ತಯಾರಾಗುತ್ತಿವೆ ಗಣೇಶ ಮೂರ್ತಿಗಳು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 19
'ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ...'
ಸಾರ್ವಜನಿಕ ಸ್ಥಳ ಹಾಗೂ ಮನೆ ಮನೆಗಳಲ್ಲಿ ವಿರಾಜಮಾನವಾಗಲು ಗಣೇಶ ಭರಪೂರ ತಯಾರಿ ನಡೆಸಿದ್ದಾನೆ. ಗಣೇಶ ಚತುರ್ಥಿಗೆ ಇನ್ನೂ ಎರಡು ತಿಂಗಳು ಬಾಕಿ ಉಳಿದಿದ್ದು, ಮೂರ್ತಿ ತಯಾರಕರು ತಯಾರಿಯಲ್ಲಿ ನಿರತರಾಗಿದ್ದಾರೆ. ಗಣೇಶ ಮೂರ್ತಿಗಳು ಲಭಿಸುವ ಸ್ಥಳಗಳ ಬಗ್ಗೆ ಜಾಹೀರಾತು ನೀಡುವ ಹಾಗೂ ವಿವಿಧೆಡೆ ಭಿತ್ತಿಪತ್ರ ಲಗತ್ತಿಸುವ ಕಾರ್ಯವೂ ನಡೆದಿದೆ.
ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಾವಿರಾರು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಮೂರ್ತಿ ತಯಾರಕರು ತೊಡಗಿಕೊಂಡಿದ್ದಾರೆ. ಮಣ್ಣಿನ ಮೂರ್ತಿಗಳಿಗಿಂತಲೂ ಹೆಚ್ಚಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಗಣೇಶ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ವಿಗ್ರಹಗಳಲ್ಲೂ ವೈವಿಧ್ಯದ ಮೂರ್ತಿಗಳು ತಯಾರುಗೊಳ್ಳುತ್ತಿವೆ. ಇಲಿ ಮೇಲೆ ಕುಳಿತ ಗಣಪ, ಕೃಷ್ಣನಂತೆ ಗೋವಿಗೆ ಬೆನ್ನು ತಾಗಿಸಿ ನಿಂತ ಗಣೇಶ, ನವಿಲಿನ ಮೇಲೆ ವಿರಾಜಿತ ಗಣೇಶ ಹಾಗೂ ಮತ್ತಿತರ ರೂಪದಲ್ಲಿ ಗಣೇಶ ಸಿದ್ಧಗೊಳ್ಳುತ್ತಿದ್ದಾನೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಸ್ಪರ್ಧೆಗಿಳಿದಂತೆ ಹಲವಾರು ರೂಪದಲ್ಲಿ ಸಿದ್ಧಪಡಿಸುವಲ್ಲಿ ಮೂರ್ತಿ ತಯಾರಕರು ತೊಡಗಿಕೊಂಡಿದ್ದಾರೆ. ಕನಿಷ್ಠ 3 ಅಡಿಗಳಿಂದ 10 ಅಡಿಗಳ ಎತ್ತರದವರೆಗೂ ಸಾರ್ವಜನಿಕ ಗಣಪತಿಗಳು ಸಿದ್ಧಗೊಳ್ಳುತ್ತಿವೆ.
'ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಬಾಳಿನ ಕಲ್ಪತರು ನೀನೆ...'
ಸೈನಿಕ, ರಾಜಕಾರಣಿ, ಸಮಾಜ ಸೇವಕ, ಐತಿಹಾಸಿಕ ಪುರುಷ, ಆಧ್ಯಾತ್ಮ ರೂಪ ಸೇರಿದಂತೆ ಹಲವಾರು ರೂಪಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವಿರಾಜಮಾನವಾಗು ಗಣೇಶ ಸಿದ್ಧಗೊಳ್ಳುತ್ತಿದ್ದಾನೆ. ಕಳೆದ ಕೆಲ ದಿನಗಳಿಂದ ಗಣೇಶ ಮೂರ್ತಿ ತಯಾರಿಸುವ ಕಾರ್ಯ ನಡೆದಿದ್ದು, ಇದೀಗ ಈ ಕೆಲಸ ತುರುಸು ಪಡೆದುಕೊಂಡಿದೆ. ಮೂರ್ತಿ ತಯಾರಕರು ತಮ್ಮ ಸಹಾಯಕರೊಂದಿಗೆ ಹಗಲು ರಾತ್ರಿ ಎನ್ನದೇ ಕೆಲಸದಲ್ಲಿ ತೊಡಗಿದ್ದಾರೆ. ಗಣೇಶ ಮೂರ್ತಿಗಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮೂರ್ತಿ ತಯಾರಕರು ಈ ಒಂದು ಹಬ್ಬದಿಂದ ಸಾವಿರಾರು ರುಪಾಯಿಗಳನ್ನು ಗಳಿಸುತ್ತಾರೆ. ಕೆಲ ಬಾರಿ ಈ ಗಳಿಕೆ ಲಕ್ಷ ಮೀರುತ್ತದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಬೆಲೆಯೇ ಕನಿಷ್ಠ ರು. 200ದಿಂದ ಗರಿಷ್ಠ ಬೆಲೆ ರು. 5 ಸಾವಿರ ದಾಟಿರುತ್ತದೆ. ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಬೆಲೆಯಂತೂ ಗಗನಕ್ಕೇರುವುದು ಪ್ರತಿ ವರ್ಷದ ಸಾಮಾನ್ಯ ಸಂಗತಿ. ರು. 20 ಸಾವಿರದಿಂದ ಪ್ರಾರಂಭಗೊಳ್ಳುವ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಬೆಲೆ ಲಕ್ಷಕ್ಕೂ ಮೀರಿರುತ್ತದೆ.
