ಅನುದಾನ ಬಳಕೆಗೆ ಪ್ರತ್ಯೇಕ ಘಟಕ ಬೇಕು
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 19
ಸಂಸದ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಸಂಪೂರ್ಣವಾಗಿ ವಿನಿಯೋಗವಾಗುವ ನಿಟ್ಟಿನಲ್ಲಿ ಪ್ರತ್ಯೇಕ ಘಟಕ ಸ್ಥಾಪಿಸಬೇಕೆಂದು ಸಂಸದ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಸ್ತೆ, ಕುಡಿವ ನೀರಿನ ಯೋಜನೆ ಸೇರಿದಂತೆ ಆಯಾ ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಅನುದಾನ ನೀಡಲು ಶಿಫಾರಸು ಪತ್ರಗಳನ್ನು ನೀಡಿರುತ್ತಾರೆ. ಆದರೆ, ಪಿಡಬ್ಲೂಡಿ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಮಹಾನಗರ ಪಾಲಿಕೆ ಮತ್ತಿತರೆ ಇಲಾಖೆಗಳ ಅಧಿಕಾರಿಗಳಿಂದ ಕಾಮಗಾರಿಗಳ ನಿರ್ವಹಣೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ಜನರ ಬೇಡಿಕೆ ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆ ಸಾಕಾರಗೊಳ್ಳುತ್ತಿಲ್ಲ. ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸುವುದು, ಕಾಮಗಾರಿ ಮೇಲ್ವಿಚಾರಣೆ, ನಿರ್ವಹಣೆ ಸೇರಿದಂತೆ ಇತರ ಕೆಲಸಗಳು ಈ ಅಧಿಕಾರಿಗಳಿಂದ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ ಅನುದಾನವನ್ನು ಪೂರ್ಣವಾಗಿ ಬಳಸಿಕೊಳ್ಳಲು ಪ್ರತ್ಯೇಕ ಘಟಕ ಆರಂಭಿಸುವ ಅಗತ್ಯವಿದೆ ಎಂದರು.
ಅಂದಾಜು ಪತ್ರಿಕೆ ನೀಡಿಲ್ಲ: ಸಂಸದರ ಕ್ಷೇತ್ರಾಭಿವೃದ್ಧಿಗೆ ನಾಲ್ಕು ವರ್ಷದಲ್ಲಿ ತಾವು ರು. 30.30 ಕೋಟಿ ಬಿಡುಗಡೆ ಮಾಡಿದ್ದು, 496 ಕಾಮಗಾರಿಗಳಿಗೆ ರು. 15.15 ಕೋಟಿ ಶಿಫಾರಸು ನೀಡಿದ್ದೇನೆ. ಈ ಪೈಕಿ ರು. 10.52 ಕೋಟಿ ಮಂಜೂರಾಗಿದ್ದು, ರು. 8.9 ಕೋಟಿ ಖರ್ಚಾಗಿದೆ. 400 ಕಾಮಗಾರಿಗಳ ಪೈಕಿ 150 ಪೂರ್ಣಗೊಂಡಿದ್ದು, 132 ಕಾಮಗಾರಿಗಳು ಪ್ರಗತಿಯಲ್ಲಿವೆ. ಬಾಕಿ ಉಳಿದ 212 ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧವಾಗದ ಕಾರಣ ಅನುದಾನ ಬಳಕೆಯಾಗದೇ ಉಳಿದಿದೆ. ಒಂದು ವೇಳೆ ಚುನಾವಣೆ ಘೋಷಣೆಯಾಗಿ ಈ ಹಣ ಸರ್ಕಾರಕ್ಕೆ ವಾಪಸ್ಸು ಹೋಗಲಿದೆ. ವಿವಿಧ ಇಲಾಖೆಗಳ ಪೈಕಿ ಮಹಾನಗರ ಪಾಲಿಕೆ ತಮ್ಮ ಅನುದಾನವನ್ನು ಬಳಸಿಕೊಳ್ಳಲು ವಿಫಲವಾಗಿದೆ. ಪಾಲಿಕೆಯು ತನ್ನ ಸಾಕಷ್ಟು ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ನೀಡದಿರುವುದರಿಂದ ಹಣ ಹಾಗೆಯೇ ಉಳಿದುಕೊಂಡಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ನೀಡಲಾಗಿದ್ದ ರು. 