ಧಾರವಾಡ: ಸಾಧಾರಣ ಮಳೆ
ಧಾರವಾಡ: ಇನ್ನೇನು ಮಳೆ ಬರದಿದ್ದರೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತಿದ್ದ ಬೆಳೆ ಒಣಗಿ ಹೋಗಲಿದೆ ಎನ್ನುವ ಬೇಸರದಲ್ಲಿದ್ದ ರೈತರಿಗೆ ಕಳೆದ ಒಂದು ವಾರದಿಂದ ಸಾಧಾರಣ ಪ್ರಮಾಣದಲ್ಲಿ ಆದ ಮಳೆ ಹೊಸ ಕಳೆ ತಂದಿದೆ. ಪ್ರಸ್ತುತ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆ ಎನ್ನದಿದ್ದರೂ ಸಾಧಾರಣ ಪ್ರಮಾಣದಲ್ಲಿ ದಿನಕ್ಕೆ ಒಂದೆರಡು ಬಾರಿ ಜೋರಾಗಿ ಸುರಿದು ಹೋಗುತ್ತಿದೆ. ಜಿಲ್ಲೆಯ ವಿವಿಧೆಡೆ ಮಳೆಯಿಂದ ಬೆಳೆಗಳು ಮರಳಿ ಜೀವ ಪಡೆದುಕೊಂಡಿವೆ ಹೊರತು ಕೆರೆ ಕಟ್ಟೆಗಳು ತುಂಬಿ ಹರಿಯುವಷ್ಟು ಮಳೆಯಾಗಿಲ್ಲ. ಕೃಷಿ ಇಲಾಖೆ ಅಂಕಿ ಅಂಶದ ಪ್ರಕಾರ ನಿಗದಿತ ಪ್ರಮಾಣದ ಮಳೆ ಇನ್ನೂ ಶೇ. 30ರಷ್ಟಾಗಬೇಕಿದೆ.
ಟೊಯೋಟಾದಲ್ಲಿ ಕಳ್ಳತನ
ಧಾರವಾಡ: ಇಲ್ಲಿಯ ರಾಯಾಪುರದ ಟೊಯೋಟಾ ಕಂಪನಿಯಲ್ಲಿ ಕಳ್ಳತನವಾದ ಘಟನೆ ನಗರದ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಕಂಪೆನಿಗೆ ಬೀಗ ಹಾಕಿ ಕೆಲಸಗಾರರು ಮನೆಗೆ ತೆರಳಿದ್ದಾರೆ. ತಡರಾತ್ರಿ ಕೀಲಿ ಮುರಿದು ರು. 48 ಸಾವಿರ ಮೌಲ್ಯದ ಎಲ್ಸಿಡಿ ಟಿ.ವಿ. ಸೇರಿದಂತೆ ವಿವಿಧ ವಸ್ತು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಶವ ದೊರೆತಿದ್ದು, ಗುರುತು ಪತ್ತೆಗೆ ಸಹಕರಿಸಲು ಕೇಶ್ವಾಪುರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ. ಶನಿವಾರ ದೇಹ ದೊರೆತಿದ್ದು, 5.4 ಅಡಿ ಎತ್ತರ, ಸದೃಢ ಮೈಕಟ್ಟು, ದುಂಡು ಮುಖ ಹೊಂದಿದ್ದು, ಹಾಫ್ ಟೀ ಶರ್ಟ್, ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ಕುರಿತಂತೆ ಮಾಹಿತಿ ಇದ್ದಲ್ಲಿ ಕೇಶ್ವಾಪುರ ಪೊಲೀಸ್ ದೂ. 0863-22233518, 2233555ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಬಸ್ ಡಿಕ್ಕಿ: ಓರ್ವ ಸಾವು
ಕಲಘಟಗಿ: ಪಟ್ಟಣದ ಮಾಚಾಪುರ ತಾಂಡಾ ಬಳಿಯ ಹೆದ್ದಾರಿಯಲ್ಲಿ ಅಕ್ಕಿ ಲಾರಿಯೊಂದಕ್ಕೆ ಹಿಂದಿನಿಂದ ಬಂದ ವೋಲ್ವೋ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಬಳಿಯಲ್ಲಿ ಕುಳಿತಿದ್ದ ಶಬ್ಬೀರ ಅಬ್ದುಲ್ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಶನಿವಾರ ಬೆಳಗಿನ ಜಾವ 4ರ ಸುಮಾರಿಗೆ ನಡೆದಿದೆ. ಗಂಗಾವತಿಯಿಂದ ಕಾಸರಗೋಡಿಗೆ ಹೊರಟಿದ್ದ ಅಕ್ಕಿ ಲಾರಿಗೆ ಹಿಂದಿನಿಂದ ಬಂದ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ. ಈ ಕುರಿತು ಲಾರಿ ಚಾಲಕ ಬದಾಮಿಯ ಹನುಮಂತ ಯಲ್ಲಪ್ಪ ಹೊನ್ನಳ್ಳಿ ಕಲಘಟಗಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಐ ಅಮರೇಶ ಬಾರಕೇರ್ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು ಚಲೋ