ಈ ಮಧ್ಯೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳು ಅಲಂಕಾರಕ್ಕಾಗಿ ಮಾಡುವ ವೆಚ್ಚ ಹೇಳತೀರದು. ಆಕರ್ಷಕ ಗಣಪತಿ ಮೂರ್ತಿಗಳ ವಿಗ್ರಹಕ್ಕೆ ಈ ಅಲಂಕಾರ ಮತ್ತಷ್ಟು ಮೆರಗು ನೀಡುತ್ತದೆ.
'ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ...'
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮಹಾನಗರಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಾರ್ವಜನಿಕ ಗಣಪತಿ ಮೂರ್ತಿಗಳಿಗೆ ಭಾರಿ ಖ್ಯಾತಿ. ಈ ಮೂರ್ತಿಗಳು ಹಾಗೂ ಅಲಂಕಾರ ವೀಕ್ಷಣೆಗೆ ಪ್ರತಿ ವರ್ಷ ಲಕ್ಷಾಂತರ ಜನ ಈ ಮಹಾನಗರಗಳಿಗೆ ಭೇಟಿ ನೀಡುತ್ತಾರೆ. ಸಾಮಾನ್ಯವಾಗಿ 11 ದಿನಗಳವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ಸಂಜೆಯಾಯಿತೆಂದರೆ ಸಾಕು, ಈ ಮಹಾನಗರಗಳಲ್ಲಿನ ಜನ ದಟ್ಟಣೆ ಸಾಮಾನ್ಯ ದಿನಗಳಿಗಿಂತಲೂ ಐದಾರು ಪಟ್ಟು ಹೆಚ್ಚುತ್ತದೆ. ಕುಟುಂಬ ಸಮೇತರಾಗಿ ಸಾರ್ವಜನಿಕ ಗಣೇಶ ವೀಕ್ಷಣೆಗೆ ಸುತ್ತಲಿನ ಪ್ರದೇಶದ ಜನರು ನಗರಗಳಿಗೆ ಭೇಟಿ ನೀಡುತ್ತಾರೆ.
ಇನ್ನೂ ಪ್ರತಿ ವರ್ಷ ವಿವಿಧ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘಟನೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಕಾರ್ಯವೂ ನಡೆಯುತ್ತದೆ. ಉತ್ತಮ ಮೂರ್ತಿ, ಅಲಂಕಾರ ಮತ್ತಿತರ ಬಹುಮಾನಗಳನ್ನು ನೀಡುವ ಮೂಲಕ ಮುಂಬರುವ ವರ್ಷ ಇನ್ನೂ ಹೆಚ್ಚು ಅಂದದ ಗಣಪತಿ ಪ್ರತಿಷ್ಠಾಪಿಸಲೆಂಬ ಪ್ರೋತ್ಸಾಹ ಮೂರ್ತಿ ತಯಾರಕರು ಹಾಗೂ ಸಂಘ-ಸಂಸ್ಥೆಗಳಿಗೆ ದೊರೆಯುತ್ತದೆ.
'ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ...'
ಹುಬ್ಬಳ್ಳಿಯೊಂದರಲ್ಲಿಯೇ ಪ್ರತಿ ವರ್ಷ 243 ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ನಗರ ಪ್ರದೇಶಗಳಷ್ಟೇ ಕಾಣಿಸುತ್ತಿದ್ದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಲಂಕರಿಸಿದ ಗಣೇಶ ಮೂರ್ತಿಗಳು ಕಳೆದ ಕೆಲ ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಣಿಸುತ್ತಿವೆ. ಗಣೇಶ ಮೂರ್ತಿಗಳ ಪ್ರದರ್ಶನದೊಂದಿಗೆ ಪೌರಾಣಿಕ ಕಥೆಗಳ ಪ್ರದರ್ಶನ ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಣಿಸುತ್ತಿದೆ. ಒಟ್ಟಿನಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ವೈವಿಧ್ಯ ರೂಪದ ಗಣೇಶ ಭಕ್ತರ ಹಾಗೂ ಸಾರ್ವಜನಿಕರಿಗೆ ದರ್ಶನ ನೀಡಲು ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿರಾಜಮಾನನಾಗಲಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