3 ಲಕ್ಷ ಅನುದಾನದ ಚೆಕ್ ಸಹ ವಾಪಸ್ಸು ಬಂದಿದೆ. ಇದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಂಚಣಿ ಯೋಜನೆ: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ವಿವಿಧ ವೇತನಗಳನ್ನು ಫಲಾನುಭವಿಗಳಿಗೆ ನೇರವಾಗಿ ನೀಡುವ ಉದ್ದೇಶದಿಂದ ಸರ್ಕಾರ ಫಿನೋ ಕಂಪನಿಗೆ ನಿರ್ವಹಣೆ ವಹಿಸಿಕೊಟ್ಟಿದೆ. ಕಂಪನಿಯು ಎಕ್ಸಿಸ್ ಬ್ಯಾಂಕ್ ಮೂಲಕ ಫಲಾನುಭವಿಗಳಿಗೆ ಪ್ರತಿ ತಿಂಗಳು ವೇತನ ಪಾವತಿಸುತ್ತಿದೆ. ಈ ಹಿಂದೆ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಯೋಜನೆ ಜಾರಿಗೊಳಿಸುತ್ತಿದೆ. ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಮಾಡಲಾಗುತ್ತಿದೆ. ಈ ಹಿಂದೆ ಸ್ಥಗಿತಗೊಂಡಿದ್ದ 13,180 ಫಲಾನುಭವಿಗಳ ಪೈಕಿ ಪರಿಶೀಲನೆ ನಡೆಸಿ ಅರ್ಹ 6810 ಜನರಿಗೆ ಮರಳಿ ವೇತನ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಧಾರವಾಡ-ಸವದತ್ತಿ ರಸ್ತೆ ಕಾಮಗಾರಿ ಕುರಿತು ಮಾತನಾಡಿ, 19.5 ಕಿ.ಮೀ. ರಸ್ತೆ ಕಾಮಗಾರಿ ಧಾರವಾಡ ಜಿಲ್ಲೆ ವ್ಯಾಪ್ತಿಗೆ ಇದ್ದು, ಇದರಲ್ಲಿ 2.5 ಕಿ.ಮೀ. ಧಾರವಾಡ ನಗರದಲ್ಲಿ, ಉಳಿದ 17 ಕಿ.ಮೀ. ಹೊರವಲಯದಲ್ಲಿ ಬರುತ್ತದೆ. ರೆಡ್ಡಿ ವೀರಣ್ಣ ಕನಸ್ಟ್ರಕ್ಷನ್ ಅವರು ಗುತ್ತಿಗೆ ಪಡೆದಿದ್ದು, ಶೇ. 48ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2013ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ವಿವಿಧ ಕಾರಣಗಳನ್ನು ಮುಂದಿಟ್ಟು ಟೆಂಡರ್ ಪಡೆದ ಕಂಪನಿಯು ಅವಧಿ ವಿಸ್ತರಿಸುವಂತೆ ಮನವಿ ಮಾಡಿದೆ. ಈ ಮಧ್ಯೆ ವಿಶ್ವಬ್ಯಾಂಕ್ ತಂಡವು ಕಾಮಗಾರಿಯನ್ನು ಪರಿಶೀಲಿಸಿದ್ದು, ಒಂದು ವೇಳೆ ಅವಧಿ ವಿಸ್ತರಿಸಿದರೆ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿದ್ದಾರೆಂದು ಶುಕ್ಲಾ ತಿಳಿಸಿದರು. ಈ ಮಧ್ಯೆ ಸಂಸದ ಜೋಶಿ ಮಾತನಾಡಿ, ಉದ್ದೇಶಿತ ರಸ್ತೆ ಕಾಮಗಾರಿಯನ್ನು ಕಳೆದ ವಾರ ತಾವು ಪರಿಶೀಲಿಸಿದ್ದು, ಕೆಲವು ಕಡೆ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಸ್ಥಳೀಯ ಎಂಜಿನಿಯರಿಂಗ್ ಕಾಲೇಜು ಮೂಲಕ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಲಾಗುವುದು ಎಂದರು.
ತಪ್ಪಾದರೆ ಕ್ರಮ: ಹುಬ್ಬಳ್ಳಿಯ ಗುರುಸಿದ್ಧೇಶ್ವರ ಸಹಕಾರಿ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ತಮ್ಮ ಪಕ್ಷದ ಮುಖಂಡ ಮಹೇಶ ಟೆಂಗಿನಕಾಯಿ ಸೇರಿದಂತೆ ಅಧ್ಯಕ್ಷ ಹಾಗೂ ನಿರ್ದೇಶಕರ ಮೇಲೆ ಆರೋಪ ಬಂದಿದೆ. ಒಂದು ವೇಳೆ ಅವ್ಯವಹಾರ ಆಗಿದ್ದರೆ ಸಂಪೂರ್ಣ ತನಿಖೆ ನಡೆಯಲಿ. ತಪ್ಪು ಮಾಡಿದರೆ ಕ್ರಮ ಆಗಿಯೇ ಆಗುತ್ತದೆ ಎಂದು ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