ಕಲಘಟಗಿ: ವಿವಿಧ ಬೇಡಿಕೆ ಈಡೇರಿಕೆಗೆಆಗ್ರಹಿಸಿ ಜು. 23ರಂದು ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ. ತಾಲೂಕಿನ ಗಂಗಾಮತಸ್ಥ ಸಮಾಜದ ಜನತೆ ಪಾಲ್ಗೊಳ್ಳಬೇಕೆಂದು ತಾಲೂಕು ಸಮಾಜದ ಅಧ್ಯಕ್ಷ ಯಲ್ಲಪ್ಪ ಆರ್. ಮೊರಬದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಹೊರಟು ಸಮಾಜದ ವಿವಿಧ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ನೀಡಿ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ಗುರುಪೂರ್ಣಿಮೆ ಉತ್ಸವ
ಧಾರವಾಡ: ಶ್ರೀ ಶಿರಡಿ ಸಾಯಿಬಾಬಾ ಸಂಸ್ಥೆ ವತಿಯಿಂದ ಇಲ್ಲಿನ ಕೆಲಗೇರಿ ರಸ್ತೆಯ ಬಳಿಯ ಸಾಯಿಬಾಬ ದೇವಸ್ಥಾನದಲ್ಲಿ ಜು. 22ರಂದು ಗುರುಪೂರ್ಣಿಮೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವ ಅಂಗವಾಗಿ ಸಾಯಿ ಸತ್ಯನಾರಾಯಣ ವಿಶೇಷ ಪೂಜೆ, ಧೂಪಾರ್ತಿ, ಶೇಜಾರತಿ, ಅನ್ನಸಂತರ್ಪಣೆ ನಡೆಯಲಿದೆ. ಸಮಸ್ತ ಸದ್ಭಕ್ತರು ಉತ್ಸವದಲ್ಲಿ ಭಾಗಹಿಸಬೇಕೆಂದು ಸಂಸ್ಥೆ ಕೋರಿದೆ.
ರೈತ ಹುತಾತ್ಮ ದಿನ: ಇಂದು ಮದ್ಯ ಮಾರಾಟ ನಿಷೇಧ
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನಾದ್ಯಂತ ರೈತ ಹುತಾತ್ಮರ ದಿನವನ್ನು ಆಚರಿಸುವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜು. 21ರಂದು ಬೆಳಗ್ಗೆ 6ರಿಂದ ಸಂಜೆ 8ರ ವರೆಗೆ ಮದ್ಯಪಾನ ಮತ್ತು ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಆದೇಶ ಹೊರಡಿಸಿದ್ದಾರೆ. ಅಂದು ನವಲಗುಂದ ತಾಲೂಕಿನಾದ್ಯಂತ ಮದ್ಯದ ಅಂಗಡಿಗಳು ಬೀಯರ್, ಬಾರ್ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಬೇಕು, ಪರಿಸ್ಥಿತಿಗನುಗುಣವಾಗಿ ಸಾರ್ವಜನಿಕ ಶಾಂತತೆ ಕಾಯ್ದುಕೊಳ್ಳಲು ಅಬಕಾರಿ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
ಇಂದು ಪ್ರಾರ್ಥನೆ
ಹುಬ್ಬಳ್ಳಿ: ಇಲ್ಲಿನ ಸ್ಟಿಫನ್ ಗುಂಜಾಳ ಮ್ಯೂಜಿಕ್ ಟ್ರೂಪ್ದಿಂದ ಜು. 21ರ ಮಧ್ಯಾಹ್ನ 1ಕ್ಕೆ ಉಣಕಲ್ ಗುರುಕುಲದಲ್ಲಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಸಮಾಧಿ ಎದುರು ಪ್ರಾರ್ಥನೆ ನಡೆಯಲಿದೆ. ದಿ. ಗಂಗೂಬಾಯಿ ತಮ್ಮ ಜೀವಿತಾವಧಿಯಲ್ಲಿ ಪಾಶ್ಚಾತ್ಯ ವಾದ್ಯ ಗಿಟಾರ್ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು. ಆದ್ದರಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಗೀತ ಕಾರ್ಯಕ್ರಮದಲ್ಲಿ ಸ್ಟಿಫನ್ ಲುಂಜಾಳ, ನ್ಯೂವೆಲ್, ಸುನಿಲ ಮಹಾಡೆ, ಇತರ ಗಿಟಾರ್ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಇಂದು ಉಚಿತ ಚಿಕಿತ್ಸೆ
ಹುಬ್ಬಳ್ಳಿ: ಇಲ್ಲಿನ ಸಿದ್ದೇಶ್ವರ ಪಾರ್ಕ್ನಲ್ಲಿನ ಸ್ಪರ್ಶ ಆಯುರ್ವೇದ ಮತ್ತು ಪಂಚಕರ್ಮ ಆಸ್ಪತ್ರೆಯಲ್ಲಿ ಜು. 21ರ ಬೆಳಗ್ಗೆ 10ರಿಂದ ಮೂಲವ್ಯಾಧಿ, ಸಂಧಿವಾತ, ಅಸ್ತಮಾ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ 92412 03043ನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

