾಜೀವ ಗಾಂಧಿ ಹೇಳುತ್ತಿದ್ದರು. ಅದರಂತೆ ಯುವ ಸಮೂಹಕ್ಕೆ ಸ್ವ-ಉದ್ಯೋಗ ಕಲ್ಪಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ರೂಪಿಸಿಲಾಗಿದೆ. ಯುವಕರಿಗೆ ನಾಯಕತ್ವ ನೀಡಿದರೆ ದೇಶ ಅಭಿವೃದ್ಧಿ ಹೊಂದಲಿದೆ. ಗ್ರಾಪಂ, ತಾಪಂ, ಜಿಪಂ ಮಟ್ಟಗಳಲ್ಲಿ ಶಕ್ತಿ ತುಂಬಬೇಕು ಎಂದು ಅಭಿಪ್ರಾಯಪಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಮಿಥುನ್ ಪಾಟೀಲ, ಅಜೀತ ಬಾಗಮಾರ, ಎಂ.ಎಚ್. ಕೋಲಕಾರ, ಎಂ.ಕೆ. ಹಿರೇಹಾಳ, ದತ್ತುಸಾ ಬಾಕಾಳೆ, ಶಿಶಿಕಾಂತ ವಕ್ಕಲರ, ಯೂಸುಫ ಇಟಗಿ, ಎಫ್.ಎಸ್. ಕರಿದುರಗನವರ, ರವಿ ಗಡೇದವರ, ವೆಂಕಟೇಶ ಮುದಗ್‌ಲ್ಲ, ತುಳಸಿರಾಮ ಮಾಳೋತ್ತರ, ಪಾಂಡುರಂಗ ಶಿಲವೇರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.